Advertisement

ಅಂತಾರಾಷ್ಟ್ರೀಯ ಈಜುಕೊಳಕ್ಕೆ ಹೊಸ ರಂಗು!

03:57 PM Aug 22, 2022 | Team Udayavani |

ಬಾಗಲಕೋಟೆ: ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಇಲ್ಲಿನ ನವನಗರದ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳಕ್ಕೆ ಹೊಸ ಮೆರಗು ನೀಡಿದ್ದು, ಸೋಮವಾರದಿಂದ ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ.

Advertisement

ಹೌದು, ನವನಗರ ಯೂನಿಟ್‌-1ರ ನಿರ್ಮಾಣದ ವೇಳೆಯೇ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಈಜುಕೊಳ ನಿರ್ಮಿಸಲಾಗಿತ್ತು.

ಒಟ್ಟು 6 ರಿಂದ 18 ಅಡಿವರೆಗೆ ಅಳವಿದ್ದು, ಡೈವ್‌ ಹೊಡೆಯಲೂ ಅವಕಾಶವಿತ್ತು. ಆದರೆ, ಕಳೆದ 2008ರಲ್ಲಿ ವ್ಯಕ್ತಿಯೊಬ್ಬರ ದುರ್ಬಮರಣ, ಕೊಲೆ ಮಾಡಿ ಈ ಈಜುಕೊಳದಲ್ಲಿ ಎಸೆದ ಘಟನೆಗಳಿಂದ ಸ್ಥಗಿತಗೊಂಡಿದ್ದ ಈಜುಕೊಳ, ಪುನಃ 2012ರಲ್ಲಿ ಆರಂಭಿಸಲಾಗಿತ್ತು. ಸೂಕ್ತ ನಿರ್ವಹಣೆಯ ಕೊರತೆಯಿಂದ ಮತ್ತೆ ಸ್ಥಗಿತಗೊಂಡಿತ್ತು.

ಪ್ರತಿ ಎರಡರಿಂದ 3 ವರ್ಷಕ್ಕೊಮ್ಮೆ ಸ್ಥಗಿತಗೊಳ್ಳುತ್ತಿದ್ದ ಈ ಈಜುಕೊಳವನ್ನು ಒಂದಷ್ಟು ಪುನರ್‌ ಬದಲಾವಣೆ ಮಾಡಿ, ಕಳೆದ 2015ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಪಾಟೀಲ, ಸ್ವತಃ ಈಜುವ ಮೂಲಕ ಉದ್ಘಾಟಿಸಿದ್ದರು. ಆಗಲೂ ಸೂಕ್ತ ನಿರ್ವಹಣೆ ಕೊರತೆ, ಅತಿಯಾದ ಆಳವಾಗಿರುವ ಹಿನ್ನೆಲೆಯಲ್ಲಿ ಜನರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಇಂತಹ ಹಲವು ಸಮಸ್ಯೆಗಳ ಹಿನ್ನೆಲೆಯಲ್ಲಿ ಕಳೆದ 2018ರಿಂದಲೂ ಈಜುಕೊಳ ಪುನಃ ಸ್ಥಗಿತಗೊಂಡಿತ್ತು.

1.22 ಕೋಟಿ ಖರ್ಚು: 18 ಅಡಿವರೆಗೆ ಆಳವಾಗಿದ್ದ ಈಜುಕೊಳವನ್ನು 6.50 ಅಡಿಗೆ ಪುನರ್‌ ನಿರ್ಮಾಣ, ನೀರು ಲಿಕೇಜ್‌ ಆಗುವುದನ್ನು ತಡೆಯುವ ಜತೆಗೆ ಸಂಪೂರ್ಣ ಪುನರ್‌ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಡಿಎಂಎಫ್‌ನ 1.22 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸಧ್ಯ ಹೊಸ ಕಳೆಯೊಂದಿಗೆ ಜನರ ಸೇವೆಗೆ ಸಿದ್ಧವಾಗಿರುವ ಈಜುಕೊಳ, ಸೋಮವಾರದಿಂದ ಮತ್ತೆ ಸೇವೆಗೆ ಮುಕ್ತವಾಗಲಿದೆ. ಅಲ್ಲದೇ ಮಕ್ಕಳಿಗಾಗಿ ಇದೇ ಈಜುಕೊಳದ ಪಕ್ಕದಲ್ಲಿ ಪ್ರತ್ಯೇಕ ಈಜುಕೊಳ ನಿರ್ಮಿಸಲಾಗಿದೆ. ಅದೂ ಕೂಡ ಸೋಮವಾರದಿಂದಲೇ ಆರಂಭಗೊಳ್ಳಲಿದೆ.

