ಪಣಜಿ: ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (ಇಫಿ) ದ ಪ್ರಮುಖ ವಿಭಾಗವಾದ ಭಾರತೀಯ ಪನೋರಮಾದ ಉದ್ಘಾಟನೆ ರವಿವಾರ ನೆರವೇರಿತು.
ಹಿಂದಿನ ದಿನದ ಜೋರುಮಳೆ ರವಿವಾರ ಬೆಳಗ್ಗೆ ಹಾಜರಿ ಹಾಕಲಿಲ್ಲ. ಹಾಗಾಗಿ ಸಿನಿಮಾ ಮಂದಿರದ ಎದುರು ಒಂದಿಷ್ಟು ಸಿನಿಮಾ ಪ್ರೇಮಿಗಳು ಕಂಡು ಬಂದರು.
ಐನಾಕ್ಸ್ ಸಿನಿಮಾ ಮಂದಿರದಲ್ಲಿ ಪನೋರಮಾ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಚಾರ, ಯುವಜನ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ‘ಪ್ರಾದೇಶಿಕ ಭಾಷೆಯ ಕಥಾವಸ್ತುವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು, ಜಗತ್ತಿಗೆ ತೋರಿಸುವುದು ಹೇಗೆ ಎಂದು ನಾವು ಆಲೋಚಿಸಬೇಕಿದೆ. ಕಥಾವಸ್ತು (ಕಂಟೆಂಟ್)ವೇ ಮುಂದಿನ ದಿನಗಳಲ್ಲಿ ರಾಜ. ನಮ್ಮ ದೇಶದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಎನಿಸುವಷ್ಟು ಸಿನಿಮಾಗಳನ್ನು ನಿರ್ಮಿಸುತ್ತಿದ್ದೇವೆ. ಹೆಚ್ಚು ಜನ ಸಿನಿಮಾ ನಿರ್ಮಾಪಕರಿದ್ದಾರೆ, ಸಿನಿಮಾ ಕರ್ಮಿಗಳಿದ್ದಾರೆ, ತಾಂತ್ರಿಕ ವರ್ಗ ಇದೆ. ಆದರೆ ಎಷ್ಡು ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಗಿಟ್ಟಿಸಿವೆ? ಜಾಗತಿಕ ಸಮುದಾಯವನ್ನು ತಲುಪಿವೆ? ಈ ದಿಸೆಯಲ್ಲಿ ನಾವು ಕ್ರಿಯಾಶೀಲರಾಗಬೇಕು’ ಎಂದರು.
‘ನಮ್ಮ ದೇಶದಲ್ಲಿರುವ ತಂತ್ರಜ್ಞರನ್ನು ಮತ್ತು ತಾಂತ್ರಿಕ ವರ್ಗವನ್ನು ಬಳಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಬ್ ಮಾಡಲು ಇಚ್ಛೆ ಇದೆ. ಅದಕ್ಕೆ ಸಿನಿಮೋದ್ಯಮದ ಸಹಕಾರ ಅವಶ್ಯ ಎಂದರು.
‘ಜನ ಏನನ್ನು ಬಯಸುತ್ತಾರೋ ಅದನ್ನು ಕೊಡಿ. ಅದಕ್ಜೆ ಈಗ ಒಳ್ಳೆಯ ಅವಕಾಶ’ ಎಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಹರ್ಲೇಕರ್ ಹೇಳಿದರು.
ಪನೋರಮಾದ ಕಥಾ ವಿಭಾಗದ ಉದ್ದಾಟನಾ ಚಿತ್ರ ,’ಶ್ಯಾಮ್ಖೋರ್’ ನ ನಿರ್ದೇಶಕಿ ಎಮಿ ಬರುವಾ, ಇದು ಪ್ರಾದೇಶಿಕ ಭಾಷೆಗೆ, ಅಸ್ಸಾಮಿಗೆ,ಇಡೀ ಈಶಾನ್ಯ ರಾಜ್ಯಗಳ ಪ್ರಾಂತ್ಯಕ್ಕೆ ಸಿಕ್ಕ ಗೌರವ’ ಎಂದು ಧನ್ಯವಾದ ಸಲ್ಲಿಸಿದರು.
ಕಥೇತರ ವಿಭಾಗದ ಚಿತ್ರ ‘ವೇದ್-ದಿ ವಿಶನರಿ’ ಯ ನಿರ್ದೇಶಕ ರಾಜೀವ್ ಪ್ರಕಾಶ್, ‘ನಮ್ಮ ತಂದೆಯ ಕುರಿತ ಚಿತ್ರ ಇಲ್ಲಿ ಪ್ರದರ್ಶಿತಗೊಳ್ಳುತ್ತಿರವುದು ಖುಷಿಯ ಸಂಗತಿ’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪನೋರಮಾ ಎರಡು ವಿಭಾಗದ ಆಯ್ಕೆಸಮಿತಿ ಅಧ್ಯಕ್ಷರಾದ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಮತ್ತು ನಲ್ಲಮುತ್ತು ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ ಚಿತ್ರತಂಡ ಮತ್ತು ಆಯ್ಕೆ ಸಮಿತಿ ಸದಸ್ಯರನ್ನು ಗೌರವಿಸಲಾಯಿತು.
ನ. 20 ರಿಂದ 28 ರವರೆಗಿನ ಉತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗದಡಿ ಕಥಾ ವಿಭಾಗದ 24 ಮತ್ತು ಕಥೇತರ ವಿಭಾಗದ 21 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.