ಪರೀಕ್ಷೆ ಅಂದರೆ ಯಾರಿಗೆ ಇಷ್ಟ ಹೇಳಿ, ಎಲ್ಲರಿಗೂ ಕಷ್ಟಾನೇ. ಅದರಲ್ಲೂ ನಾವು ಲಾಸ್ಟ್ ಬೆಂಚರ್. ನಮಗೆ ಪರೀಕ್ಷೆ ಅಂದ್ರೆ ಒಂದು ಅಡ್ವೆಂಚರ್ ಇದ್ದ ಹಾಗೆ. ನಾವು ಓದುವ ಸಾಹಸ ಮಾಡಲು ಹೊರಡುವುದು ಪರೀಕ್ಷೆಯ ಹಿಂದಿನ ದಿನ. ಕೆಲವೊಂದು ಸಲ ಇಂತಹ ಸಾಹಸ ಮಾಡುವ ಆಲೋಚನೆಯನ್ನು ಕೈಬಿಟ್ಟು ಅಪರಾಹ್ನದ ಪರೀಕ್ಷೆಗೆ ಬೆಳಿಗ್ಗೆ ಎದ್ದು ಓದುವ ಸಾಹಸವನ್ನು ಮಾಡಿದ್ದುಂಟು. ಹೀಗೆ ಮಾಡಿ ಫಜೀತಿಗೊಳಗಾಗಿದ್ದು ಇದೆ. ಅದು ಇದೇ ವರ್ಷದ ಎರಡು ಇಂಟರ್‌ನಲ್ ಎಕ್ಸಾಮ್ ಸಮಯದಲ್ಲಿ ನಡೆದದ್ದು.
ನಾನು ಹಾಗೂ ನನ್ನ ಇಬ್ಬರು ಗೆಳತಿಯರೂ, ಮನೆಯಲ್ಲಿ ಓದಿದರೆ ವಿಷಯ ಅರ್ಥ ಆಗದ ಕಾರಣ, ಎಲ್ಲವನ್ನು ಕಾಲೇಜಿನಲ್ಲಿ ಬಂದು ಗುಂಪು ಮಾಡಿಕೊಂಡು ಕಲಿಯುವ ಅಂತ ಫ್ಲ್ಯಾನ್ ಹಾಕಿಕೊಂಡು ಬಂದಿದ್ದೆವು. ದಿನಕ್ಕೆ ಎರಡು ಪರೀಕ್ಷೆ ಇದ್ದ ಕಾರಣ 4 ಪರೀಕ್ಷೆಯನ್ನು ಹೇಗೋ ಮುಗಿಸಿದೆವು. ಮೂರನೆಯ ದಿನ ಇದ್ದದ್ದು ಲಿಟರೇಚರ್ ಮತ್ತು ಜನರಲ್ ಸ್ಟಡೀಸ್ ಎಕ್ಸಾಮ್. ಜನರಲ್ ಸ್ಟಡೀಸ್‌ನಲ್ಲಿ ಟಿಕ್ಕಿಂಗ್ ಇರುವ ಕಾರಣ ಅದನ್ನು ಗಾಳಿಗೆ ತೂರಾಡಿಸಿ ಬಿಟ್ಟಿದ್ದೆವು. ಇನ್ನೊಂದು ಲಿಟರೇಚರ್. ತರಗತಿಯಲ್ಲಿ ಏನು ನಡೆದಿದೆ ಎನ್ನುವ ಪರಿವೇ ಇಲ್ಲ. ಅಲ್ಲದೆ ಅದು ಯಾರು ಯಾರೊ ಬರೆದ ಸಾಹಿತ್ಯವಾಗಿತ್ತು. ಭಾಷೆ ಇಂಗ್ಲಿಶ್. ವಿದೇಶಿ ಇಂಗ್ಲಿಶ್ ಆದ್ದರಿಂದ ಕೆಲವೊಂದು ಪದಗಳನ್ನು ಇಲ್ಲಿಯವರೆಗೆ ಕೇಳಿಯೂ ಇರಲಿಲ್ಲ. ಆ ಕಾರಣದಿಂದಾಗಿ ಮನೆಯಲ್ಲಿ ಓದಿದ್ದು ತಲೆಯಲ್ಲಿ ಉಳಿಯುವುದಿಲ್ಲ. ಇನ್ನು ಕಾಲೇಜಿನಲ್ಲೆ ಚರ್ಚೆ ಮಾಡುವುದು ಒಳ್ಳೆಯದು ಎಂದು ಬೆಳಗ್ಗೆಯೇ ಕಾಲೇಜಿನತ್ತ ಹೊರಟೆವು.
