ಮಡಿಕೇರಿ: ರಾಜ್ಯದ ಮೊದಲ ಅಂತಾ ರಾಷ್ಟ್ರೀಯ ಮಹಿಳಾ ಹಾಕಿ ರೆಫ್ರಿ, ಕೊಡಗಿನ ಪುಚ್ಚಿ ಮಂಡ ಅನುಪಮಾ (41) ಕೋವಿಡ್‌ನಿಂದ ಮೃತ ಪಟ್ಟಿದ್ದಾರೆ.
ಕಳೆದ ಒಂದು ವಾರದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಬೆಳಗ್ಗೆ ಕೊನೆಯುಸಿರೆಳೆದರು.
ಕೊಡಗಿನ ಬಿಟ್ಟಂಗಾಲ ಗ್ರಾಮದ ಅನುಪಮಾ ಅವರು ನೆಲಜಿಯ ಮಿಥುನ್ ಮಂದಣ್ಣ ಅವರನ್ನು ವಿವಾಹವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ವೀರಾಜ ಪೇಟೆಯ ಕಾವೇರಿ ಪ್ರಾಥಮಿಕ ಶಾಲೆ, ಕೂಡಿಗೆ ಕ್ರೀಡಾಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದರು. ಬಳಿಕ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್‌ನಲ್ಲಿದ್ದುಕೊಂಡು ವೀರಾಜಪೇಟೆಯ ಕಾವೇರಿ ಮಹಿಳಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ್ದರು.
ಇದನ್ನೂ ಓದಿ :ಎಬಿಡಿ, ಮ್ಯಾಕ್ಸಿ ಬ್ಯಾಟಿಂಗ್ ಮ್ಯಾಜಿಕ್; ಆರ್‌ಸಿಬಿ ಹ್ಯಾಟ್ರಿಕ್
ವಿದ್ಯಾರ್ಥಿ ಜೀವನದಲ್ಲೇ ಉತ್ತಮ ಹಾಕಿಪಟುವಾಗಿದ್ದ ಅನುಪಮಾ, ಕೊಡಗಿನ ಏಕೈಕ ಹಾಗೂ ದೇಶದ ಪ್ರಪ್ರಥಮ ಅಂತಾರಾಷ್ಟ್ರೀಯ ವನಿತಾ ಹಾಕಿ ರೆಫ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸುಮಾರು 50 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೆಫ್ರಿಯಾಗಿ ಕರ್ತವ್ಯ ನಿಭಾಯಿಸಿದ್ದರು.