Advertisement

Karnataka Polls ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ರದ್ದು: ಸಿಎಂ ಬೊಮ್ಮಾಯಿ

06:22 PM Apr 20, 2023 | Team Udayavani |

ಕಲಬುರಗಿ: ಶೋಷಿತ ಸಮುದಾಯಗಳಿಗೆ ನ್ಯಾಯ ಬದ್ದ ಮೀಸಲಾತಿ ಕಲ್ಪಿಸಿರುವ ರಾಜ್ಯ ಬಿಜೆಪಿ‌ ಸರ್ಕಾರದ ಮೀಸಲಾತಿಗೆ ಕಾಂಗ್ರೆಸ್ ವಿರೋಧವಿದ್ದು, ಹೀಗಾಗಿ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೀಳುವ ಒಂದೊಂದು ಮತವೂ ಒಳ ಮೀಸಲಾತಿ ರದ್ದುಗೊಳ್ಳಲು ಸಹಾಯ ಮಾಡಿದಂತಾಗಿರುವುದರಿಂದ ಯೋಚಿಸಿ ಮತ ಹಾಕಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನತೆಗೆ ಕರೆ ನೀಡಿದರು.

Advertisement

ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ಪರ ಆಯೋಜಿಸಲಾದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಳ ಹಾಗೂ ಒಳಮೀಸಲಾತಿ ಜಾರಿಗೊಳಿಸುವುದು ಎಂದರೆ ಜೇನುಗೂಡಿಗೆ ಕೈ ಹಾಕಿದಂತೆ ಎಂದು ಕೆಲವರು ಎಚ್ಚರಿಸಿದ್ದರು. ಆದರೆ ಜೇನು ಕಚ್ಚಿಸಿಕೊಂಡು ಜನರಿಗೆ ಉತ್ತಮ‌ ಕೆಲಸ ಮಾಡಿ ಕೊಡಲಾಗಿದೆ.‌ ಇದಕ್ಕೆ ಜನರು ಖುಷಿ ಇರುವಾಗ, ಕಾಂಗ್ರೆಸ್ ಹುಳಿ ಹಿಂಡುವ ಕೆಲಸ ಮಾಡುತ್ತಿದೆ ಎಂದು ಸಿಎಂ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನವರು ಮೀಸಲಾತಿ ಕುರಿತು ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಳ ಮೀಸಲಾತಿ ಹೆಚ್ಚಳ ಕುರಿತು ಮೌನ ವಹಿಸಿದ್ದು ಏಕೆ ಎಂದು ಖಾರವಾಗಿ ಪ್ರಶ್ನಿಸಿದರು.

ಹಿಂದಿನ ನಡೆ ನೋಡಿದರೆ ಕಾಂಗ್ರೆಸ್ ಎಂದಿಗೂ ಸಾಮಾಜಿಕ ‌ನ್ಯಾಯದ‌ ಪರ ಇರಲಿಲ್ಲ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕಲ್ಯಾಣ ‌ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಕೇವಲ 1000 ಕೋಟಿ ರೂ ಹಂಚಿಕೆ ಮಾಡಿ ಅದರಲ್ಲಿ ಬರೀ 300 ಕೋಟಿ ಬಿಡುಗಡೆ ಮಾಡಿದ್ದರು. ನಾವು 3000 ಕೋಟಿ ಘೋಷಣೆ ಮಾಡಿ ಅಷ್ಟೂ ಹಣ ಬಿಡುಗಡೆ ಮಾಡಿದ್ದೇವೆ. ‌ಇದು ನಿಜವಾದ ಅಭಿವೃದ್ಧಿ ಎಂದರು.

Advertisement

ಕಲ್ಯಾಣ ಕರ್ನಾಟಕ ಭಾಗಕ್ಕೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಂದು ಹುದ್ದೆಯನ್ನೂ ಭರ್ತಿ ಮಾಡಲಿಲ್ಲ. ನಾವು 14000 ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಇಷ್ಟು ವರ್ಷ ಅಧಿಕಾರದಲ್ಲಿದ್ದರೂ ಕೇವಲ 25 ಲಕ್ಷ ಮನೆಗಳಿಗೆ ನಲ್ಲಿ ನೀರು ಕಲ್ಪಿಸಿತು. ಆದರೆ ಡಬಲ್ ಇಂಜಿನ್ ಸರ್ಕಾರ ಕೇವಲ ಮೂರು ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ ನಳದ ಸಂಪರ್ಕ ಕಲ್ಪಿಸಿದ್ದೇವೆ. ರೈತರು, ನೇಕಾರರು, ಮೀನುಗಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕಲ್ಪಿಸಿದ್ದೇವೆ.‌ ಕಲ್ಯಾಣ ಕರ್ನಾಟಕದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರ ಶಾಲಾ ಕೋಣೆಗಳ ನಿರ್ಮಾಣ ಕ್ಕೆ ಅನುದಾನ ನೀಡಲಾಗಿದೆ ಎಂದು ವಿವರಿಸಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುದಾನ ನೀಡಿದ್ದರಿಂದ ಹಾಗೂ ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಮೆಗಾ ಟೆಕ್ಸ್ ಟೈಲ್ ಪಾರ್ಕ್ ತಂದಿರುವುದರಿಂದ ಬಿಜೆಪಿಗೆ ಬೆಂಬಲಿಸಬೇಕೆಂದರು.

ಪಕ್ಷದ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ‘ಕ್ಷೇತ್ರದ ಕೆಲ ತುಕಡೆ ತುಕಡೆ ಗ್ಯಾಂಗ್ ಗಳು ನನಗೂ, ನನ್ನ ತಮ್ಮನಿಗೂ ಜಗಳ ಹಚ್ಚಿವೆ. ಅವರಿಗೆ ಯಾವ ಕಾರಣಕ್ಕೂ ಅವಕಾಶ ನೀಡಬಾರದು. ಅವಕಾಶ ಕೊಟ್ಟರೆ ಅಫಜಲಪುರವನ್ನು ಇಬ್ಭಾಗ ಮಾಡಲಿವೆ’ ಎಂದು ಎಚ್ಚರಿಸಿದರು.

ಕೇಂದ್ರ ಸಚಿವ ಭಗವಂತ ಖೂಬಾ, ಜಾರ್ಖಂಡ್ ಸಂಸದ ನಿಶಿಕಾಂತ ದುಬೆ, ಶಾಸಕ ಸುಭಾಷ್ ಗುತ್ತೇದಾರ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್, ಕಲಬುರಗಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಾಧ್ಯಕ್ಷ ಅಶೋಕ ಬಗಲಿ, ಅವ್ವಣ್ಣ ಮ್ಯಾಕೇರಿ, ಬಿಜೆಪಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಚಂದಮ್ಮ ಪಾಟೀಲ್, ಮುಖಂಡರಾದ ಶಿವಕಾಂತ ಮಹಾಜನ್ ಸೇರಿದಂತೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next