ಅಪಾಯಗಳ ಕುರಿತು ಅರಿವು ಮತ್ತು ದುರ್ಘಟನೆಗಳನ್ನು ನಿಯಂತ್ರಿಸುವ ಬಗೆಗೆ ಜಾಗತಿಕವಾಗಿ ಎಚ್ಚರ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಮಹಾಸಭೆಯು ನೀಡಿದ ಕರೆಯನುಸಾರ 1989ರಿಂದೀಚೆಗೆ ಪ್ರತೀ ವರ್ಷವೂ ಅಕ್ಟೋಬರ್ 13ನ್ನು ಅಂತಾರಾಷ್ಟ್ರೀಯ ದುರ್ಘಟನೆ ಅಪಾಯ ನಿಯಂತ್ರಣ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವದಾದ್ಯಂತ ವಿವಿಧ ಸಮುದಾಯಗಳು ಮತ್ತು ಜನರು ವಿವಿಧ ದುರ್ಘಟನೆಗಳಿಗೆ ತಾವು ಒಡ್ಡಿಕೊಳ್ಳುವುದನ್ನು ಹೇಗೆ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ತಾವು ಎದುರಿಸಬಹುದಾದ ಅಪಾಯಗಳನ್ನು ಹೇಗೆ ನಿಯಂತ್ರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಈ ದಿನಾಚರಣೆಯು ಮುನ್ನೆಲೆಗೆ ತಂದು ಗುರುತಿಸುತ್ತದೆ. ಸಮುದಾಯಗಳನ್ನು ದುರ್ಘಟನೆ ಮತ್ತು ಅಪಾಯಗಳನ್ನು ಸಮರ್ಥವಾಗಿ ಎದುರಿಸಬಲ್ಲವುಗಳನ್ನಾಗಿ ರೂಪಿಸಿ ಬೆಳೆಸುವುದು ಈ ದಿನಾಚರಣೆಯ ಗುರಿಯಾಗಿದೆ.
ಅಪಾರವಾದ ದೇಹಶಾಸ್ತ್ರೀಯ ಭಿನ್ನತೆ ಮತ್ತು ವಿಸ್ತಾರವಾದ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿರುವ ದೇಶ ಭಾರತ. ಜತೆಗೆ, ಜಗತ್ತಿನಲ್ಲಿ ದ್ವಿತೀಯ ಅತಿ ಹೆಚ್ಚು ಜನಸಂಖ್ಯೆಯನ್ನೂ ನಮ್ಮ ದೇಶ ಹೊಂದಿದೆ. ಇಂತಹ ಭೌಗೋಳಿಕ ಭಿನ್ನತೆ ಮತ್ತು ಜನಸಂಖ್ಯಾತ್ಮಕ ಭಿನ್ನತೆಗಳು ಜತೆಗೂಡಿದಾಗ ದೇಶದ ಜನರು ಮಾನವ ನಿರ್ಮಿತ ಮತ್ತು ಪ್ರಕೃತಿ ಸಹಜವಾದ ಅಪಾಯಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ದುರ್ಘಟನೆಗಳಿಗೆ ತುತ್ತಾಗುವ ಅಪಾಯ ಪ್ರಮಾಣವು ಸಮುದಾಯದಿಂದ ಸಮುದಾಯಕ್ಕೆ ಬದಲಾಗುತ್ತದೆ.
ಇತ್ತೀಚೆಗೆ, ಇದೇ ವರ್ಷದ ಆಗಸ್ಟ್ ಮೊದಲನೆಯ ವಾರದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಉಂಟಾಗಿದ್ದ ನೆರೆ ಹಾವಳಿ, ಪ್ರಕೃತಿ ವಿಕೋಪ ಪರಿಸ್ಥಿತಿಯನ್ನು ಇಲ್ಲಿ ಸ್ಮರಿಸಬಹುದು. ಮುಂಗಾರಿನ ಭಾರೀ ಮಳೆಯಿಂದಾಗಿ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಮತ್ತು ಪರಿಹಾರ ಕೇಂದ್ರಗಳಿಗೆ ರವಾನಿಸಬೇಕಾಯಿತು. ಒಟ್ಟು 61 ಮಂದಿ ಮೃತಪಟ್ಟರೆ ಏಳು ಲಕ್ಷ ಮಂದಿ ನಿರ್ವಸಿತರಾದರು. ಅನೇಕ ಕಡೆಗಳಲ್ಲಿ ಭೂಕುಸಿತಗಳು ಸಂಭವಿಸಿ ಮತ್ತು ನೆರೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಪ್ರಮುಖ ಜಿಲ್ಲಾ ರಸ್ತೆಗಳು ಸೇರಿದಂತೆ 136 ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ರಸ್ತೆಗಳು, ಪೈಪ್‌ಲೈನ್‌ಗಳು, ಟ್ಯಾಂಕಿಗಳು, ಶಾಲೆಗಳು ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆ ಸೇರಿದಂತೆ ಅನೇಕ ನಿರ್ಣಾಯಕ ಮೂಲ ಸೌಕರ್ಯಗಳು ಹಾನಿಗೀಡಾದವು. 2 ಸಾವಿರ ಹಳ್ಳಿಗಳಲ್ಲಿ ನೆರೆ ಹಾವಳಿ ಉಂಟಾಗಿದ್ದು, 40 ಸಾವಿರ ಮನೆಗಳು ಹಾನಿಗೀಡಾದವು. ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ಮಲೆನಾಡು ಭಾಗಗಳಲ್ಲಿ ಅತಿ ಹೆಚ್ಚು ಹಾನಿ ಉಂಟಾಗಿತ್ತು. ಕರ್ನಾಟಕ ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣ ಮಂಡಳಿ, ಕರ್ನಾಟಕ ಪೊಲೀಸ್, ಭಾರತೀಯ ವಾಯುಪಡೆ, ನಾಗರಿಕರು, ಸ್ವಯಂಸೇವಕರು ಮತ್ತು ಕರಾವಳಿಯ ಮೀನುಗಾರರು ಜತೆಗೂಡಿ ನೆರೆಪೀಡಿತ ಪ್ರದೇಶಗಳಲ್ಲಿ ಸಕ್ರಿಯವಾಗಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಅಗ್ನಿಶಾಮಕ ದಳ, ರಾಜ್ಯ ಪ್ರಾಕೃತಿಕ ವಿಕೋಪ ಪ್ರತಿಸ್ಪಂದನ ನಿಧಿ, ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿರ್ವಹಣ ದಳ ಮತ್ತು ಭಾರತೀಯ ಸೇನೆಗಳು ಸಂಯುಕ್ತವಾಗಿ ಕಾರ್ಯನಿರ್ವಹಿಸಿ 6.73 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದರು.
