ಉದಯವಾಣಿ ಸಮಾಚಾರ
ಬೆಂಗಳೂರು: ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಉದ್ಯಮ ಸಚಿವಾಲಯದ ಸಹಯೋಗದಲ್ಲಿ ಕರ್ನಾಟಕದ ನವೀಕರಿಸಬಹುದಾದ ಇಂಧನ ಉತ್ಪಾದಕರ ಸಂಘ ಹಾಗೂ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜೂ.28ರಿಂದ 30ರವರೆಗೆ 5ನೇ ಆವೃತ್ತಿಯ “ಅಂತಾರಾಷ್ಟ್ರೀಯ ಗ್ರೀನ್ ವೆಹಿಕಲ್ ಎಕ್ಸ್‌ಪೋ’ ಆಯೋಜಿಸಲಾಗಿದೆ.
3 ದಿನಗಳ ಕಾಲ ನಡೆಯಲಿರುವ ಈ ಎಕ್ಸ್‌ಪೋ ಅನ್ನು ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದು, ಕೇಂದ್ರದ ಭಾರೀ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ಹೈದ್ರಾಬಾದ್‌ನ ಮೀಡಿಯಾ ಮಾರ್ಕೆಟಿಂಗ್ ಸಂಸ್ಥೆಯ ನಿರ್ದೇಶಕ ಮೊಹಮದ್ ಮುದಸ್ಸರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗ್ರೀನ್ ವೆಹಿಕಲ್ ಎಕ್ಸ್‌ಪೋವನ್ನು ಸ್ವಚ್ಛ ಮತ್ತು ಸುಸ್ಥಿರ ಸಂಚಾರ ಉತ್ತೇಜಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ಇವಿ ಘಟಕಗಳು, ಬಿಡಿಭಾಗಗಳು, ತಂತ್ರ ಜ್ಞಾನಗಳು, ಸಂಬಂಧಪಟ್ಟ ಕೈಗಾರಿಕಾ ವಲಯವನ್ನು ಒಂದೇ ವೇದಿಕೆಗೆ ತರುವುದರಿಂದ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ, ವಿತರಣೆ, ಮಾರಾಟದಲ್ಲಿ ಪಾಲುದಾರರಿಗೆ ಇದೊಂದು ಸೂಕ್ತ ವೇದಿಕೆಯಾಗಿದೆ ಎಂದರು.
3 ದಿನಗಳ ಮೇಳದಲ್ಲಿ ಬೆಂಗಳೂರು, ಹುಬ್ಬಳ್ಳಿ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್, ಕರ್ನಾಟಕ ದ್ವಿಚಕ್ರ ವಾಹನ ವರ್ಕ್‌ಶಾಪ್ ಮಾಲೀಕರು ಮತ್ತು ತಂತ್ರಜ್ಞರ ಸಂಘ ಮತ್ತು ಇತರ ಸ್ಥಳೀಯ ಸಂಸ್ಥೆಗಳು ಭಾಗವಹಿಸುತ್ತಿದ್ದು, 15 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡುವ ನಿರೀಕ್ಷೆಯಿದೆ. 100ಕ್ಕೂ ಹೆಚ್ಚು ಪ್ರದರ್ಶಕರು, 700ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ ಎಂದರು.
ಹೈದ್ರಾಬಾದ್ ನ ಮೀಡಿಯಾ ಮಾರ್ಕೆಟಿಂಗ್ ಸಂಸ್ಥೆಯ ನಿರ್ದೇಶಕ ರಾಮ್ ಸೌಂದ ಲ್ಕರ್, ಫೆರ್ರಿ ಅಧ್ಯಕ್ಷ ರಮೇಶ್ ಶಿವಣ್ಣ, ಆಲ್ ಇಂಡಿ ಯಾ ಸೋಲಾರ್ ಥರ್ಮಲ್ ಫೆಡರೇಷನ್ ಅಧ್ಯಕ್ಷ ಕೆ.ಆರ್.ಸುರೇಂದ್ರ ಕುಮಾರ್, ಕ್ರೇಷ್ಮಾ ಕಾರ್ಯದರ್ಶಿ ಎ.ಸಿ.ಈಶ್ವರ್, ಆಟೋ ಪಾರ್ಟ್ಸ್ ಡೀಲರ್ ಅಸೋಸಿಯೇಷನ್ ಅಧ್ಯಕ್ಷ ಕೆ.ವೆಂಕಟೇಶ್ ಇದ್ದರು.