Advertisement

ಡಾಲರ್‌ ಡಂಕಣಕ ರುಪಾಯಿ ತಕಧಿಮಿತ

09:47 AM Mar 26, 2019 | Sriram |

ಅಂತಾರಾಷ್ಟ್ರೀಯ ಮಾರ್ಕೆಟ್‌ನಲ್ಲಿ ಡಾಲರ್‌ ಮುಂದೆ ನಮ್ಮ ರುಪಾಯಿ ಮಂಡಿ ಊರಿದರೆ, ಮನೆ ಎದುರಿಗೆ ತಳ್ಳುವಗಾಡಿಯ ಬೀನ್ಸ್‌, ಆಲೂಗಡ್ಡೆ, ಈರುಳ್ಳಿ ಬೆಲೆ ಏರಿಬಿಡುತ್ತದೆ. ಎಲ್ಲಿಯ ಡಾಲರ್‌, ಎಲ್ಲಿಯ ಈರುಳ್ಳಿ ? ಪೆಟ್ರೋಲ್‌ ಬಂಕ್‌ಗೆ ಹೋದರೂ, ಗ್ಯಾಸ್‌ ಸಿಲಿಂಡರ್‌ ಮುಟ್ಟಿದರೂ ಇಂಥದೇ ಬೆಲೆ ಏರಿಕೆಯ ಬಿಸಿ. ಇದನ್ನೆಲ್ಲ ನೋಡಿದರೆ, ನಮ್ಮ ರುಪಾಯಿ ಏಕೆ ಇಷ್ಟೊಂದು ಸೋಂಬೇರಿ, ಡಾಲರ್‌ ಎದುರು ನಿಂತು, ತೊಡೆ ತಟ್ಟಿ ಗಹಗಹಿಸಿ ನಗದಷ್ಟು ನಿಶ್ಯಕ್ತಿ ಏಕೆ?ಅನಿಸಿಬಿಡುತ್ತದೆ. ಆ ಕುರಿತು ಇಲ್ಲಿದೆ ವಿವರ.

Advertisement

ಡಾಲರ್‌ ಮುಂದೆ ರುಪಾಯಿ ಮಂಡಿ ಊರುವುದು, ಮತ್ತೆ ಎದ್ದಂತೆ ಮಾಡುವುದು, ಮತ್ತೆ ಬಿದ್ದಂತೆ ಕಾಣುವುದು, ಆಕಳಿಸುವುದು…ಹೂಡಿಕೆ ದಾರರು ಎಲ್ಲವನ್ನೂ ತಲೆಕೆರೆದು ಕೊಂಡು ನೋಡುವುದು… ಎಲ್ಲವೂ ನಡೆಯುತ್ತಲೇ ಇರುತ್ತದೆ. ಡಾಲರ್‌ರೇಟ್‌ ಜಾಸ್ತಿಯಾದರೆ ನಮಗೇನು ಲಾಭ ಅಂತ ಬಾಡಿಗೆ ಮನೆಯಲ್ಲಿ ಇರೋರು, ತರಕಾರಿ ಮಾರುವವರು ಸೇರಿದಂತೆ, ಯಾರೂ ಕೂಡ ಸುಮ್ಮನೆ ಕೂರುವ ಹಾಗಿಲ್ಲ. ಇಡೀ ದೇಶದ ಎಲ್ಲ ಜನರ ಬದುಕಿಗೂ, ಅವರ ಜೇಬಿಗೂ ಡಾಲರ್‌ ಬಿಸಿ ತಟ್ಟೇ ತಟ್ಟುತ್ತದೆ.

