Advertisement
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್‌ಸಿಎ) ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಜಾಗ ನೀಡುವಂತೆ ಬೇಡಿಕೆ ಸಲ್ಲಿಸಿತ್ತು. ಪುತ್ತೂರು ನಗರ ಕೇಂದ್ರದಿಂದ ಐದು ಕಿ.ಮೀ. ದೂರದಲ್ಲಿರುವ ನಗರಸಭಾ ವ್ಯಾಪ್ತಿಯ ಕಬಕ ಗ್ರಾಮದ ಸರ್ವೆ ನಂಬರ್ 260/1 ಪಿ1ರಲ್ಲಿ 25 ಎಕರೆ ಸರಕಾರಿ ಜಮೀನನ್ನು ಕ್ರೀಡಾಂಗಣಕ್ಕೆ ಗುರುತಿಸಲಾಗಿತ್ತು.
Related Articles
2017ರ ಜು. 22ರಂದು ಕೆಎಸ್‌ಸಿಎ ಕಾರ್ಯದರ್ಶಿ ಆರ್. ಸುಧಾಕರ್ ರಾವ್ ಅವರು ಕ್ರೀಡಾಂಗಣಕ್ಕಾಗಿ ಪುತ್ತೂರಿನಲ್ಲಿ 25 ಎಕರೆ ಸರಕಾರಿ ಜಾಗ ದೀರ್ಘಾವಧಿ ಗುತ್ತಿಗೆ ಆಧಾರದಲ್ಲಿ ನೀಡುವಂತೆ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದರು. ಅನಂತರ ಕಂದಾಯ ಇಲಾಖೆ ಜಮೀನು ಗುರುತಿಸಿತ್ತು. ಈ ಜಾಗ ನಗರಸಭೆ ವ್ಯಾಪ್ತಿಗೆ ಒಳಪಡುವ ಕಾರಣ 2017 ಸೆ. 28ರಂದು ಅಂದಿನ ತಹಶೀಲ್ದಾರ್ ಪುತ್ತೂರು ನಗರಸಭೆಗೆ ಪತ್ರ ಬರೆದು, ಕೆಎಸ್‌ಸಿಎಗೆ ಗುತ್ತಿಗೆ ಆಧಾರದಲ್ಲಿ ನೀಡುವ ಬಗ್ಗೆ ನಿರಾಕ್ಷೇಪಣ ಪತ್ರ ನೀಡುವಂತೆ ಮನವಿ ಮಾಡಿದ್ದರು. ನಗರಸಭೆ ಸಾಮಾನ್ಯ ಸಭೆಗಳಲ್ಲಿ ಚರ್ಚೆ ನಡೆದು ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿ ಕೊನೆಗೆ 2018 ಜನವರಿಯಲ್ಲಿ ನಗರಸಭೆ ಎನ್‌ಒಸಿ ನೀಡಿತ್ತು.
ಜಿಲ್ಲಾಧಿಕಾರಿ ಮಟ್ಟದಲ್ಲಿ ಒಪ್ಪಿಗೆ: ನೀಲ ನಕಾಶೆ ಸಲ್ಲಿಸಲು ಸೂಚನೆ
ಮಾಹಿತಿ ಕೇಳಿದ್ದಾರೆ25 ಎಕರೆ ಭೂಮಿ ಕೊಟ್ಟರೆ ಅಲ್ಲಿ ಕೈಗೊಳ್ಳುವ ಉದ್ದೇಶಿತ ಕಾಮಗಾರಿಯ ನೀಲ ನಕಾಶೆ ಹಾಗೂ ಬ್ಯಾಂಕ್ ಖಾತೆ ವಿವರ ನೀಡುವಂತೆ ತಹಶೀಲ್ದಾರ್ ಅವರು ಪತ್ರ ಮುಖೇನ ಕೇಳಿದ್ದಾರೆ. ಬ್ಯಾಂಕ್ ಖಾತೆ ವಿವರ ಸಲ್ಲಿಸಲಾಗುವುದು. ಭೂಮಿ ಕೊಟ್ಟ ಮೇಲೆ ಅಲ್ಲಿ ಕೈಗೊಳ್ಳುವ ಕಾಮಗಾರಿ ಬಗ್ಗೆ ನೀಲ ನಕಾಶೆ ಕೊಡಬಹುದು. ಮೊದಲು ನೀಡುವುದು ಅಸಾಧ್ಯ. ಈ ಕುರಿತಂತೆ ತಹಶೀಲ್ದಾರ್ ಅವರನ್ನು ಭೇಟಿ ಮಾಡಲಾಗುವುದು.
– ಮನೋಹರ ಅಮೀನ್, ವಲಯ ಸಮನ್ವಯಕಾರ, ಕೆಎಸ್‌ಸಿಎ
ಎನ್‌ಒಸಿ ನೀಡಿದ್ದೇವೆ ಕೆಎಸ್‌ಸಿಎಗೆ ಗುತ್ತಿಗೆ ಆಧಾರದಲ್ಲಿ ನೀಡುವ ಬಗ್ಗೆ ನಿರಾಕ್ಷೇಪಣ ಪತ್ರ ನೀಡುವಂತೆ ಕಂದಾಯ ಇಲಾಖೆ ಮಾಡಿದ ಮನವಿಯಂತೆ ಸಾಮಾನ್ಯ ಸಭೆಯಲ್ಲಿ ಇರಿಸಿ ಅದರಂತೆ ಎನ್‌ಒಸಿ ನೀಡಲಾಗಿದೆ.
– ರೂಪಾ ಟಿ. ಶೆಟ್ಟಿ ಪೌರಾಯುಕ್ತೆ, ಪುತ್ತೂರು ನಗರಸಭೆ
Advertisement