Advertisement

International Democracy Day: ಉಡುಪಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಮಿಕ್ಕಿ ಮಂದಿ ಭಾಗಿ

01:42 AM Sep 16, 2024 | Team Udayavani |

ಉಡುಪಿ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ರಾಜ್ಯ ಸರಕಾರದ ಕರೆಯಂತೆ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಮಿಕ್ಕಿದ ಜನರು ಸೇರಿ ಮಾನವ ಸರಪಳಿ ರಚಿಸಿ ಗಮನ ಸೆಳೆದರು. 500 ಮೀ. ರಾಷ್ಟ್ರಧ್ವಜ, 500 ಮೀ. ನಾಡಧ್ವಜ, ಡೋಳು, ಚಂಡೆ, ಕುಡುಬಿ ಕುಣಿತ, ಯಕ್ಷಗಾನ ವೇಷಧಾರಿಗಳ ಕಲರವ ಪ್ರಮುಖ ಆಕರ್ಷಣೆಯಾಗಿತ್ತು.

Advertisement

ಜಿಲ್ಲೆಯ ಗಡಿಭಾಗವಾದ ಬೈಂದೂರು ತಾಲೂಕಿನ ಶಿರೂರು ಟೋಲ್‌ ಗೇಟ್‌ನಿಂದ ಕಾಪು ತಾಲೂಕಿನ ಹೆಜಮಾಡಿ ಸೇತುವೆವರೆಗೆ ರಾ. ಹೆದ್ದಾರಿ 66 ರಲ್ಲಿ ಸುಮಾರು 107 ಕಿ. ಮೀ ಉದ್ದದ ಮಾನವ ಸರಪಳಿ ರಚನೆ ಮಾಡಲಾಯಿತು. ಜಿಲ್ಲಾ ಮಟ್ಟದ ವೇದಿಕೆ ಕಾರ್ಯಕ್ರಮವನ್ನು ಉಡುಪಿಯ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿ, ತಾಲೂಕು ಮಟ್ಟದಲ್ಲಿ ಮರವಂತೆ, ಕುಂದಾಪುರ, ಬ್ರಹ್ಮಾವರ ಹಾಗೂ ಉಚ್ಚಿಲದಲ್ಲಿ ನಡೆಯಿತು. ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬಂದಿ, ಸರಕಾರಿ ನೌಕರರು, ವಿವಿಧ ಸಂಸ್ಥೆಗಳ ಸಿಬಂದಿ, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪರಸ್ಪರ ಕೈ ಹಿಡಿದುಕೊಂಡು ಮಾನವ ಸರಪಳಿ ರಚಿಸಿದರು.

ಚೆಂಡೆ ಬಾರಿಸಿ ಚಾಲನೆ
ಕಿನ್ನಿಮೂಲ್ಕಿಯಲ್ಲಿ ನಡೆದ ಕಾರ್ಯಕ್ರಮವನ್ನು ಚಂಡೆ ಬಾರಿಸುವ ಮೂಲಕ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಚಾಲನೆ ನೀಡಿದರು. ಅನಂತರ ಸಂವಿಧಾನ ಪೀಠಿಕೆ ಬೋಧಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್‌ ಎಸ್‌. ಗಂಗಣ್ಣವರ್‌ ಮಾತನಾಡಿ, ನಮ್ಮ ಜವಾಬ್ದಾರಿಗಳನ್ನು ಅಥೆìçಸಿಕೊಂಡಾಗ ಮಾತ್ರ ಹಕ್ಕುಗಳಿಗೆ ಅರ್ಥ ಬರುತ್ತದೆ. ನಾಗರಿಕನ ಜವಾಬ್ದಾರಿಯುತ ನಡವಳಿಕೆಯಿಂದ ದೇಶದ ಶಾಂತಿ ಸುವ್ಯವಸ್ಥೆ ಚೆನ್ನಾಗಿರುತ್ತದೆ. ಸಂವಿಧಾನದ ಆಶಯಗಳನ್ನು ನಮ್ಮ ನಡವಳಿಕೆಯಲ್ಲಿ ತೋರಿಸಬೇಕು. ಸಂವಿಧಾನದ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರ ಬಲಿದಾನಗಳಿಗೆ ಅರ್ಥ ನೀಡಬೇಕು ಎಂದರು.

ಕಿರು ಹೊತ್ತಗೆ ಬಿಡುಗಡೆ
ಜಿಲ್ಲಾ ಪಂಚಾಯತ್‌ ವತಿಯಿಂದ ರಚಿಸಿದ ಪ್ರಜಾಪ್ರಭುತ್ವ ಆಶಯದ ಕಿರು ಹೊತ್ತಗೆ ಬಿಡುಗಡೆಗೊಳಿಸಲಾಯಿತು.