ಏರುಪೇರು ಹೇಗೆ?
ಪ್ರತಿ ದೇಶವೂ ಬೇರೆ ರಾಷ್ಟ್ರಗಳೊಂದಿಗೆ ಆಮದು ಮತ್ತು ರಫ್ತು ವ್ಯವಹಾರ ಮಾಡುತ್ತಿರುತ್ತದೆ. ರಫ್ತಿನ ಪ್ರಮಾಣ ಹೆಚ್ಚಿದ್ದರೆ ಆದೇಶದ ಕರೆನ್ಸಿ ಬೆಲೆ ಏರುತ್ತದೆ. ಆಮದಿನ ಪ್ರಮಾಣ ರಫ್ತಿಗಿಂತ ಹೆಚ್ಚಾದರೆ ಆ ದೇಶದ ಕರೆನ್ಸಿ ಮೌಲ್ಯ ಕುಸಿಯುತ್ತದೆ. ನಮ್ಮ ಯಡವಟ್ಟು ಇದೇ ಆಗಿರುವುದು. ಪ್ರಸ್ತುತ ಭಾರತದ ಆಮದು ಮತ್ತು ರಫ್ತಿನ ನಡುವಿನ ಅಂತರ 110 ಬಿಲಿಯನ್‌ ಡಾಲರ್‌ ಎನ್ನುವ ಅಂದಾಜಿದೆ. ಆರ್ಥಿಕ ಭಾಷೆಯಲ್ಲಿ ಇದನ್ನು ಎಕೊÕàಪೋರ್ಟ್‌ ಇಂಪೋರ್ಟ್‌ ಡಿಫಿಸಿಟ್‌ ಅನ್ನುತ್ತಾರೆ. ಅಂದರೆ, ರಫ್ತಿಗೆ ಹೋಲಿಸಿದರೆ ಆಮದೇ ಜಾಸ್ತಿ ಇದೆ. ಹೀಗಾಗಿ ಡಾಲರ್‌ನ ಡಂಕಣಕ ಇದ್ದದ್ದೇ; ರುಪಾಯಿಯ ತಕಧಿಮಿತ ನಾವೆಲ್ಲ ನೋಡಬೇಕಾದ್ದೆ.

ಮಧ್ಯವರ್ಗಕ್ಕೆ ಏಟು
ಹಣದ ಮೌಲ್ಯ ಕುಸಿಯುತ್ತಿದ್ದಂತೆ ಆಮದು ಕ್ಷೇತ್ರದ ಆದಾಯ ಸ್ವಲ್ಪ ನೆಗ್ಗಿ ಹೋಗುತ್ತದೆ. ಇದರ ಪ್ರಖರ ಬಿಸಿ ತಟ್ಟುವುದು ನಾವು, ನೀವು ಬಂಕ್‌ನಲ್ಲಿ ಪೆಟ್ರೋಲ್‌ ಹಾಕಿಸುವಾಗ. ರಾತ್ರೋರಾತ್ರಿ ಬೆಲೆ ಜಿಗಿದು ಬಿಟ್ಟಿರುತ್ತದೆ. ಅಂದರೆ, ನಾವು ಅತಿ ಹೆಚ್ಚು ಆಮದು ಮಾಡಿಕೊಳ್ಳುತ್ತಿರುವುದು ತೈಲವನ್ನು. ಹೀಗಾಗಿ, ಗ್ಯಾಸ್‌, ಹಾಲು, ತರಕಾರಿ, ಹಣ್ಣು ಹಂಪಲು ಬೆಲೆ ಏರುತ್ತದೆ. ತಡಿಯಪ್ಪ ಆಟೋ ಹಿಡಿಯೋಣ ಅಂತ ಹೋದರೆ ಅದರ ಮೀಟರ್‌ ಕೂಡ ಬೆಲೆಬಿಸಿ. ಇನ್ನು ಟೂರು-ಗೀರು ಅಂದರೆ ಡಾಲರ್‌ ಬೆಲೆ ಏರಿಕೆಯ ನಿಜವಾದ ಸುಡುಬಿಸಿ ತಾಗುತ್ತದೆ.

ಗ್ಯಾಸ್‌, ತರಕಾರಿ ಬೆಲೆ ಏರಿದರೆ ಸಾಕು, ತಂತಾನೇ ಮನೆಯ ತಿಂಗಳ ಬಜೆಟ್‌ ಏರುಪೇರಾಗುತ್ತದೆ. ಪೆಟ್ರೋಲ್‌, ಡೀಸೆಲ್‌ಗಾಗಿ ಪ್ರತಿ ತಿಂಗಳ ಖರ್ಚು ಕನಿಷ್ಠ ಶೇ.10-15ರಷ್ಟು ಏರುವುದು ಸುಳ್ಳೇನಲ್ಲ. ಔಷಧಿಗಳ ಬೆಲೆ ಮುಟ್ಟೋಕ್ಕಾಗಲ್ಲ. ಹೀಗೆ, ಹಣದ ಮೌಲ್ಯ ಕುಸಿಯುತ್ತಿರುವುಗಾಲೇ ಕಂಪನಿಗಳು ಬೆಲೆ ಏರಿಸುವ ದಾಳ ಹಾಕುತ್ತವೆ. ಅಂತಿಮವಾಗಿ, ಗ್ರಾಹಕನೇ ಎಲ್ಲ ಹೊರೆ ಹೊರಬೇಕು.