ಕಾಲೇಜಿಗೆ ಬೇಗ ತಲುಪಿದೆವು. ಆದರೆ, ಅಲ್ಲಿ ನಡೆದದ್ದೇ ಬೇರೆ. ಬಹಳ ದೊಡ್ಡ ವಿಷಯವೇನಲ್ಲ. ನಾವು ಹೋದಾಗ ಒಬ್ಬರು ಸರ್ ಬಂದು ಕರೆದರು. ಒಂದು ಸಲಕ್ಕೆ ಭಯವಾಯಿತು. ಮತ್ತೆ ವಿಷಯ ಏನೆಂದು ಅರಿತಾಗ ಸಮಾಧಾನವಾಯಿತು. ಮೊದಲನೆಯ ವರ್ಷದ ಹುಡುಗಿಯೊಬ್ಬಳ ಆರೋಗ್ಯ ಸ್ವಲ್ಪ ಹದಗೆಟ್ಟಿತ್ತು. ರಾತ್ರಿಯಿಡೀ ನಿದ್ದೆಗೆಟ್ಟು ಓದಿರಬೇಕು, ಅದಕ್ಕೆ ಹೀಗಾಗಿದೆ ಎಂದು ಒಬ್ಬ ಟೀಚರ್ ಹೇಳಿದರು. ನಂತರ ಅವಳನ್ನು ಕರೆದುಕೊಂಡು ಹೋಗಲು ಹೇಳಿದರು. ನಾವು ಇತರ ಶಿಕ್ಷಕರಿಗೆ ತಿಳಿಸಿ ಅವಳನ್ನು ಬೇರೆ ಕೊಠಡಿಗೆ ಕರೆದುಕೊಂಡು ಹೋದೆವು. ಹೋದದ್ದೇನೋ ಹೌದು, ಆದರೆ ಮಧ್ಯಾಹ್ನ ಪರೀಕ್ಷೆ ಇದೆ. ಅದರದ್ದೇ ಆಲೋಚನೆ ನಮ್ಮ ತಲೆಯಲ್ಲಿತ್ತು. ಸ್ವಲ್ಪವಾದರೂ ಓದಿ ಇರಿ¤ದ್ರೆ ಪರೀಕ್ಷೆಯ ಬಗ್ಗೆ ಆಲೋಚನೆ ಮಾಡ್ತಿರ್ಲಿಲ್ಲ. ಆದರೆ, ಆವತ್ತು ಸ್ವಲ್ಪವೂ ತಿಳಿದಿರಲಿಲ್ಲ. ಅವೆಲ್ಲವನ್ನು ತಲೆಯ ಒಂದು ಭಾಗದಲ್ಲಿ ಇಟ್ಟು ಆ ಹುಡುಗಿಯ ಬಗ್ಗೆ ತಿಳಿದುಕೊಂಡು ನಂತರ ಸ್ವಲ್ಪ ಹೊತ್ತು ಅವಳ ಆರೈಕೆ ಮಾಡಿದೆವು. ಅಮೇಲೆ ಮೇಡಮ್ ಹೇಳಿದರು, “ನಿಮಗೆ ಎಕ್ಸಾಮ್ ಉಂಟಲ್ಲ, ನೀವು ಹೋಗಿ’ ಹಾಗೇ ಅಲ್ಲಿಂದ ಹೋದೆವು.
ಗಂಟೆ 12 ಆಗಿತ್ತು. ಒಂದೂವರೆಗೆ ಎಕ್ಸಾಮ್ ಇದೆ. ನಮ್ಮದು ಇನ್ನು ಓದಿ ಆಗಿಲ್ಲ. ನಂತರ ಹೋದದ್ದು ನಮ್ಮ ತರಗತಿಯ ಟಾಪರ್ ಹತ್ರ. ಆ ಒಂದು ಗಂಟೆಯಲ್ಲಿ ಅವರು ವಿವರಿಸಿದ್ದು ಎಷ್ಟೋ ಸಾಕಾಗಿದೆ. ಒಳ್ಳೆ ಅಂಕಗಳಲ್ಲಿ ಪಾಸ್ ಆಗಿದ್ದೆವು.
ನಮ್ಮ ಟೀಚರ್ ಹೇಳ್ತಿದ್ರು, ನಾವು ಮಾಡಿದ ಸಹಾಯವನ್ನು ಮರೆತು ಬಿಡಬೇಕು ಎಂದು. ಆದರೂ ಇಲ್ಲಿ ಬರೆಯುವ ಅಂತ ಅನ್ನಿಸಿದ್ದು ಯಾಕೆ ಅಂದ್ರೆ ಇದು ನಮ್ಮ ಜೀವನದಲ್ಲಿ ನಡೆದ ಒಂದು ದೊಡ್ಡ ಅಡ್ವೆಂಚರ್ ಆಗಿತ್ತು. ಆ ಒಂದು ಕ್ಷಣದಲ್ಲಿ ಅನ್ನಿಸಿದ್ದು ನಾವು ತುಂಬಾ ಹೊತ್ತು ಅಲ್ಲೇ ಇರುತ್ತಿದ್ದರೆ ನಮ್ಮ ರಿಸಲ್ಟ್ ಯಾವ ರೀತಿ ಬರುತಿತ್ತು? ಅಂತ. ಆ ಹೊತ್ತು ಪರೀಕ್ಷೆಯ ಟೆನನ್ ಎಷ್ಟಿತ್ತು ಅಂದ್ರೆ ಅಲ್ಲಿ ಇದ್ದ ಹುಡುಗಿ ಯಾರೂ ಅಂತಲೂ ನೆನಪಿಲ್ಲ. ಆ ದಿನದಿಂದಲೇ ನಾನಾ ಒಂದು ನಿರ್ಧಾರಕ್ಕೆ ಬಂದುಬಿಟ್ಟೆವು. ಪರೀಕ್ಷೆಗೆ ಸಾಕಷ್ಟು ಮೊದಲೇ ಓದುವುದು ಒಳ್ಳೆಯದು, ಅದೇ ದಿನ ತರಾತುರಿಯಿಂದ ಓದುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದುಬಿಟ್ಟೆ.
ಜಯಶ್ರೀ ಆರ್ಯಾಪು
ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ,
ವಿವೇಕಾನಂದ ಕಾಲೇಜು, ಪುತ್ತೂರು