Advertisement

ಹುಬ್ಬಳ್ಳಿ  ಜಲಯೋಧನಿಗೆ ಜಾಗತಿಕ ಮಾನ್ಯತೆ

03:25 PM Mar 27, 2019 | Naveen |
ಹುಬ್ಬಳ್ಳಿ: ಕೊಳವೆಬಾವಿಗಳನ್ನು ಮರುಪೂರಣ ಮಾಡುತ್ತ ಜಲಜಾಗೃತಿ ಮಾಡುತ್ತಿರುವ ಸಿಕಂದರ್‌ ಮೀರಾನಾಯಕ್‌ ಅವರಿಗೆ ವಿಶ್ವ ಮಟ್ಟದ ಪ್ರಶಸ್ತಿ ಬಂದಿದೆ. ಇರಾನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನರ್ಜಿ ಗ್ಲೋಬ್‌ ಅವಾರ್ಡ್‌ ಫಾರ್‌ ಸಸ್ಟೆನೆಬಲಿಟಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವಿಶ್ವದ 180 ರಾಷ್ಟ್ರಗಳು ಪಾಲ್ಗೊಂಡ ಸ್ಪರ್ಧೆಯಲ್ಲಿ ಸಂಕಲ್ಪ ಗ್ರಾಮೀಣಾಭಿವೃದ್ಧಿ ಸೊಸೈಟಿಯ ಸಂಸ್ಥಾಪಕ ಸಿಕಂದರ್‌ ಅವರ ಜಲಸಂರಕ್ಷಣೆ ಕಾರ್ಯವನ್ನು ಪರಿಗಣಿಸಿ 1.5 ಲಕ್ಷ ನಗದು ಒಳಗೊಂಡ ಪ್ರಶಸ್ತಿ ನೀಡಲಾಗಿದೆ. ಜಲ, ವಾಯು, ಸುಸ್ಥಿರ ಇಂಧನ ಹಾಗೂ ಸ್ಮಾರ್ಟ್‌ಸಿಟಿ ವಿಭಾಗಗಳಲ್ಲಿ ಪರಿಸರ ಮಾಲಿನ್ಯ ಸಮಸ್ಯೆಗಳಿಗೆ ನೀಡುವ ಪರಿಹಾರಗಳನ್ನು ಆಧರಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಜಲ ವಿಭಾಗದಲ್ಲಿ ಬಾಂಗ್ಲಾದೇಶ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಹಾಗೂ ಭಾರತ ಕೊನೆಯ ಸುತ್ತಿಗೆ ಆಯ್ಕೆಗೊಂಡಿದ್ದವು. ಅದರಲ್ಲಿ ಭಾರತದ ಸಿಕಂದರ್‌ ಆಯ್ಕೆಯಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಡಿಮೆ ವೆಚ್ಚ, ದೀರ್ಘ‌ ಬಾಳಿಕೆ, ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುತ್ತಿರುವುದನ್ನು ಪರಿಗಣಿಸಿ ಸಿಕಂದರ್‌ ಅವರ “ಮಳೆ ಕೊಯ್ಲು ಮೂಲಕ ಕೊಳವೆ ಬಾವಿ ಮರುಪೂರಣ’ ಪ್ರಾಜೆಕ್ಟ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕೊಳವೆ ಬಾವಿಗಳ ಸುತ್ತ ನೀರು ಮರಳಿ ಭೂತಾಯಿ ಒಡಲಿಗೆ ಇಳಿಯುವಂತೆ ಮಾಡಿ ಬೋರ್‌ವೆಲ್‌ ರಿಚಾರ್ಜ್‌ ಕಾರ್ಯದಲ್ಲಿ ಸಿಕಂದರ್‌ ತೊಡಗಿದ್ದಾರೆ. ಸಿಕಂದರ್‌ ಅವರು ಸಂಸ್ಥಾಪಕರಾಗಿರುವ ಸಂಕಲ್ಪ
