ಕಿರುಚಿತ್ರ ನಿರ್ದೇಶನ, ನಿರ್ಮಾಣ ಮಾಡುವ ಪ್ರತಿಭಾವಂತರಿಗೆ ಅನೇಕ ವೇದಿಕೆಗಳಿವೆ. ಆ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಪ್ರತಿಭಾವಂತರ ಸಂಖ್ಯೆಯೂ ದಿನ ಕಳೆದಂತೆ ಹೆಚ್ಚುತ್ತಿದೆ. ಕಿರುಚಿತ್ರ ಮಾಡುವ ಸಿನಿ ಪ್ರೇಮಿಗಳಿಗೆಂದೇ ಹಲವು ಶಾರ್ಟ್‌ಫಿಲ್ಮ್ ಫೆಸ್ಟಿವಲ್ ನಡೆಯುತ್ತಿವೆ. ಆ ಸಾಲಿಗೆ ಈಗ ಸ್ಟೋನ್ಸ್ ಮಂಕಿ ಎಂಟರ್‌ಟೈನ್ ಮೆಂಟ್ ಇಂಟರ್‌ನ್ಯಾಷನಲ್ ಶಾರ್ಟ್ ಫಿಲ್ಮ್ ಫೆಸ್ಟಿವಲ್ ಕೂಡ ಸೇರ್ಪಡೆಯಾಗಿದೆ.
ಇದು ಬೆಂಗಳೂರಿನಲ್ಲಿ ನಡೆಯುತ್ತಿರುವ ಎರಡನೇ ವರ್ಷದ ಕಿರುಚಿತ್ರೋತ್ಸವ. ಬೇರೆ ರಾಜ್ಯ, ವಿದೇಶಗಳಲ್ಲಿ ನಡೆಯುವ ಚಿತ್ರೋತ್ಸವಗಳಂತೆಯೇ ಈ ಕಿರುಚಿತ್ರೋತ್ಸವ ನಡೆಸುವ ಉದ್ದೇಶ ಆಯೋಜಕರಿಗಿದೆ. “ಸ್ಟೋನ್ಸ್ ಮಂಕಿ ಐಸ್‌ಕ್ರೀಮ್’ ಸಂಸ್ಥೆಯ ಮಾಲೀಕ ಡಾ.ಆಶ್ಲೇಷ ಅವರು ಮನರಂಜನೆ ಕ್ಷೇತ್ರದಲ್ಲೂ ಎಂಟ್ರಿಯಾಗಿ, ಹೊಸ ಪ್ರತಿಭಾವಂತರಿಗೊಂದು ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಕಳೆದ ವರ್ಷ ಯಶಸ್ವಿಯಾಗಿ ನೆರವೇರಿದ್ದ ಕಿರುಚಿತ್ರೋತ್ಸವ, ಈ ಬಾರಿ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.
ಎಲ್ಲೆಡೆಯಿಂದ ಈಗಾಗಲೇ 500 ಕ್ಕೂ ಹೆಚ್ಚು ಕಿರುಚಿತ್ರಗಳು ಬಂದಿದ್ದು, ಆ ಪೈಕಿ, ನೋಡುವಂತಹ 300 ಕಿರುಚಿತ್ರಗಳನ್ನು ಆಯ್ಕೆ ಮಾಡಿ, ಅದರಲ್ಲಿ ಅಂತಿಮವಾಗಿ 30 ಕಿರುಚಿತ್ರಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ. 30 ನಿಮಿಷದ ಒಳಗಿರುವ ಕಿರುಚಿತ್ರಗಳು ಸ್ಪರ್ಧೆಯಲ್ಲಿದ್ದು, ಈ ಕಿರುಚಿತ್ರೋತ್ಸವದಲ್ಲಿ ಜ್ಯೂರಿಗಳಾಗಿ ನಿರ್ದೇಶಕರಾದ ದಯಾಳ್ ಪದ್ಮನಾಭ್, ರೋಹಿತ್ ಪದಕಿ, ಸಂಗೀತ ನಿರ್ದೇಶಕ ಗಿರಿಧರನ್ ದಿವಾನ್ ಹಾಗು ಜೋಗಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಒಟ್ಟು ಎಂಟು ವಿಭಾಗದಲ್ಲಿ ಪ್ರಶಸ್ತಿಗಳನ್ನು ವಿತರಿಸಲು ಆಯೋಜಕರು ತೀರ್ಮಾನಿಸಿದ್ದಾರೆ.
ಎರಡು ನಿಮಿಷದಿಂದ ಹಿಡಿದು, ಇಪ್ಪತ್ತೈದು ನಿಮಿಷದವರೆಗಿನ ಕಿರುಚಿತ್ರಗಳು ಸ್ಪರ್ಧೆಯಲ್ಲಿವೆ. ನಿರ್ದೇಶನ, ನಟ, ನಟಿ, ಸಂಕಲನ, ಸಂಗೀತ, ಪೋಷಕ ನಟ ಮತ್ತು ಛಾಯಾಗ್ರಾಹಣ ವಿಭಾಗದಲ್ಲಿ ಪ್ರಶಸ್ತಿ ವಿತರಿಸಲಾಗುವುದು. ಈಗಾಗಲೇ ಆಯ್ಕೆ ಮಾಡಿರುವ 30 ಕಿರುಚಿತ್ರಗಳ ಪೈಕಿ ಯಾವ ವಿಭಾಗದಲ್ಲಿ ಪ್ರಶಸ್ತಿ ಪಡೆದಿವೆ ಎಂಬುದನ್ನು ಆ.27 ರ ಸಂಜೆ ಕಬ್ಬನ್ ಪಾರ್ಕ್ ಸಮೀಪದ ಕೆಜಿಎಸ್ ಕ್ಲಬ್‌ನಲ್ಲಿ ಘೋಷಣೆ ಮಾಡಲು ಆಯೋಜಕರು ತೀರ್ಮಾನಿಸಿದ್ದಾರೆ. ಅಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ನಡೆಯಲಿದೆ. ಇನ್ನೊಂದು ವಿಶೇಷವೆಂದರೆ, ಈ ಕಿರುಚಿತ್ರೋತ್ಸವಕ್ಕೆ ನಟಿ ಸೋನುಗೌಡ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷವಾಗಿರುವ ಚಿತ್ರ ಪ್ರದರ್ಶನ ಕೂಡ ಅಂದು ನಡೆಯಲಿದೆ ಎಂಬುದು ಆಯೋಜಕರ ಮಾತು.