ಈ ಹಿನ್ನೆಲೆಯಲ್ಲಿ ವಿವಿಧ ಸರಕಾರಿ ಮತ್ತು ಸರಕಾರೇತರ ಏಜೆನ್ಸಿಗಳು ಪರಿಹಾರ ಕಾರ್ಯಾಚರಣೆಗೆ ನೀಡಿರುವ ಮೌಲ್ಯಯುತ ಸೇವೆಯನ್ನು ಸ್ಮರಿಸಿಕೊಳ್ಳುವುದು ಅವಶ್ಯವಾಗಿದೆ. ಪ್ರಾಕೃತಿಕ ವಿಕೋಪ ತಡೆಯ ಅಂತಾರಾಷ್ಟ್ರೀಯ ದಿನಾಚರಣೆಯು ಅಂತಹ ಒಂದು ಸಂದರ್ಭವಾಗಿದ್ದು, ಇಂತಹ ಸಾಮಯಿಕ ಸಂಯೋಜಿತ ಕಾರ್ಯಾಚರಣೆಯ ಪ್ರಾಮುಖ್ಯವನ್ನು ಗುರುತಿಸಿ ಶ್ಲಾ ಸುತ್ತದೆ.ಪ್ರಾಕೃತಿಕ ವಿಕೋಪ ತಡೆಯ ಅಂತಾರಾಷ್ಟ್ರೀಯ ದಿನಾಚರಣೆಯು ಪ್ರತೀ ವರ್ಷವೂ ಒಂದು ಹೊಸ ಧ್ಯೇಯ
ವಾಕ್ಯವನ್ನು ಹೊಂದಿರುತ್ತದೆ. ಸದ್ಯೋಭವಿಷ್ಯದಲ್ಲಿ ಉಂಟಾಗಬಹುದಾದ ಎಲ್ಲ ರೂಪಗಳ ಪ್ರಾಕೃತಿಕ ವಿಕೋಪಗಳನ್ನು ಮನಗಂಡು ಅವುಗಳನ್ನು ತಡೆಯುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳನ್ನು ಗಮನದಲ್ಲಿ ಇರಿಸಿಕೊಂಡು ಧ್ಯೇಯವಾಕ್ಯ, ಪ್ರಾಕೃತಿಕ ವಿಕೋಪ ತಡೆಯ ಅಂತಾರಾಷ್ಟ್ರೀಯ ದಿನಾಚರಣೆಯ ತಿರುಳನ್ನು ರೂಪಿಸಲಾಗುತ್ತದೆ.
ಪ್ರಾಕೃತಿಕ ವಿಕೋಪಗಳ ಅಪಾಯವನ್ನು ಅರ್ಥ ಮಾಡಿಕೊಳ್ಳುವುದು, ಅಪಾಯವನ್ನು ತಡೆಗಟ್ಟುವ ತಂತ್ರೋಪಾಯಗಳಲ್ಲಿ ಬಂಡವಾಳ ಹೂಡುವುದು, ಪ್ರಾಕೃತಿಕ ವಿಕೋಪಗಳ ಅಪಾಯವನ್ನು ನಿಭಾಯಿಸುವ ಕಾರ್ಯತಂತ್ರಗಳ ಯೋಜನೆ ಮತ್ತು ಅಪಾಯ ಎದುರಿಸುವ ಮಾರ್ಗೋಪಾಯಗಳಲ್ಲಿ ಸೂಕ್ತ ಮತ್ತು ಸಮರ್ಪಕವಾದ ಬದಲಾವಣೆಗಳನ್ನು ತರುವುದು ಪ್ರಾಕೃತಿಕ ವಿಕೋಪ ತಡೆಯ ಅಂತಾರಾಷ್ಟ್ರೀಯ ದಿನಾಚರಣೆಯ ಧ್ಯೇಯವಾಕ್ಯದಲ್ಲಿ ಅಡಕವಾಗಿರುತ್ತವೆ. 2019ರ ಪ್ರಾಕೃತಿಕ ವಿಕೋಪ ತಡೆಯ ಅಂತಾರಾಷ್ಟ್ರೀಯ ದಿನಾಚರಣೆಯ ಧ್ಯೇಯವು ಸೆಂದಾಯಿ ಚೌಕಟ್ಟಿನ ಏಳು ಗುರಿಗಳ ಮೇಲೆ ನೀಡುತ್ತಿರುವ ಒತ್ತನ್ನು ಮುಂದುವರಿಸಿದೆ.
ಮುಂದುವರಿಯುವುದು
ಅಶ್ವತ್ಥ್ ಆಚಾರ್ಯ
ಮೂಳೆರೋಗಗಳ ಚಿಕಿತ್ಸಾ ವಿಭಾಗ,
ಕೆಎಂಸಿ, ಮಣಿಪಾಲ