Advertisement

ಅಂತರಂಗ ಸಂಪತ್ತು ಮುಖ್ಯ

08:55 PM Jan 17, 2020 | Lakshmi GovindaRaj |

ಮನುಷ್ಯನ ಪರಿಪೂರ್ಣ ಜೀವನಕ್ಕೆ ಸಂಪತ್ತು ಅವಶ್ಯ. ಸಂಪತ್ತಿನಲ್ಲಿ ಬಹಿರಂಗ ಮತ್ತು ಅಂತರಂಗ ಸಂಪತ್ತುಗಳೆಂದು ಎರಡು ಭಾಗಗಳನ್ನಾಗಿ ಮಾಡಲಾಗಿದೆ. ಬಹಿರಂಗ ಸಂಪತ್ತು ಹಣ, ವಸ್ತು, ಒಡವೆಗಳಿಂದ ಕೂಡಿದ್ದರೆ, ಅಂತರಂಗ ಸಂಪತ್ತು ಶಾಂತಿ, ನೆಮ್ಮದಿಗಳಿಂದ ಕೂಡಿದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಮನುಷ್ಯನಿಗೆ ಬಹಿರಂಗ ಸಂಪತ್ತಿದ್ದು, ಅಂತರಂಗ ಸಂಪತ್ತಿಲ್ಲದಿದ್ದರೆ ಆತ ನ ಜೀವನ ಪ್ರಾಣಿಗಳಿಗಿಂತ ಕೀಳು.

Advertisement

ನಾವು ಇನ್ನೊಬ್ಬರಿಗೆ ಮಾದರಿಯಾಗುವಂತೆ ಜೀವನ ನಡೆಸಬೇಕು. ನಮ್ಮಿಂದ ಇನ್ನೊಬ್ಬರು ಕಲಿಯುವಂತೆ ಜೀವನ ನಡೆಸಬೇಕು. ನಮ್ಮ ಜೀವನ ಮುಂದಿನ ಪೀಳಿಗೆಗೆ ದಾರಿಯಾಗಬೇಕು. ಆಗ ನಮಗೆ ಬದುಕು ನಡೆಸಲು ಕಲಿಸಿದ ದೇವನಿಗೆ ಪ್ರೀತಿ ಹುಟ್ಟುತ್ತದೆ. ಸುಂದರ ಬದುಕು ಕಟ್ಟಿಕೊಳ್ಳಲು ಶ್ರೀಮಂತಿಕೆ ಒಂದೇ ಅವಶ್ಯವಲ್ಲ. ಮನುಷ್ಯನ ಅಂತರಾಳದಲ್ಲಿನ ನಿಷ್ಕಲ್ಮಷವಾದ ಮನಸ್ಸು ಬಹು ಮುಖ್ಯ.

ಮನುಷ್ಯನ ಜೀವನದಲ್ಲಿ ಇನ್ನೊಬ್ಬರ ಅಂತಸ್ತು ನೋಡಿ ಅಸೂಯೆ ಪಡುವುದಕ್ಕಿಂತ ಅವರನ್ನು ನೋಡಿ ನಾವು ಬೆಳೆಯುವುದನ್ನು ಕಲಿಯಬೇಕು. ಆಗ ನಮ್ಮ ಜೀವನದಲ್ಲಿ ಬೆಳಕು ಕಾಣಬಹುದು. ಭೂಮಿಯಲ್ಲಿ ಹುಟ್ಟಿದ ನಮಗೆಲ್ಲ ಬದುಕು ಕೊಟ್ಟ ದೇವನು ಕೂಡ ಹೊಟ್ಟೆಕಿಚ್ಚು ಪಡುವಂತೆ ನಾವು ಬದುಕಬೇಕು. ನಮ್ಮ ಮನಸ್ಸಿನಲ್ಲಿರುವ ಭಯ ತೊರೆದು ನೆಮ್ಮದಿಯಾಗಿ ಬದುಕಲು ಮುಂದಾಗಬೇಕು.

ಭೂತಕಾಲದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡು ಕಂಪಿಸುವುದು, ಮುಂದೆ ಹೀಗೆ ನಡೆಯುತ್ತದೆ ಎಂದು ಊಹಿಸಿಕೊಂಡು ಭಯ ಪಡುವುದಕ್ಕಿಂತ ನಿನ್ನೆ-ನಾಳೆಯದನ್ನು ಮರೆತು ಈಗಿನ ಕ್ಷಣವನ್ನು ಸಂತೋಷದಿಂದ ಅನುಭವಿಸುವುದನ್ನು ಕಲಿಯಬೇಕು.

ಭಯ ಹೋಗಲಾಡಿಸಲು ಮೂರು ದಾರಿಗಳಿವೆ
1. ಬಂದಿದ್ದನ್ನು ಯಥಾವತ್ತಾಗಿ ಸ್ವೀಕರಿಸುವುದು.
2. ಸಾಮರ್ಥ್ಯಕ್ಕೆ ನೀಗುವಷ್ಟು ಮಾಡಿ, ಉಳಿದಿದ್ದನ್ನು ಆ ದೇವರಿಗೆ ಬಿಡಬೇಕು.
3. ಭಯ ಕಾಡುತ್ತಿದೆ ಎನ್ನುವಾಗ ಶಕ್ತಿ, ಸಮಯವನ್ನು ಸೃಜನಾತ್ಮಕ ಕೆಲಸಗಳಿಗೆ ಬಳಸಬೇಕು.

Advertisement

ಹೀಗೆ ಮಾಡಿದಾಗ, ಭಯ ಹೋಗಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ. ಭೂಮಿಯ ಎಲ್ಲಾ ವಸ್ತುಗಳೂ ಭಯದ ನೆರಳೊಳಗೆ ಬದುಕುತ್ತಿವೆ. ನೆರಳೊಳಗೆ ಬದುಕದ ಭೂಮಿಯ ಮೇಲಿನ ವಸ್ತುವೆಂದರೆ ಅದು ವೈರಾಗ್ಯ ಮಾತ್ರ. ಜೀವನದಲ್ಲಿ ಬರುವ ಎಲ್ಲವನ್ನೂ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕಾದ ಮನುಷ್ಯರು, “ಬಂದದ್ದು ಬರಲಿ ನಿನ್ನ ದಯೆ ಇರಲಿ’ ಎಂದು ದೇವರಿಗೆ ಬಿಡಬೇಕು. ಅಲ್ಲದೇ ನಾನು, ನನ್ನದು ಎಂದುಕೊಳ್ಳದೇ “ಎಲ್ಲಾ ದೇವರದ್ದು’ ಎನ್ನುವ ಮೂಲಕ ನಿಸ್ವಾರ್ಥತೆ ಮೆರೆಯಬೇಕು.

* ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ, ಗವಿಮಠ, ಕೊಪ್ಪಳ

Advertisement

Udayavani is now on Telegram. Click here to join our channel and stay updated with the latest news.

Next