Advertisement

ಮಕ್ಕಳನ್ನು ಬುದ್ಧಿವಂತರನ್ನಾಗಿಸುವ ಶಿಕ್ಷಣವೂ ಡಾಲರ್‌ ಹೊಡೆತದ ಮತ್ತೂಂದು ಬಲಿಯೇ. ಸಾಲ ಮಾಡಿ ಮಕ್ಕಳನ್ನು ವಿದೇಶದಲ್ಲಿ ಓದಿಸುವವರು ಕಷ್ಟ ಸಹಿಷ್ಣುಗಳಾಗಬೇಕಾಗುತ್ತದೆ. ಹಣದ ಮೌಲ್ಯ ಕುಸಿಯುತ್ತಲೇ ತುಂಬುವ ಇಎಂಐ ಮೊತ್ತ ಹೆಚ್ಚುತ್ತದೆ ಗೊತ್ತಿರಲಿ.

ಲಾಭ ಇವರಿಗೆ
ಐಟಿ ಕಂಪನಿಗಳಿಗೆ ಈ ರೂಪಾಯಿ ಮೌಲ್ಯದ ಕುಸಿತ ಲಾಭಕರವೇ. ಡೌಲರ್‌ಗಳಲ್ಲೇ ಅವರ ವ್ಯವಹಾರ. ಅದೂ ವಿದೇಶಿಯರ ಜೊತೆಯಲ್ಲಾದ್ದರಿಂದ ಅಂಥ ಹೊಡೆತವೇನೂ ಇಲ್ಲವಂತೆ. ಆದರೆ, ರಫ್ತು ಕ್ಷೇತ್ರವನ್ನೇ ನೆಚ್ಚಿಕೊಂಡ ಆರ್ಥಿಕ ಕ್ಷೇತ್ರದಲ್ಲಿ ಹಣದ ಮೌಲ್ಯ ಕುಸಿಯುತ್ತಲೇ ಅವರ ಉತ್ಪನ್ನಗಳ ತಯಾರಿಕಾ ವೆಚ್ಚ ಹೆಚ್ಚುತ್ತದೆ, ಅವುಗಳ ಸಾಗಣೆ ವೆಚ್ಚವೂ ಏರುತ್ತದೆ. ಇದರಿಂದ ಮೊದಲು ಬೀಳುವ ಹೊಡೆತ ಮಾನವ ಸಂಪನ್ಮೂಲದ ಮೇಲೆ. ಅಂದರೆ ಈ ಹೊಡೆತಕ್ಕೆ ಬಲಿಯಾಗುವವರು ಕಂಪನಿಗಳಲ್ಲಿ ಕೆಲಸ ಮಾಡೋ ನಾವು ನೀವುಗಳು. ಹೊಸ ಉದ್ಯೋಗಿಗಳನ್ನು ತೆಗೆದುಕೊಳ್ಳುವುದು ಖೋತಾ. ಇರುವವರ ಸಂಬಳವನ್ನೂ ಕಡಿತ ಮಾಡಿ, ಕಂಪನಿಯ ಖರ್ಚುವೆಚ್ಚವನ್ನು ಸರಿದೂಗಿಸುವ ಪ್ರೋಗ್ರಾಮು ಶುರುವಾದರೆ ಉದ್ಯೋಗಿಗಳ ಪರ್ಸಿಗೂ ಕತ್ತರಿ. ಟೂರುಗೀರು ಅಂತ ಹೋದಾಗ ತಂಗುವ ಹೊಟೇಲ್‌ ವೆಚ್ಚವೂ ಕನಿಷ್ಠ ಶೇ.5 ರಷ್ಟು. ಹೆಚ್ಚುತ್ತದಂತೆ. ಅಲ್ಲಿ ಶಾಪಿಂಗ್‌ ಮಾಡಿದರೆ ಮತ್ತಷ್ಟು.

