Advertisement

ಪಾಕ್‌ನಲ್ಲಿದ್ದ ಭಾರತದ ಗೂಢಚಾರಿಣಿ ಸೆಹ್ಮತ್‌ ಖಾನ್‌

08:53 AM Jun 27, 2020 | mahesh |

ಪಾಕಿಸ್ಥಾನದ ರಕ್ತಪಿಪಾಸು ಪ್ರವೃತ್ತಿಯಿಂದಾಗಿ ಭಾರತ -ಪಾಕಿಸ್ಥಾನದ ನಡುವೆ ಮೂರು ಬಾರಿ ಯುದ್ಧ ಸಂಭವಿಸಿದೆ. ಇದಕ್ಕೆ ಭಾರತ ತಕ್ಕ ಪ್ರತಿಕ್ರಿಯೆ
ನೀಡಿದೆ. ಆದರೆ ಯುದ್ಧ ಎಂದರೆ ಕೇವಲ ಸಾವು-ನೋವು ಅಷ್ಟೇ ಅಲ್ಲ. ಅಲ್ಲಿ ತ್ಯಾಗ, ಬಲಿದಾನ ಮತ್ತು ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳ ತುಡಿತ ವ್ಯಕ್ತವಾಗುತ್ತದೆ. ಇಂತಹ ಘಟನೆಗಳು ಕಣ್ಮುಂದೆ ಬಂದಾಗ ನಮ್ಮಲ್ಲಿ ಕಣ್ಣಲ್ಲಿ ನೀರು ಜಿನುಗದೇ ಇರದು. ಅಂತಹ ಮನಮಿಡಿಯುವ, ಸ್ವಾರಸ್ಯಕರ ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Advertisement

1971ರ ಭಾರತ ಮತ್ತು ಪಾಕಿಸ್ಥಾನದ ನಡುವೆ ಸಂಭವಿಸಿದ ಯುದ್ಧವು ಉಭಯ ದೇಶಗಳ ನಡುವಿನ ದೊಡ್ಡ ಸಂಘರ್ಷ ಎಂದೇ ಕರೆಯಲ್ಪಟ್ಟಿದೆ. ಬಾಂಗ್ಲಾ ವಿಮೋಚನೆಗೆ ಸಂಬಂಧಿಸಿದಂತೆ ನಡೆದ ಈ ಯುದ್ಧ ಪಾಕ್‌ ಸೈನಿಕರ ಶರಣಾಗತಿಯೊಂದಿಗೆ ಅಂತ್ಯವಾಯಿತು. ಈ ಯುದ್ಧವನ್ನು ಪಾಕಿಸ್ಥಾನದ ಆಂತರಿಕ ಯುದ್ಧ ಎಂದೂ ಹೇಳಲಾಗಿದೆ. 1971ರ ಡಿ. 3-16ರ ವರೆಗೆ ಭಾರತದ ಪಶ್ಚಿಮ ಗಡಿಯಲ್ಲಿ ಸಶಸ್ತ್ರ ಸಂಘರ್ಷ ನಡೆದಿತ್ತು.

ಈ ಯುದ್ಧದಲ್ಲಿ ಹೋರಾಡಿದ ಸೈನಿಕರ ಸೇವೆ ಮಾತ್ರವಲ್ಲದೆ ಭಾರತೀಯ ಹೆಣ್ಣುಮಗಳೊಬ್ಬಳ ಸೇವೆಯೂ ಅಜರಾಮರವಾದದ್ದು. ಆಕೆಯೇ ಸೆಹ್ಮತ್‌ ಖಾನ್‌. ಈಕೆಯ ತಂದೆ ಕಾಶ್ಮೀರಿ ಮುಸ್ಲಿಂ, ತಾಯಿ ಹಿಂದೂ. ಸೆಹ್ಮತ್‌ ಕಾಲೇಜು ಶಿಕ್ಷಣ ಪೂರೈಸುವ ವೇಳೆಗೆ ಆಕೆಯ ತಂದೆ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ತಂದೆಯ ಕೊನೆ ಆಸೆಯಂತೆಯೇ ಅವರ ಪಾಕಿಸ್ಥಾನಿ ಸ್ನೇಹಿತನ ಮಗನಾಗಿರುವ ಸೈನ್ಯಾಧಿಕಾರಿಯನ್ನು ವರಿಸುತ್ತಾಳೆ. ಆ ಅಧಿಕಾರಿಯ ಮನೆಯೊಳಗೆ ತನ್ನ ಮಗಳನ್ನು ರಹಸ್ಯ ಕಾರ್ಯಾಚರಣೆಗೆ ನೇಮಿಸುವುದು ಸೆಹ್ಮತ್‌ ತಂದೆಯ ಉದ್ದೇಶವಾಗಿತ್ತು. ಮದುವೆ ಮುನ್ನವೇ ಸೆಹ್ಮತ್‌ಗೆ ಭಾರತದ ಗುಪ್ತಚರ ಸಂಸ್ಥೆ “ರಾ’ ದ ಸದಸ್ಯರು ರಹಸ್ಯ ಕಾರ್ಯಾಚರಣೆಗೆ ಬೇಕಿರುವ ಅಗತ್ಯ ತರಬೇತಿ ನೀಡಿದ್ದರು.

