Advertisement

ಒಳ ಮೀಸಲು: 31ಕ್ಕೆ ಸಿಎಂ ಜತೆ ನಾಯಕರ ಸಭೆ

09:08 AM Dec 13, 2017 | |

ಬೆಂಗಳೂರು: ಒಳ ಮೀಸಲಾತಿಗೆ ಸಂಬಂಧಿಸಿದಂತೆ ವಿಧಾನಸಭೆ ಚುನಾವಣೆಗೆ ಮುನ್ನ ಮಹತ್ವದ ತೀರ್ಮಾನ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದು, ಡಿ.31ರಂದು ಎಡಗೈ ಹಾಗೂ ಬಲಗೈ ನಾಯಕರ ಸಭೆ ಕರೆದಿದ್ದಾರೆ. ಈ ಮೂಲಕ ಎರಡೂ ಸಮುದಾಯದ ನಾಯಕರ ಜತೆ ಸಮಾಲೋಚನೆ ನಡೆಸಿ ಒಮ್ಮತದ ಅಭಿಪ್ರಾಯದೊಂದಿಗೆ ಸದಾಶಿವ ಆಯೋಗದ ವರದಿ ಜಾರಿ ಕುರಿತು ತೀರ್ಮಾನ ಕೈಗೊಳ್ಳಲು ಮುಂದಾಗಿದ್ದಾರೆ.

Advertisement

ಅಂದಿನ ಸಭೆಗೆ ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ, ಸಚಿವರಾದ ಎಚ್‌.ಸಿ.ಮಹದೇವಪ್ಪ, ಎಚ್‌.ಆಂಜನೇಯ, ಆರ್‌.ಬಿ.ತಿಮ್ಮಾಪುರ್‌, ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಸಚಿವರಾದ ಬೋವಿ ಸಮುದಾಯದ ಶಿವರಾಜ್‌ ತಂಗಡಗಿ, 
ಲಂಬಾಣಿ ಸಮುದಾಯದ ರುದ್ರಪ್ಪ ಲಮಾಣಿ ಅವರಿಗೆ ಆಹ್ವಾನ ನೀಡಲಾಗಿದೆ.

ಮಂಗಳವಾರ ಈ ಸಂಬಂಧ ತಮ್ಮನ್ನು ಭೇಟಿಯಾಗಿದ್ದ ಕೆ.ಎಚ್‌.ಮುನಿಯಪ್ಪ, ಎಚ್‌ .ಸಿ.ಮಹದೇವಪ್ಪ, ಆಂಜನೇಯ, ತಿಮ್ಮಾಪುರ್‌
ನಿಯೋಗಕ್ಕೂ, ಡಿ.31ರ ಸಭೆಯಲ್ಲಿ ಎಲ್ಲವನ್ನೂ ಸಮಗ್ರವಾಗಿ ಚರ್ಚಿಸೋಣ. ಎಲ್ಲರ ಒಪ್ಪಿಗೆಯಿಂದಲೇ ಜಾರಿಗೆ ಕ್ರಮ ಕೈಗೊಳ್ಳೋಣ.
ಯಾರೂ ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಸೂಚಿಸಿದರು ಎನ್ನಲಾಗಿದೆ. ಸೋಮವಾರ ಸದಾಶಿವ ಆಯೊಗದ ವರದಿ ಜಾರಿಗೆ ಆಗ್ರಹಿಸಿ ಹೋರಾಟ ನಡೆಸಿದ ಮಾದಿಗ ದಂಡೋರ ಸಮಿತಿಯ ಪದಾಧಿಕಾರಿಗಳ ಜತೆಯೂ ಸಿದ್ದರಾಮಯ್ಯ ಮಂಗಳವಾರ ಸಮಾಲೋಚನೆ ನಡೆಸಿದರು.

ಈ ಮಧ್ಯೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಮಂಗಳವಾರ ಬೆಳಗ್ಗೆ ದಿಢೀರ್‌ ಸಚಿವ ಆಂಜನೇಯ ನಿವಾಸಕ್ಕೆ ಆಗಮಿಸಿ ಉಪಾಹಾರ ಸೇವಿಸಿ ಒಂದು ಗಂಟೆ ಕಾಲ ಸಮಾಲೋಚನೆ ನಡೆಸಿದರು. ಸದಾಶಿವ ಆಯೋಗದ ವರದಿ ಜಾರಿ ಬಗ್ಗೆ ಉಭಯ ನಾಯಕರು ಚರ್ಚಿಸಿದರು ಎಂದು ಹೇಳಲಾಗಿದೆ. ಆದರೆ, ಆ ರೀತಿಯ ಯಾವುದೇ ಚರ್ಚೆ ನಡೆದಿಲ್ಲ ಎಂದು ಡಾ.ಜಿ.ಪರಮೇಶ್ವರ್‌ ಹಾಗೂ ಆಂಜನೇಯ ಇಬ್ಬರೂ ಸ್ಪಷ್ಟಪಡಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next