Advertisement
ಚಂದ್ರನ ವಿಶೇಷತೆಗಳೇನು ?ಬರಿಗಣ್ಣಿಗೆ ಚಂದ್ರ ಚಂದ. ಆದರೆ ದೂರದರ್ಶಕದಲ್ಲಿ ಚಂದ್ರನ ಮೇಲ್ಮೆ„ಯಲ್ಲಿ ಕುಳಿಗಳ, ಉಬ್ಬು, ತಗ್ಗು ಪ್ರದೇಶಗಳ ಅನಾವರಣವಾಗುವುದು ಕಂಡುಬರುತ್ತದೆ. ಇದು ಈ ಉಪಗ್ರಹದ ಬಗ್ಗೆ ಕುತೂಹಲ ಮೂಡಲು ಕಾರಣವಾಯಿತು. ವಿಜ್ಞಾನ ಮುಂದುವರಿದಂತೆ ಚಂದ್ರನ ಬಗ್ಗೆ ನಿಖರವಾದ ಮಾಹಿತಿಗಳನ್ನು ಕಲೆ ಹಾಕಲು ಸಾಧ್ಯವಾಯಿತು. ವಾತಾವರಣವಿಲ್ಲದ, ಭೂಮಿಯ ಸುತ್ತಲಿನ ತನ್ನ ಪರಿಭ್ರಮಣದಲ್ಲಿ ಒಂದೇ ಮೈ(ಪಾರ್ಶ್ವ)ಯನ್ನು ತೋರಿಸುತ್ತಿರುವ, ಚಂದ್ರನ ಗುರುತ್ವಾಕರ್ಷಣ ಶಕ್ತಿ ಭೂಮಿಗಿಂತ ಕಡಿಮೆ (ಭೂಮಿಯ 1/6 ರಷ್ಟು), ಚಂದ್ರನು ಭೂಮಿ ಮೇಲಿನ ಸಾಗರಗಳ ಉಬ್ಬರವಿಳಿತಗಳಿಗೆ ಕಾರಣ.
ಭೂಮಿ ನಮ್ಮ ತೊಟ್ಟಿಲಾದರೆ ಇದರ ಹೊರಗಿರುವ ಚಂದ್ರನನ್ನು ತಲುಪುವ ಬಗೆ ಹೇಗೆ? ಚಂದ್ರನಿರುವುದು ನೋಡಲು, ಯೋಚಿಸಲು, ಕನಸು ಕಾಣಲು ಹಾಗೂ ಶೋಧನೆಗೆ ಆಹ್ವಾನವೀಯಲು ಎಂಬ ಮನೋಭಾವ ದೊಂದಿಗೆ ವಿಜ್ಞಾನಿಗಳು ಚಂದ್ರ ಯಾನದ ಕನಸು ಕಂಡರು. ರಾಕೆಟ್ ಹಾಗೂ ಉಪಗ್ರಹಗಳ ತಂತ್ರಜ್ಞಾನ ಈ ಸವಾಲಿಗೆ ನೆರವಿತ್ತಿತು. ರಷ್ಯಾ ತನ್ನ ಉಪಗ್ರಹ ತಂತ್ರ ಜ್ಞಾನದಿಂದ ಅಂತರಿಕ್ಷಯಾನದ ಕನಸನ್ನು ನನಸಾಗಿಸಿ ದರೆ, ಅಮೆರಿಕ, ಚಂದ್ರನಲ್ಲಿ ಮಾನವ ಇಳಿಸುವ ಸವಾಲನ್ನು ಸ್ವೀಕರಿಸಿ ಅದರಲ್ಲಿ ಯಶಸ್ಸನ್ನು ಕಂಡಿತು. ನೀಲ್ ಆರ್ಮ್ಸ್ಟ್ರಾಂಗ್ 1969ರ ಜುಲೈ 20ರಂದು ಚಂದ್ರನ ಮೇಲೆ ಕಾಲಿಟ್ಟಾಗ ಉದ್ಗರಿಸಿದ್ದು, ಇದು ಮಾನವನಿಗೆ ಒಂದು ಪುಟ್ಟ ಹೆಜ್ಜೆ, ಆದರೆ ಮನುಕುಲಕ್ಕೆ ದೊಡ್ಡ ದಾಪುಗಾಲು (That’s one small step for man, one giant leap for mankind). ಅನಂತರ ಉಪಗ್ರಹ ತಂತ್ರ ಜ್ಞಾನದ ಮುಂಚೂಣಿಯ ಲ್ಲಿರುವ ಎಲ್ಲ ದೇಶಗಳು (ಭಾರತವೂ ಸೇರಿದಂತೆ) ಸ್ಪರ್ಧಾತ್ಮಕವಾಗಿ ವಿವಿಧ ಆಯಾಮಗಳಲ್ಲಿ ಚಂದ್ರ ಯಾನ ಗಳನ್ನು ಆರಂಭಿಸಿ ಹಲವು ರಹಸ್ಯಗಳನ್ನು ಭೇದಿಸಿ ದವು. ವಿಷಯ ಎಲ್ಲಿಯವರೆಗೆ ಈಗ ಮುಟ್ಟಿದೆ ಎಂದರೆ ಎಲಾನ್ ಮಸ್ಕ್ನಂತವರು ಬಾಹ್ಯಾಕಾಶಯಾನ ಮುಂದಿನ ದಿನಗಳಲ್ಲಿ ಸಾಮಾನ್ಯವಾಗುವ ಎಲ್ಲ ಲಕ್ಷಣಗಳಿವೆ ಎಂದಿದ್ದಾರೆ. ಅದಕ್ಕಾಗಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಚಂದ್ರನಲ್ಲಿ ವಸಾಹತು ಸ್ಥಾಪಿಸಿ, ಜೀವಿಸಲು ಸಾಧ್ಯವೇ, ಚಂದ್ರನನ್ನು ಬಾಹ್ಯಾಕಾಶ ಯಾನ ದಲ್ಲಿ ರಾಕೆಟ್ ಉಡಾವಣೆಗೆ ಉಪಯೋಗಿಸಿ ಕೊಂಡು ಉಪಗ್ರಹಗಳನ್ನು ಕಳುಹಿಸಬಹುದೇ ಎನ್ನುವುದರ ಸಾಧ್ಯತೆಗಳ ಬಗ್ಗೆ ಸಮಾ ಲೋಚನೆಗಳು ನಡೆಯುತ್ತಿವೆ.
Related Articles
ಅಮೆರಿಕದ ಗಗನಯಾತ್ರಿಗಳಾದ ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಎಡ್ವಿನ್ ಬಝ್ ಆಲ್ಡಿನ್ ಚಂದ್ರನ ಮೇಲೆ ಪ್ರಥಮವಾಗಿ ಜುಲೈ 20, 1969ರಂದು ಪಾದರ್ಪಣೆಗೈದಾಗ ಅವರ ಸಾಧನೆ ಮುಂದಿನ ದಿನಗಳ ಬೆಳವಣಿಗೆಗಳಿಗೆ ನಾಂದಿಯಾಗುತ್ತವೆಂಬ ನಿರೀಕ್ಷೆಯಿಂದ “giant leap for mankind’ ಎಂಬ ಉದ್ಗಾರ ತೆಗೆದಿದ್ದು ನಿಜವಾಯಿತು. ಇಂದು ಬಾಹ್ಯಾಕಾಶ ಯಾನ ಸೌರಮಂಡಲದಾಚೆಗೆ ಪ್ರಯಾಣಿಸುವ ಕನಸು, ಬಾಹ್ಯಾಕಾಶ ನಿಲ್ದಾಣಗಳ ಸ್ಥಾಪನೆ, ಬಾಹ್ಯಾಕಾಶ ನೌಕೆಗಳ ಮೂಲಕ ಉಪಗ್ರಹಗಳ ನಿರ್ವಹಣೆ, ವಿಶ್ವದ ಮೂಲೆ ಮೂಲೆಗಳ ಮಾಹಿತಿಗಳನ್ನು ಬಾಹ್ಯಾಕಾಶ ದೂರದರ್ಶಕದಿಂದ ಸಂಗ್ರಹಿಸುವ ಕಾರ್ಯಗಳು ತಂತ್ರ ಜ್ಞಾನದ ಅದ್ಭುತ ಬೆಳವಣಿಗೆಯಿಂದ ಸಾಧ್ಯ ವಾಗಿದೆ. ಜುಲೈ 20ನ್ನು ಆದ್ದರಿಂದ ಒಂದು ಚರಿತ್ರಾರ್ಹ ದಿನವೆಂದು ಪರಿಗಣಿಸಿ ಜಗತ್ತಿನ ಎಲ್ಲರಿಗೆ ಸ್ಫೂರ್ತಿ ದಾಯಕ ಸಂದೇಶವನ್ನು ನೀಡುವ ಸಲುವಾಗಿ ಯುಎನ್‌ಒ 2021ರಲ್ಲಿ ಪ್ರತೀ ವರ್ಷ ಜುಲೈ 20ನೇ ತಾರೀಖೀನಂದು ಅಂತಾರಾಷ್ಟ್ರೀಯ ಚಂದ್ರ ದಿನದ ಆಚರಣೆ ಯನ್ನು ಮಾಡಬೇಕೆಂದು ಕರೆ ನೀಡಿತು. ಅದರಂತೆ ಪ್ರಥಮ ಅಂತಾರಾಷ್ಟ್ರೀಯ ಚಂದ್ರ ದಿನಾ ಚಾರಣೆ ಈ ವರ್ಷ ಜುಲೈ 20ರಂದು (ಬುಧವಾರ) ನಡೆಯಲಿದೆ.