ಕುಡಿಯೋದು, ತಿನ್ನೋದರಲ್ಲೆಲ್ಲಾ ಡಾಲರ್‌ ಏರಿಕೆಯ ಹಬೆಯೇ ಇರುತ್ತದೆ.ವಿದೇಶದಲ್ಲಿ ಹೂಡಿಕೆ ಮಾಡುವುದು, ಅಲ್ಲಿ ಆಸ್ತಿಗಳನ್ನು ಕೊಳ್ಳುವ ಯೋಜನೆಯನ್ನು ಮೊದಲು ಕೈ ಬಿಡಬೇಕಾಗುತ್ತದೆ. ಇಇಎಫ್ಸಿನಲ್ಲಿ ಖಾತೆ ಇದ್ದರೆ ಆಸ್ತಿ ಮಾಡಬಹುದು. ಈಕ್ವಿಟಿ ಹೂಡಿಕೆದಾರರು ತೈಲ, ಅನಿಲ, ಫಾರ್ಮಾ, ಆಟೋಮೊಬೈಲ್‌ ಮತ್ತು ವಿಮಾನಯಾನ ವಲಯಗಳಲ್ಲಿ ಹೂಡಿಕೆ ಮಾಡುವಾಗ ಹುಶಾರಾಗಿರಬೇಕು. ಏಕೆಂದರೆ, ಈ ಕ್ಷೇತ್ರಗಳೆಲ್ಲಾ ಆಮದು, ಸುಂಕ, ವಿದೇಶಿ ಬಂಡವಾಳ ಇತ್ಯಾದಿ ಕಾರಣಕ್ಕೆ ಈ ರೂಪಾಯಿ ಮೌಲ್ಯ ಕುಸಿತದ ಬಿಸಿಯನ್ನು ಅನುಭವಿಸುತ್ತಲೇ ಇರುತ್ತವೆ.

ಚಿನ್ನ ಬೇಡ
ಡಾಲರ್‌ ಬೆಲೆ ಎದ್ದಾಗ ಷೇರು ಬೇಡ ಅಂತೀರ, ಹಾಗಾದರೆ, ಚಿನ್ನದ ಮೇಲೆ ಹೂಡಿಕೆ ಮಾಡಬಹುದೇ? ಅನ್ನೋದು ಸುಮಾರು ಜನರ ಪ್ರಶ್ನೆ. ಚಿನ್ನದ ಮೇಲಿನ ಹೂಡಿಕೆ ಒಳ್ಳೆಯದಲ್ಲ. ಒಂದು ಪಕ್ಷ ಚಿನ್ನ ಕೊಂಡರೆ ರುಪಾಯಿ ಬೆಲೆ ಇಳಿದಂತೆ ಚಿನ್ನದ ಮೌಲ್ಯವೂ ಇಳಿಯುತ್ತಾ ಹೋಗುತ್ತದೆ. ಆದರೆ ನೀವು ಅಮೆರಿಕ, ದುಬೈನಂಥ ದೇಶದಲ್ಲಿದ್ದು ಅಲ್ಲಿ ಹೂಡಿಕೆ ಮಾಡಿದ ಚಿನ್ನವನ್ನು ಇಲ್ಲಿಗೆ ತರುವಿರಾದರೆ ಒಳ್ಳೆಯ ಲಾಭ ಮಾಡಬಹುದು.

