ಹುಬ್ಬಳ್ಳಿ: ‘ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವುದಿಲ್ಲ. ಎರಡೂ ಪಕ್ಷ ಸೇರಿ ಸರ್ಕಾರ ರಚಿಸಿರುವಾಗ ಸಣ್ಣಪುಟ್ಟ ಸಮಸ್ಯೆಗಳು ಸಾಮಾನ್ಯ. ಮೈತ್ರಿ ಸರ್ಕಾರದಲ್ಲಿ ಬಗೆಹರಿಯದಂತಹ ಸಮಸ್ಯೆಗಳೇನೂ ಇಲ್ಲ’ ಎಂದು ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದರು.
ಗುರುವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಮೈತ್ರಿ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ನಮ್ಮಲ್ಲಿ ಬಗೆಹರಿಯದಂತಹ ಸಮಸ್ಯೆಗಳೇನೂ ಇಲ್ಲ. ಹೀಗಾಗಿ ಮಧ್ಯಂತರ ಚುನಾವಣೆ ಸಾಧ್ಯವಿಲ್ಲ. ಕೆಲವರಿಗೆ ದಿವ್ಯ ಜ್ಞಾನವಿರುತ್ತದೆ. ಆ ಜ್ಞಾನ ನನ್ನಲ್ಲಿ ಇಲ್ಲ’ ಎಂದು ಮಾಜಿ ಪ್ರಧಾನಿ ದೇವೇಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
‘ಕಾಂಗ್ರೆಸ್ ಸೋಲಿಗೆ ಮೈತ್ರಿ ಕಾರಣ ಎಂದು ಯಾರೂ ಹೇಳಿಲ್ಲ. ಸೋಲಿಗೆ ಬೇರೆ ಕಾರಣಗಳಿವೆ. ಅವುಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗಿದೆ. ಅದಕ್ಕಾಗಿ ಸಭೆ ಕೂಡ ಮಾಡಲಾಗಿದೆ. ಚುನಾವಣೆ ಸಂದರ್ಭದಲ್ಲಿ ಬೂತ್ ಮಟ್ಟದಲ್ಲಿ ಕೆಲಸ ಸರಿಯಾಗಿ ಮಾಡಿಲ್ಲ ಎನ್ನುವ ಅಭಿಪ್ರಾಯಗಳು ಕೇಳಿಬಂದಿವೆ. ಹೀಗಾಗಿ ಬೂತ್ ಹಂತದಿಂದ ಪಕ್ಷ ಗಟ್ಟಿಗೊಳಿಸುವ ಕೆಲಸಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಪಂಚಾಯ್ತಿ ಮಟ್ಟದಲ್ಲಿ ಒಂದು ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಪಕ್ಷದ ಸಂಘಟನೆ ಕುರಿತು ಇನ್ನೂ ಹಲವು ನಿರ್ಣಯಗಳನ್ನ ತೆಗೆದುಕೊಳ್ಳಲಾಗಿದೆ. ಅವುಗಳನ್ನು ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ’ ಎಂದರು.
‘ಕಾಂಗ್ರೆಸ್ ಪಕ್ಷವೇ ಅಹಿಂದ ಆಗಿದ್ದು, ಅಹಿಂದ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಇರುವ ಪಕ್ಷ. ಪ್ರತ್ಯೇಕವಾಗಿ ಅಹಿಂದ ಸಮಾವೇಶಗಳನ್ನು ನಡೆಸುವ ಅಗತ್ಯವಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿತ್ತು. ಈ ಹಿನ್ನೆಲೆ ಯಲ್ಲಿ ಕೆಲಸ ಚುರುಕುಗೊಳಿಸುವಂತೆ ಸೂಚನೆ ನೀಡಿದ್ದೇನೆಯೇ ಹೊರತು ಡಿಸೆಂಬರ್ ಅಂತ್ಯದೊಳಗೆ ಮುಗಿಸಿ ಎಂದು ಹೇಳಿಲ್ಲ. ಇದರಲ್ಲಿ ಯಾವುದೇ ಗೂಡಾರ್ಥ, ನಿಗೂಢವಿಲ್ಲ ಎಂದರು.