Advertisement

ಮಾನವ ಸರಪಳಿ ಕಾರ್ಯಕ್ರಮದಲ್ಲಿ ಎರಡು ಕೈಗಳನ್ನು ಮೇಲೆತ್ತಿ ಜೈ ಹಿಂದ್‌, ಜೈ ಕರ್ನಾಟಕ ಘೋಷಣೆ ಕೂಗುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ಜಿ.ಪಂ. ಸಿಇಒ ಪ್ರತೀಕ್‌ ಬಾಯಲ, ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ| ಅರುಣ್‌ ಕೆ, ಎಎಸ್ಪಿ ಸಿದ್ದಲಿಂಗಯ್ಯ, ಡಿ.ಎಫ್.ಒ ಗಣಪತಿ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್‌. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅನಿತಾ ಮಡ್ಕೂರು, ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಟಾರ್‌, ರೋಟರಿಯ ಗವರ್ನರ್‌ ದೇವಾನಂದ್‌, ಬಡಗಬೆಟ್ಟು ಕೋ-ಆಪ್‌ ಸೊಸೈಟಿ ಅಧ್ಯಕ್ಷ ಜಯಕರ್‌ ಶೆಟ್ಟಿ ಇಂದ್ರಾಳಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಲ್ಪೆ ರಾಘವೇಂದ್ರ, ರೋಟರಿ ಕ್ಲಬ್‌ನ ಸದಸ್ಯರು, ಸಂಘ-ಸಂಸ್ಥೆಯ ಪದಾಧಿಕಾರಿಗಳು, ಯುವಕ-ಯುವತಿ ಮಂಡಳಿಗಳು, ಸ್ವ-ಸಹಾಯ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಈ ಸಂದರ್ಭ ಉಪಸ್ಥಿತರಿದ್ದರು. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್‌ ಶೆಟ್ಟಿ ನಿರೂಪಿಸಿ, ವಂದಿಸಿದರು.

ಮಾಹಿತಿ ರವಾನೆ ವ್ಯತ್ಯಾಸ
ಜಿಲ್ಲಾಡಳಿತದ ಸೂಚನೆಯಂತೆ ಬೆ. 9.30ರಿಂದ 10.30ರ ವರೆಗೆ ಕಾರ್ಯಕ್ರಮ ನಡೆಯಬೇಕಿತ್ತು. ಈ ಹಿನ್ನೆಲೆಯಲ್ಲಿ ಬೆಳಗ್ಗೆ 8.30ರಿಂದ ಜಿಲ್ಲೆಯ ರಾ.ಹೆ.ನಲ್ಲಿ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬಂದಿ ಸಹಿತ ಸಾರ್ವಜನಿಕರು ಸೇರಿದ್ದರು. 9.3ಕ್ಕೆ ಕಾರ್ಯಕ್ರಮ ಆರಂಭವಾದರೂ ಸರಿಯಾದ ಮಾಹಿತಿ ರವಾನೆ ಆಗದೇ ಇರುವುದರಿಂದ ಅನೇಕರಿಗೆ ಎಷ್ಟು ಹೊತ್ತಿಗೆ ಪೀಠಿಕೆ ಓದಬೇಕು, ಮಾನವ ಸರಪಳಿ ರಚಿಸಬೇಕು ಎಂಬುದು ಗೊತ್ತಾಗಲೇ ಇಲ್ಲ. ಜಿಲ್ಲಾ ಮಟ್ಟದ ಕಾರ್ಯಕ್ರಮ 10 ಗಂಟೆಗೆ ಮುಗಿದಿತ್ತು. ಎರಡು ನಿಮಿಷ ಮಾನವ ಸರಪಳಿ ಮಾಡಲಾಗಿತ್ತು. ಬೇರೆ ಕಡೆಗಳಲ್ಲಿ ಸರಿಯಾಗಿ ಮಾಹಿತಿ ಹೋಗಿರಲಿಲ್ಲ. ಕೆಲವರು 10.30ರ ವರೆಗೂ ರಸ್ತೆಯಲ್ಲಿ ಕಾದಿದ್ದಾ ರೆ. ಕೆಲವು ಕಡೆ ನೀರು, ಮಜ್ಜಿಗೆ ಸರಬರಾಜಿನಲ್ಲೂ ವ್ಯತ್ಯಾಸವಾಗಿದೆ.

ಶಾಸಕರು, ಸಂಸದರು ಭಾಗವಹಿಸಿಲ್ಲ:
ಉಡುಪಿಯ ಕಿನ್ನಿಮೂಲ್ಕಿಯಲ್ಲಿ ನಡೆದ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು ಅಥವಾ ಸಂಸದರು ಭಾಗವಹಿಸಲಿಲ್ಲ. ಬದಲಾಗಿ ಶಾಸಕರು ಉಡುಪಿಯ ಬೇರೆ ಕಡೆ ಹಾಗೂ ಸಂಸದರು ಕೋಟದಲ್ಲಿ ಮಾನವ ಸರಪಳಿಗೆ ಸೇರಿಕೊಂಡಿದ್ದರು. ಅಧಿಕೃತ ವೇದಿಕೆ ಕಾರ್ಯಕ್ರಮದಿಂದ ದೂರ ಉಳಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next