ರುಪಾಯಿ ಬೆಲೆ ಬಿದ್ದು, ಡಾಲರ್‌ ಬೆಲೆ ಎದ್ದಾಗ ಜಾಗತಿಕವಾಗಿ ಗುರುತಿಸಿಕೊಂಡ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ಫ‌ಂಡುಗಳಲ್ಲಿ ಹೂಡಿಕೆ ಮಾಡುವುದು ಬಹಳ ಒಳ್ಳೆಯದು. ಒಂದು ಪಕ್ಷ ಈಗಾಗಲೇ ನೀವು ಹೂಡಿಕೆ ಮಾಡಿದ್ದರೆ, ರುಪಾಯಿ ಬೆಲೆ ಕುಸಿಯಿತು ಅಂತ ಅದನ್ನು ವಾಪಸ್ಸು ತೆಗೆಯಲು ಹೋಗಲೇಬೇಡಿ. ಡಾಲರ್‌ ಬೆಲೆ ಹೆಚ್ಚಾಗಿರುವುದರಿಂದ ನಿಮ್ಮ ಆ ಗ್ಲೋಬಲ್‌ ಫ‌ಂಡ್ಸ್‌ ಮೌಲ್ಯ ಲಾಭ ತಂದುಕೊಡುತ್ತಿರುತ್ತದೆ.

ಜೂಟಾಟ
ಡಾಲರ್‌ ರುಪಾಯಿ ನಡುವಿನ ಜೂಟಾಟ ತೀರಾ ಕ್ಷಣಿಕ. ಯಾವಾಗ ಬೇಕಾದರೂ ಏರಿ ಮತ್ತೆ ಅದೇ ಬೆಲೆಗೆ ಬಂದು ನಿಲ್ಲುವ, ಮತ್ತೆ ಕುಂಟಾ ಬಿಲ್ಲೆ ಆಡುವುದು ಸಾಮಾನ್ಯವೇ ಆಗಿದೆ. ಹಾಗಂತ ಡಾಲರ್‌ ಬೆಲೆ ಏರಿಕೆ, ದಿಢೀರಂತ 4-5 ರೂ.ಗಳಂತೂ ಏರುಪೇರಾಗುವುದಿಲ್ಲ. ಸುಮ್ಮನೆ ಗಮನಿಸಿ, ಕಳೆದ ಅಕ್ಟೋಬರ್‌ನಲ್ಲಿ ಒಂದು ಡಾಲರ್‌ = 74.55ರೂ. ಇತ್ತು. ಪ್ರಸ್ತುತ 68.62 ಪೈಸೆ ಇದೆ. ಕಳೆದ 20 ದಿನಗಳಿಂದ ಒಂದು ರುಪಾಯಿ ವ್ಯತ್ಯಾಸದಲ್ಲಿ ಆಟವಾಡುತ್ತಿದೆ. ಫೆಬ್ರವರಿಯ ಮೊದಲ ವಾರದಲ್ಲಿ 71.70 ಪೈಸೆಕ್ಕೆ ಏರಿದ್ದೇ ದೊಡ್ಡದು. ಅದೇ ಜನವರಿ ಮೊದಲ ವಾರದಲ್ಲಿ 71.42 ಪೈಸೆ ಇತ್ತು. ಈಗ ಹೆಚ್ಚುಕಮ್ಮಿ ಮೂರು ರೂ. ಇಳಿದಿದೆ. ಅಂದರೆ ಮೂರು ತಿಂಗಳಲ್ಲಿ ಮೂರು ರೂ. ಇಳಿದಿರುವುದು ದೊಡ್ಡ ಸಾಧನೆ.

ಎಲೆಕ್ಷನ್‌ ಕಲೆಕ್ಷನ್‌
ಸುಡು ಬಿಸಿಲ ಹೊಸ್ತಿಲಲ್ಲಿ ಲೋಕಸಭೆ ಚುನಾವಣೆ ಬಂದು ನಿಂತಿದೆ. 543 ಸ್ಥಾನಕ್ಕೆ 8ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಸಜ್ಜಾಗಿದ್ದಾರೆ. ಈಗಾಗಲೇ ಬೀದಿ ಬೀದಿಗಳಲ್ಲಿ ಪ್ರಚಾರದ ಭರಾಟೆ ಶುರುವಾಗಿದೆ. ಪರಿಸ್ಥಿತಿ ಹೀಗಿರುವಾಗ “ಅವರ ಹೊಟ್ಟೆ ತುಂಬಿಸುವುದಕ್ಕೆ, ಗಂಟಲು ನೆನೆಸುವುದಕ್ಕೆ ನಾವು ಸಿದ್ಧ’ ಅಂತ ಒಂದಷ್ಟು ಕಂಪೆನಿಗಳು ಲಾಭದ ಗುಣಾಕಾರ ಭಾಗಾಕಾರ ಹಾಕುತ್ತಿವೆ.