ಗ್ರಾಮೀಣಾಭಿವೃದ್ಧಿ ಸಂಸ್ಥೆ ದೇಶದ 10 ರಾಜ್ಯಗಳಲ್ಲಿ ಜಲ ಮರುಪೂರಣ ಕಾರ್ಯ ಮಾಡುತ್ತಿದೆ. ಈವರೆಗೆ 1500ಕ್ಕೂ ಹೆಚ್ಚು ಬೋರ್‌ವೆಲ್‌ಗ‌ಳನ್ನು ರಿಚಾರ್ಜ್‌ ಮಾಡಿದೆ. ಪ್ರಸಕ್ತ ವರ್ಷ 400ರಿಂದ 500 ಬೋರ್‌ವೆಲ್‌ ರಿಚಾರ್ಜ್‌ ಮಾಡಲು ಉದ್ದೇಶಿಸಲಾಗಿದೆ. ಟ್ವಿನ್‌ ರಿಂಗ್‌ ಪದ್ಧತಿಯನ್ವಯ ಬೋರ್‌ ವೆಲ್‌ಗ‌ಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. ಬೋರ್‌ ಸಮೀಪದಲ್ಲಿ ಒಂದು ಗುಂಡಿ ಮಾಡಿ ನೀರು ಇಂಗುವಂತೆ ಮಾಡುವುದರಿಂದ ಬತ್ತಿ ಹೋಗಿರುವ ಕೊಳವೆಬಾವಿಗಳಿಂದ ನೀರು ಪಡೆಯಬಹುದಾಗಿದೆ.
24/7 ನೀರು ಪೂರೈಕೆ ಎಷ್ಟುದಿನ?:
ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ 24/7 ಮಲಪ್ರಭಾ ನೀರು ಪೂರೈಸಲು ಯೋಜನೆ ಅನುಷ್ಠಾನಗೊಂಡಿದೆ. ಆದರೆ ದಿನದಿಂದ ದಿನಕ್ಕೆ ನೀರು ಬಳಸುವವರ ಪ್ರಮಾಣ ಹೆಚ್ಚಾಗುತ್ತಿದೆ.
ಯೋಜನೆ ಎಷ್ಟು ದಿನ ನಡೆಯುವುದೋ ಸ್ಪಷ್ಟತೆಯಿಲ್ಲ. ಆದ್ದರಿಂದ ಬಾವಿಗಳ ನೀರು ಬಳಕೆಯಾಗಬೇಕು. ನದಿ ನೀರಿನ ಅವಲಂಬನೆ ಕಡಿಮೆಯಾಗಬೇಕು. ಮಳೆ ನೀರನ್ನು ಸಂಗ್ರಹಿಸಿಟ್ಟುಕೊಂಡು ಬಳಸಬೇಕು. ನಮ್ಮ ಹಿರಿಯರಿಗೆ ಜಲಸಂರಕ್ಷಣೆ ಅರಿವಿತ್ತು. ಅದಕ್ಕಾಗಿಯೇ ಪ್ರತಿ ಮನೆಯ ಹಿಂದೆ ಇಂಗು ಬಚ್ಚಲು ಇರುತ್ತಿದ್ದವು. ಈಗ ಅವು ಮಾಯವಾಗಿವೆ ಎಂದು ಸಿಕಂದರ್‌ ಹೇಳುತ್ತಾರೆ. ಪ್ರತಿನಿತ್ಯ ಪ್ರತಿ ವ್ಯಕ್ತಿ ಸುಮಾರು 130 ಲೀಟರ್‌ ನೀರು ಬಳಸುತ್ತಾನೆ. ಧಾರವಾಡ ಜಿಲ್ಲೆಯಲ್ಲಿ ಪ್ರತಿವರ್ಷ ಸರಾಸರಿ 970 ಮಿ.ಮೀ. ಮಳೆಯಾಗುತ್ತದೆ. 1000 ಚದುರ ಅಡಿ ವಿಸ್ತೀರ್ಣದ ಮನೆಯಿಂದ ಪ್ರತಿ ಮಳೆಗಾಲದಲ್ಲಿ 60,000 ಲೀಟರ್‌ ಮಳೆ ನೀರು ದೊರೆಯುತ್ತದೆ. ಅದರಲ್ಲಿ ಸ್ವಲ್ಪ ಭಾಗ ನೀರನ್ನಾದರೂ ಬಳಸಬೇಕು.
ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆ ಕೊಯ್ಲು: ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ ಮಾಡುವವರಿಗೆ ನೀರಿನ ಕೊರತೆ ಕಾಡುತ್ತದೆ. ಬೇಸಿಗೆಯಲ್ಲಿ ಕೊಳವೆಬಾವಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಾರೆ. ಇಲ್ಲಿ ಬೋರ್‌ ಮರುಪೂರಣ ವ್ಯವಸ್ಥೆ ಮಾಡಿಕೊಂಡರೆ ನೀರಿನ ಕೊರತೆ ಕಡಿಮೆ ಮಾಡಬಹುದಾಗಿದೆ. ಹುಬ್ಬಳ್ಳಿ- ಧಾರವಾಡದಲ್ಲಿ ಅಪಾರ್ಟ್‌ಮೆಂಟ್‌ ಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ದಿಸೆಯಲ್ಲಿ ಅರಿವು ಮೂಡಿಸುವುದು ಅವಶ್ಯವಾಗಿದೆ. ಆಸಕ್ತರು ತಮ್ಮ ಮನೆಗಳಲ್ಲಿ ಮಳೆ ಕೊಯ್ಲು ಮಾಡಿಸಿಕೊಳ್ಳಬಹುದಾಗಿದೆ. ಮಳೆ ಕೊಯ್ಲು ಮಾಡಲು ಆಸಕ್ತಿ ಇರುವವರು ಸಿಕಂದರ್‌ ಮೀರಾನಾಯಕ್‌ (9986840730) ಅವರನ್ನು ಸಂಪರ್ಕಿಸಬಹುದು.
ಅಂತಾರಾಷ್ಟ್ರೀಯ ಪ್ರಶಸ್ತಿಯಿಂದ ಸಂಕಲ್ಪ ಗ್ರಾಮೀಣಾಭಿವೃದ್ಧಿ ಸೊಸೈಟಿ ಜವಾಬ್ದಾರಿ ಹೆಚ್ಚಾಗಿದೆ. ಜಲಯಜ್ಞ ಇನ್ನಷ್ಟು ತೀವ್ರಗೊಂಡಿದೆ. ಕೆಲ ವರ್ಷಗಳ ಹಿಂದೆ ನಾವೇ ಜನರ ಬಳಿಗೆ ಹೋಗಿ ಜಲ ಸಂರಕ್ಷಣೆಗೆ ಮಳೆ ಕೊಯ್ಲು ಮಾಡುವಂತೆ, ಬೋರ್‌ ವೆಲ್‌ ರಿಚಾರ್ಜ್‌ ಮಾಡುವಂತೆ ಮನವಿ ಮಾಡುತ್ತಿದ್ದೆವು. ಆದರೆ ಈಗ ಮಳೆ ಕೊಯ್ಲು ಮಾಡಿಕೊಳ್ಳಲು ಆಸಕ್ತಿ ತೋರುವವರ ಸಂಖ್ಯೆ ಹೆಚ್ಚಾಗಿದೆ. ಜನರಲ್ಲಿ ನಿಧಾನವಾಗಿ ಜಾಗೃತಿ ಮೂಡುತ್ತಿದೆ. ಕೊಳವೆ ಬಾವಿ ಕೊರೆಸಿದರೆ ಸಾಲದು, ನೀರು ಮರುಪೂರಣ ಮಾಡುವ ವ್ಯವಸ್ಥೆ ಮಾಡುವುದು ಅಗತ್ಯ.
. ಸಿಕಂದರ್‌ ಮೀರಾನಾಯಕ್‌, 
ಸಂಕಲ್ಪ ಗ್ರಾಮೀಣಾಭಿವೃದ್ಧಿ ಸೊಸೈಟಿ ಸಂಸ್ಥಾಪಕ
ವಿಶ್ವನಾಥ ಕೋಟಿ
Advertisement

Udayavani is now on Telegram. Click here to join our channel and stay updated with the latest news.

Next