Advertisement
ಪ್ರಕರಣದ ಸಂಬಂಧ ತನಿಖೆ ನಡೆಸಲು ಸರ್ಕಾರ ನೀಡಿದ್ದ ಆದೇಶ ರದ್ದು ಪಡಿಸುವಂತೆ ಕೋರಿ ರಾಜ್ಯ ಬಂಧೀಖಾನೆ ಇಲಾಖೆ ನಿವೃತ್ತ ಡಿಜಿಪಿ ಸತ್ಯನಾರಾಯಣರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ರಾಘವೇಂದ್ರ ಎಸ್.ಚೌಹಾಣ್ ಅವರಿದ್ದ ನ್ಯಾಯಪೀಠ, ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿರುವಾಗ ನ್ಯಾಯಾಲಯ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಎಂದು ಮೌಖೀಕ ಅಭಿಪ್ರಾಯ ವ್ಯಕ್ತಪಡಿಸಿದರು.
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಶಶಿಕಲಾಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಐಷಾರಾಮಿ ಸೌಲಭ್ಯ ಒದಗಿಸಲು ಸತ್ಯನಾರಾಯಣ ರಾವ್ 2 ಕೋಟಿ ಲಂಚ ಪಡೆದಿದ್ದಾರೆ ಎಂದು ಬಂಧೀಖಾನೆ ಇಲಾಖೆ ಡಿಐಜಿಯಾಗಿದ್ದ ಡಾ.ಡಿ.ರೂಪ ಆರೋಪಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರನ್ನು ಸರ್ಕಾರ ನೇಮಿಸಿತ್ತು. ವಿಚಾರಣೆ ಪೂರ್ಣಗೊಳಿಸಿದ್ದ ವಿನಯ್ ಕುಮಾರ್, 2017ರ ಅ.21ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದರು. ವರದಿಯನ್ನು 2018ರ ಫೆ.26ರಂದು ಸಮ್ಮತಿಸಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪ್ರಕರಣ ಕುರಿತು ತನಿಖೆ ನಡೆಸುವಂತೆ ಎಸಿಬಿಗೆ ನಿರ್ದೇಶಿಸಿದ್ದರು. ಅದರಂತೆ ಎಸಿಬಿ ಪೊಲೀಸರು ಎಫ್ಐಆರ್ ಮಾ.3ರಂದು ಎಫ್ಐಆರ್ ದಾಖಲಿಸಿದ್ದರು.