ಪ್ರಚಾರ, ಮತಯಾಚನೆ ಅಂದರೆ ಸುಮ್ಮನೆ ಅಲ್ಲ. ಅಲ್ಲಿ ಬಿಸ್ಕೆಟ್‌, ನೀರು, ತಂಪು ಪಾನೀಯ ಬೇಕೇ ಬೇಕಲ್ವಾ? ಅನ್ನೋದು ಕಂಪೆನಿಗಳು ಕೇಳುತ್ತಿರುವ ಪ್ರಶ್ನೆ. ಹೀಗಾಗಿ, 2019ರ ಚುನಾವಣೆಗೆ ನೀವು ಮುಂದೆ ನಡೀರಿ, ನಾವು ನಿಮ್ಮ ಹಿಂದೆ ನೀರು ತರ್ತೀವಿ ಅಂತಿದೆ ಬಿಸ್ಲೆರಿ ಕಂಪೆನಿ. ಈ ಸಲದ ಚುನಾವಣೆ ಸಂದರ್ಭದಲ್ಲಿ ಲಾಭದ ಬಂಪರ್‌ ಫ‌ಸಲು ತೆಗೆಯಬೇಕು ಅನ್ನೋದು ಎಲ್ಲರ ಗುರಿ. ಏಕೆಂದರೆ, 2014 ಚುನಾವಣೆ ಇವರು ಅಂದುಕೊಂಡಂತೆ ಲಾಭ ಕೊಡಲಿಲ್ಲ. ಬದಲಾಗಿ ಮಾರ್ಚ್‌, ಏಪ್ರಿಲ್‌ ತಿಂಗಳುಗಳಲ್ಲಿ ಶೇ. 5ರಷ್ಟು ಮಾರಾಟ ಕಡಿಮೆಯಾಯಿತಂತೆ.

“ಈ ಸಂದರ್ಭವನ್ನು ನಾವು ಸರಿಯಾಗಿಯೇ ಬಳಸಿಕೊಳ್ಳಲು ಸಜ್ಜಾಗಿದ್ದೇವೆ. ಹೀಗಾಗಿ, ಈ ಚುನಾವಣೆಯಿಂದ ಶೇ.5ರಿಂದ 6ರಷ್ಟು ವ್ಯಾಪಾರ ಹೆಚ್ಚುವ ನಿರೀಕ್ಷೆ ಇದೆ’ ಎಂದು ಹೇಳಿಕೊಂಡಿದ್ದಾರೆ ಪಾರ್ಲೆ ಪ್ರಾಡಕ್ಟ್‌ನ ಮುಖ್ಯಸ್ಥ ಕೃಷ್ಣರಾವ್‌. ಕೊಕಾ ಕೋಲಾ ಕಂಪನಿ, ಎಲ್ಲಿ ಹೇಳಿದರೆ ಅಲ್ಲಿಗೆ ಸಪ್ಲೆ„ ಮಾಡಲು ಸಿದ್ಧರಿದ್ದೇವೆ ಅಂತ ಹೇಳಿದೆ. ಚುನಾವಣೆ ಪೂರ್ವವೇ ಮೊಬೈಲ್‌ ಡಾಟಾ ಶೇ. 15ರಷ್ಟು ಜಾಸ್ತಿಯಾಗಿರುವುದು ಐಡಿಯಾ, ಏರ್‌ಟೆಲ್‌, ಜಿಯೋ ಮುಂತಾದ ಕಂಪೆನಿಗಳಿಗೆ ಸಂತಸ ತಂದಿದೆ. ಚುನಾವಣಾ ಕಾವು ಹೆಚ್ಚುತ್ತಿದ್ದಂತೆ ಡಾಟಾ ಬಳಕೆ ಹೆಚ್ಚಾಗಿ ಇದರ ಪ್ರಮಾಣ ಶೇ. 25-30ಕ್ಕೆ ಏರುವ ನಿರೀಕ್ಷೆಯೂ ಇದೆಯಂತೆ. ಒಟ್ಟಾರೆ, ಚುನಾವಣೆ ಕಾಲೆ ವಿಪರೀತ ವ್ಯಾಪಾರ.