Advertisement

ಪುರುಷ-ಮಹಿಳೆಯರಿಗೆ ಪ್ರತ್ಯೇಕ: ಈಜುಕೊಳದಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸಮಯ ನಿಗದಿ ಮಾಡಲಾಗಿದೆ. ಮುಖ್ಯವಾಗಿ ಈಜುಕೊಳಕ್ಕೆ ಒಟ್ಟು 8 ಜನ ವಿವಿಧ ಸಿಬ್ಬಂದಿ ನೇಮಕ ಮಾಡಲಾಗಿದೆ. ಈಜು ತರಬೇತಿದಾರ, ಲೈಫ್‌ಗಾರ್ಡ್‌, ಸ್ವತ್ಛತಾಗಾರರು, ಕಾವಲುಗಾರ ಹೀಗೆ ಹಲವರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿದ್ದು, ಮಹಿಳಾ ಲೈಫ್‌ಗಾರ್ಡ್‌ ಮಾತ್ರ ಇನ್ನೂ ನೇಮಕಗೊಂಡಿಲ್ಲ. ಅವರ ನೇಮಕದ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿ ಒಂದು ಗಂಟೆಯ ಅವಧಿ, ತಿಂಗಳು ಹಾಗೂ ಒಂದು ವರ್ಷ ಹೀಗೆ ಮೂರು ವಿಭಾಗದಲ್ಲಿ ಶುಲ್ಕ ನಿಗದಿ ಮಾಡಲಾಗಿದೆ. ಮಕ್ಕಳು, ವೃದ್ಧರು ಹಾಗೂ ಸರ್ಕಾರಿ ನೌಕರರಿಗೆ ಶುಲ್ಕದಲ್ಲಿ ಅರ್ಧದಷ್ಟು ವಿನಾಯಿತಿ ಇದೆ. ಒಂದು ಗಂಟೆಗೆ 100, ತಿಂಗಳಿಗೆ 1200 (16 ವರ್ಷದೊಳಗಿನ, 60 ವರ್ಷ ಮೇಲ್ಪಟ್ಟವರಿಗೆ 600, ಸರ್ಕಾರಿ ನೌಕರರಿಗೂ 600 ರೂ.) ಹಾಗೂ ಒಂದು ವರ್ಷಕ್ಕೆ 12 ಸಾವಿರ ಶುಲ್ಕ ನಿಗದಿಯಾಗಿದೆ. ಈಜು ತರಬೇತಿ ಪಡೆಯಲು ಬರುವವರಿಗೆ ಮಾಸಿಕ 1800 ರೂ. ಶುಲ್ಕ ನಿಗದಿ ಮಾಡಲಾಗಿದೆ ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಗೂಡುನವರ ಉದಯವಾಣಿಗೆ ತಿಳಿಸಿದರು.

ನವನಗರ ಕ್ರೀಡಾಂಗಣ ಆವಣರದಲ್ಲಿರುವ ಈಜುಕೊಳವನ್ನು ಸಂಪೂರ್ಣ ಪುನರ್‌ ನಿರ್ಮಾಣ ಮಾಡಿದ್ದು, ಇದರಲ್ಲಿ ಶಾಸಕ ಡಾ| ವೀರಣ್ಣ ಚರಂತಿಮಠ, ಸಚಿವ ಗೋವಿಂದ ಕಾರಜೋಳರ ವಿಶೇಷ ಆಸಕ್ತಿ ಬಹಳಷ್ಟಿದೆ. ಒಟ್ಟು 1.22 ಕೋಟಿ ಖರ್ಚು ಮಾಡಿದ್ದು, ಮಕ್ಕಳಿಗಾಗಿ ಪ್ರತ್ಯೇಕ ಈಜುಕೊಳ ನಿರ್ಮಿಸಲಾಗಿದೆ. ಸೋಮವಾರದಿಂದ ಆರಂಭಗೊಳ್ಳಲಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಇದ್ದು, ಶುಲ್ಕ ನಿಗದಿ, ತರಬೇತಿದಾರರ ನೇಮಕ ಮಾಡಿಕೊಳ್ಳಲಾಗಿದೆ. –ಗುರುಪಾದ ಗೂಡೂನವರ ಸಹಾಯಕ ನಿರ್ದೇಶಕ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next