ಬೆಂಗಳೂರು: ದೊಡ್ಡಬಿದರಕಲ್ಲು, ಹೊಸಕೆರೆಹಳ್ಳಿ ಹಾಗೂ ಹುಳಿಮಾವು ಕೆರೆಗಳ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಆರ್.ಶ್ರೀನಿವಾಸ ಮೂರ್ತಿ ಅವರ ನೇತೃತ್ವದ ಸಮಿತಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿದೆ.
ಹೈಕೋರ್ಟ್‌ಗೂ ಮಧ್ಯಂತರ ವರದಿ ಸಲ್ಲಿಸಲಾಗಿದ್ದು, ಇದರ ನಡಾವಳಿ ಜ.13ರಂದು ಆಗಲಿದೆ. ಈ ಮಧ್ಯೆ ಈ ಮೂರು ಕೆರೆಗಳ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಬೇಕಿರುವುದರಿಂದ ಸಂಪೂರ್ಣ ವರದಿ ಸಲ್ಲಿಸಲು ಮತ್ತು ನಗರದ ಕೆರೆಗಳ ಬಗ್ಗೆ ಅಧ್ಯಯನ ನಡೆಸಲು ಎರಡು ತಿಂಗಳ ಕಾಲಾವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಮಿತಿ ಮುಂದಾಗಿದೆ.
ಇತ್ತೀಚೆಗೆ ನಗರದಲ್ಲಿ ಕೆರೆಗಳ ಕೋಡಿ, ಏರಿ ಒಡೆದು ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಡಿ.2ರಂದು ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಬಿ.ಆರ್.ಶ್ರೀನಿವಾಸ ಮೂರ್ತಿ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ತಾಂತ್ರಿಕ ಸಮಿತಿ ರಚಿಸಿತ್ತು.
ಮೂರೂ ಕೆರೆಗಳ ದುರಂತಕ್ಕೆ ಸಂಬಂಧಿಸಿದಂತೆ ಹಾಗೂ ಭವಿಷ್ಯದಲ್ಲಿ ಈ ರೀತಿ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಶಿಫಾರಸು ಮಾಡುವಂತೆಯೂ ಸಮಿತಿಗೆ ಸೂಚನೆ ನೀಡಲಾಗಿತ್ತು.
ಸಮಿತಿಯು ಈಗಾಗಲೇ ದೊಡ್ಡಬಿದರಕಲ್ಲು, ಹೊಸಕೆರೆಹಳ್ಳಿ ಕೆರೆ ಹಾಗೂ ಹುಳಿಮಾವು ಕೆರೆಗಳ ಪರಿಶೀಲನೆ ನಡೆಸಿದ್ದು, ಈ ಕೆರೆಗಳ ನ್ಯೂನತೆಗಳ ಬಗ್ಗೆ ಸರ್ಕಾರಕ್ಕೆ ಮಧ್ಯಂತರ ವರದಿ ನೀಡಿದೆ. ಈ ಮೂರು ಕೆರೆಗಳ ಜತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಯ್ದ 60 ಕೆರೆಗಳ ಬಗ್ಗೆಯೂ 10 ದಿನಗಳ ಒಳಗಾಗಿ ವರದಿ ನೀಡುವಂತೆ ಸಮಿತಿಗೆ ಸರ್ಕಾರ ಸೂಚನೆ ನೀಡಿತ್ತು.
ಹಲವು ಕೆರೆಗಳ ಪರಿಶೀಲನೆ ನಡೆಸುವುದು ಮತ್ತು ಅವುಗಳ ಬಗ್ಗೆ ಅಧ್ಯಯನ ಮಾಡುವುದಕ್ಕೆ ಕಾಲಾವಕಾಶ ಬೇಕಿರುವ ಹಿನ್ನೆಲೆಯಲ್ಲಿ ಹಾಗೂ ನಿಖರವಾದ ವರದಿ ನೀಡುವ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಎರಡು ತಿಂಗಳು ಸಮಯ ಕೋರಿ ಸರ್ಕಾರಕ್ಕೆ ಪತ್ರ ಬರೆಯಲು ಸಮಿತಿ ನಿರ್ಧರಿಸಿದೆ.