ದೇಶ ಕಾಯೋ ಅಂಬಾ ನೀ..
ಮೊನ್ನೆ ಒಂದು ಸುದ್ದಿ ಹೊರಬಿತ್ತು. ದೇಶದ ನಂ.1 ಶ್ರೀಮಂತ ಮುಖೇಶ್‌ ಅಂಬಾನಿ ಅಂತ. ಅವರ ಒಟ್ಟು ಆಸ್ತಿ ಮೌಲ್ಯ 40.3 ಬಿಲಿಯನ್‌. ಅಬ್ಬಬ್ಟಾ ಎಂಥ ಶ್ರೀಮಂತರು. ಬಂಗಾರದ ಚಮಚ ಬಾಯಲ್ಲಿ ಇಟ್ಟುಕೊಂಡೇ ಹುಟ್ಟಿರಬೇಕು ಅಂತೆಲ್ಲಾ ಮಾತನಾಡಿಕೊಳ್ಳುವ ಹೊತ್ತಿಗೆ, ಬ್ಲೂಬರ್ಗ್‌ ಅನ್ನೋ ಸಂಸ್ಥೆ ಜಗತ್ತಿನ ಶ್ರೀಮಂತರ ಪಟ್ಟಿ ಮಾಡಿ, ಅದರ ಮುಂದುವರಿದ ಭಾಗವಾಗಿ ಇವರ ಆಸ್ತಿಯಿಂದ ಆಯಾ ದೇಶವನ್ನು ಎಷ್ಟು ಕಾಲ ನಡೆಸಬಹುದು ಅನ್ನೋ ಕುತೂಹಲದ ಇಂಡೆಕ್ಸ್‌ ಸಿದ್ಧ ಪಡಿಸಿತು. ಅದರ ಪ್ರಕಾರ- ಅಂಬಾನಿ ಆಸ್ತಿಯಿಂದ ಭಾರತವನ್ನು 20 ದಿನ ಮುನ್ನಡೆಸಬಹುದಂತೆ.

ಪ್ರಪಂಚದ ನಂ. 1 ಶ್ರೀಮಂತ ಜೆಫ್ ಬೆಜೂಸ್‌ 99 ಮಿಲಿಯನ್‌ ಡಾಲರ್‌ ಆಸ್ತಿ ಹೊಂದಿದ್ದಾರೆ. ಇವರ ಆಸ್ತಿಯಿಂದ ಅಮೆರಿಕವನ್ನು 5 ದಿನಗಳ ಕಾಲ ಸಾಕಬಹುದಂತೆ. ಇದರಂತೆ ಅಮಾನ್ಸಿ ಒರ್ಟೆಗಾ ಅನ್ನೋ ವ್ಯಕ್ತಿ ಪ್ರಪಂಚದ ಎರಡನೇ ಶ್ರೀಮಂತ. ಇವರ ಬಳಿ 75.3 ಬಿಲಿಯನ್‌ ಡಾಲರ್‌ನಷ್ಟು ಆಸ್ತಿ ಇದೆ. ಇದನ್ನು ಬಳಸಿಕೊಂಡರೆ ಸ್ಪೇನ್‌ ಅನ್ನು 48 ದಿನಗಳ ಮಜಬೂತಾಗಿ ನೋಡಿಕೊಳ್ಳಬಹುದಂತೆ. ಫ್ರಾನ್ಸ್‌ನ ಬರ್ನಾರ್ಡ್‌ರ ಹತ್ತಿರ 63.3 ಬಿಲಿಯನ್‌ ಡಾಲರ್‌ ಸಂಪತ್ತು ಇದೆ. ಇದರಿಂದ 15 ದಿನಗಳ ಕಾಲ ಫ್ರಾನ್ಸ್‌ ಅನ್ನು ಸಾಕಬಹುದಂತೆ.

ಇವೆಲ್ಲ ಬಿಡಿ, ಈ ಎಲ್ಲ ದಿಗ್ಗಜ ಶ್ರೀಮಂತರ ಆಸ್ತಿಯನ್ನು ಬಳಸಿಕೊಂಡರೆ ಭಾರತವನ್ನು ಎಷ್ಟು ತಿಂಗಳು ಕಾಯಬಹುದು?

– ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next