Advertisement

ಯಾವುದೇ ಕ್ಷಣ ಮಧ್ಯಂತರ ಚುನಾವಣೆ: ಸಿದ್ದು

11:14 PM Aug 28, 2019 | Lakshmi GovindaRaj |

ಬೆಳಗಾವಿ: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ “ಆಪರೇಷನ್‌ ಕಮಲ’ದ ಅನೈತಿಕ ಶಿಶು. ಇಂತಹ ಸರಕಾರ ಯಾವುದೇ ಕ್ಷಣ ಪತನವಾಗಿ ಮಧ್ಯಂತರ ಚುನಾವಣೆ ಬರಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರಿಗೆ ಜನಾದೇಶ ಇಲ್ಲದಿದ್ದರೂ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದಾರೆ. ಇದು ಶಿಸ್ತು ಬದ್ಧ ಪಕ್ಷ ಅಲ್ಲ. ಅಧಿಕಾರದ ಆಸೆಗಾಗಿ ಅಡ್ಡದಾರಿ ಅನುಸರಿಸುವ ಪಕ್ಷ. ಈಗ ಈ ಪಕ್ಷದಿಂದ ಅನೈತಿಕ ಸರ್ಕಾರ ರಚನೆಯಾಗಿದೆ ಎಂದು ಟೀಕಿಸಿದರು.

ನಾವು ಮಧ್ಯಂತರ ಚುನಾವಣೆ ಬಯಸುವುದಿಲ್ಲ. ಆದರೆ, ಬಿಜೆಪಿಯೊಳಗಿನ ಅಸಮಾಧಾನ ಹಾಗೂ ಬೆಳವಣಿಗೆ ನೋಡಿದರೆ ಯಾವುದೇ ಕ್ಷಣದಲ್ಲೂ ಈ ಸರಕಾರ ಬಿದ್ದು ಹೋಗಬಹುದು. ಆಗ ಅನಿವಾರ್ಯವಾಗಿ ಮಧ್ಯಂತರ ಚುನಾವಣೆ ಬರಲಿದೆ. ಇದಕ್ಕೆ ನಾವೂ ಸಹ ಸಿದ್ಧರಾಗಿದ್ದೇವೆ ಎಂದರು.

ಜೆಡಿಎಸ್‌ ಮೇಲೆ ಹಗೆ ಇಲ್ಲ: ನಾವು ಅಧಿಕೃತವಾಗಿ ವಿರೋಧ ಪಕ್ಷದಲ್ಲಿದ್ದೇವೆ. ನಮ್ಮ ವಿರೋಧ ಕೋಮುವಾದಿ ಬಿಜೆಪಿಗೆ ಹೊರತು ಜೆಡಿಎಸ್‌ ವಿರುದ್ಧ ಅಲ್ಲ. ನಾವು ಜೆಡಿಎಸ್‌ನವರ ಮೇಲೆ ಹಗೆ ಸಾಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ ಶಾಸಕರನ್ನು ಸ್ಪೀಕರ್‌ ಅನರ್ಹಗೊಳಿಸಿದ್ದಾರೆ. ಪಕ್ಷ ದ್ರೋಹ ಮಾಡಿದವರಿಗೆ ಪಾಠವಾಗಬೇಕೆಂದು ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಇಂತಹ ಅನರ್ಹ ಶಾಸಕರ ಬೆಂಬಲದಿಂದ ಬಿಜೆಪಿ, ಮೈತ್ರಿ ಸರಕಾರವನ್ನು ಬೀಳಿಸಿದೆ. ಈಗ ಅದಕ್ಕೂ ಸಹ ನೆಮ್ಮದಿ ಇಲ್ಲ ಎಂದು ಹೇಳಿದರು.

ಈಶ್ವರಪ್ಪ ಮೂರ್ಖ: ಸಿದ್ದರಾಮಯ್ಯ “ಆಪರೇಷನ್‌ ಜನಕ’ ಎಂಬ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, “ಈಶ್ವರಪ್ಪ ಮೂರ್ಖ. ಅವರ ನಾಲಿಗೆಗೂ, ಬ್ರೇನ್‌ಗೂ ಲಿಂಕೇ ಇಲ್ಲ’ ಎಂದು ಟೀಕಿಸಿದರು.

Advertisement

ಕೇಂದ್ರ ಸರ್ಕಾರ ರಾಜ್ಯದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿದೇಶಕ್ಕೆ ಹೋಗಲು ಸಮಯ ಸಿಗುತ್ತದೆ. ಆದರೆ, ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರವಾಹ ಪರಿಸ್ಥಿತಿ ಕುರಿತು ವೈಮಾನಿಕ ಸಮೀಕ್ಷೆ ಕೈಗೊಳ್ಳಲು ಸಮಯ ಸಿಗುತ್ತಿಲ್ಲ.
-ಸಿದ್ದರಾಮಯ್ಯ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next