ಇದರ ಸಲುವಾಗಿ ಭಾರತವೂ ಸೇರಿದಂತೆ ವಿಶ್ವ ದೆಲ್ಲೆಡೆ ಚಂದ್ರನ ಬಗ್ಗೆ ಅರಿವು, ಇಷ್ಟರವರೆಗಿನ ಚಂದ್ರಾ ನ್ವೇಷಣೆಯ ಬಗ್ಗೆ ನಡೆದ ವಿವಿಧ ಯೋಜನೆಗಳು, ದೊರೆತ ಫಲಿತಾಂಶಗಳು, ಭವಿಷ್ಯದ ನಿರೀಕ್ಷೆಗಳು ಮುಂತಾದವುಗಳ ಬಗ್ಗೆ ಕಾರ್ಯಕ್ರಮಗಳನ್ನು ಆಯೋ ಜಿಸಲಾಗಿದೆ. ಭಾರತದಲ್ಲಿ ಇಸ್ರೋದ ಮುಂದಾಳತ್ವದಲ್ಲಿ ಹಲವು ಪೂರ್ವಭಾವಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ, ಆಸಕ್ತರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಚಂದ್ರನ ಬಗ್ಗೆ ಮಾಹಿತಿಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಪ್ರಯತ್ನಗಳನ್ನು ಮಾಡ ಲಾಗಿದೆ. ಜುಲೈ 20ರಂದು ಆಯ್ದ ವಿದ್ಯಾರ್ಥಿಗಳಿಗೆ ತಾರಾಲಯ ಮತ್ತು ವಿಜ್ಞಾನ ಕೆಂದ್ರಗಳಲ್ಲಿ ಚಂದ್ರನ ಬಗ್ಗೆ ಚಟುವಟಿಕೆಗಳು, ಚಂದ್ರ ಸಂಬಂಧಿತ ಚಿತ್ರ ಪ್ರದರ್ಶನ ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ಆನ್‌ಲೈನ್ ಉಪನ್ಯಾಸಗಳು ಹೀಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಉದ್ದೇಶ ಒಂದೇ ಚಂದ್ರನ ಬಗ್ಗೆ ಆದಷ್ಟು ವಿಷಯಗಳನ್ನು ತಿಳಿಯುವುದು. ಮುಂದಿನ ಯುವ ಪೀಳಿಗೆಗೆ ಬಾಹ್ಯಾಕಾಶ ಯಾನ ಮತ್ತು ಪರಿಶೋಧನೆಗಳಿಗೆ ಪ್ರೇರೇಪಿಸುವುದು.
Advertisement
ಈ ನಿಟ್ಟಿನಲ್ಲಿ ಪ್ರಥಮ ಅಂತಾರಾಷ್ಟ್ರೀಯ ಚಂದ್ರ ದಿನಾಚರಣೆ ಯುವ ಜನಾಂಗಕ್ಕೆ ಸೂಕ್ತ ವೇದಿಕೆ ಒದಗಿಸಿ ಸಂಶೋಧನೆ, ವೈಜ್ಞಾನಿಕ ಮನೋಭಾವ ರೂಪಿಸಲು ಮತ್ತು ಅವರು ಉತ್ತಮ ನಿರ್ವಹಣೆ ತೋರಲು ಮಾರ್ಗದರ್ಶನ ನೀಡುವುದೆಂದು ಹಾರೈಸೋಣ.
– ಡಾ| ಕೆ.ವಿ. ರಾವ್, ನಿರ್ದೇಶಕರು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