ಮದುವೆಯ ಬಳಿಕ ಆಕೆಯ ಮನೆಯವರು ಮತ್ತು ಅವರ ಸ್ನೇಹಿತರನ್ನು ಚಾಕಚಕ್ಯತೆಯಿಂದ ನಿಭಾಯಿಸುವ ಜತೆಗೆ ಅಗತ್ಯ ಮಾಹಿತಿ ಭಾರತಕ್ಕೆ ರವಾನಿಸುವ ಕೆಲಸವನ್ನೂ ಮಾಡಿದರು. ಈ ವೇಳೆಗೆ ಜಲಾಂತರ್ಗಾಮಿ ನೌಕೆಯೊಂದನ್ನು ಬಳಸಿಕೊಂಡು ಭಾರತದ ಪ್ರಮುಖ ನೌಕಾನೆಲೆಯ ಮೇಲೆ ಪಾಕ್‌ ದಾಳಿ ಮಾಡುವ ವಿಷಯ ತಿಳಿದುಕೊಂಡ ಇವರು ತಾವೇ ಕಷ್ಟದಲ್ಲಿದ್ದರೂ ತತ್‌ಕ್ಷಣ ಮಾಹಿತಿಯನ್ನು ಭಾರತಕ್ಕೆ ರವಾನಿಸಿದರು. ಬಂಗಾಲಕೊಲ್ಲಿಯಲ್ಲಿ ಲಂಗರು ಹಾಕಿದ್ದ ಐಎನ್‌ಎಸ್‌ ವಿಕ್ರಾಂತ್‌ ದಾಳಿಯ ಪ್ರಮುಖ ಗುರಿಯಾಗಿತ್ತು. ಇದರಿಂದ ಭಾರತದ ನೌಕಾಪಡೆ ಎಚ್ಚೆತ್ತುಕೊಳ್ಳುವ ಜತೆಗೆ ಯುದ್ಧದ ಗೆಲುವಿನಲ್ಲಿಯೂ ಈ ಘಟನೆ ಮಹತ್ವದ ಪಾತ್ರ ನಿರ್ವಹಿಸಿತು.

ಅಂತಿಮವಾಗಿ ಭಾರತಕ್ಕೆ ವಿಷಯ ರವಾನಿಸುತ್ತಿರುವುದು ಸೆಹ್ಮತ್‌ ಎಂಬುದು ಪಾಕ್‌ ಸೇನೆಗೆ ಗೊತ್ತಾಯಿತಾದರೂ ಅಲ್ಲಿಂದ ಯಶಸ್ವಿಯಾಗಿ ಅವರು ಭಾರತಕ್ಕೆ ಹಿಂದಿರುಗಿದರು. ಈ ವೇಳೆಗಾಗಲೇ ಅವರು ಗರ್ಭಿಣಿಯೂ ಆಗಿದ್ದರು. ಬಳಿಕ ತಮ್ಮ ಮಗನನ್ನೂ ಭಾರತೀಯ ಸೇನೆಗೆ ಸೇರಿಸುವ ಮೂಲಕ ಸೆಹ್ಮತ್‌ ಮತ್ತೆ ಭಾರತೀಯರ ಮನ ಗೆದ್ದರು.  ಈ ಘಟನೆಯನ್ನು ಆಧರಿಸಿ ಬಾಲಿವುಡ್‌ನ‌ಲ್ಲಿ “ರಾಜಿ’ ಎಂಬ ಚಲನಚಿತ್ರವೂ 11 ಮೇ 2018ರಲ್ಲಿ ತೆರೆಕಂಡಿತ್ತು.

Advertisement

ಸಂಗಮ ಚಿತ್ರ ನೋಡಿದ್ದ ಪಾಕ್‌ ಬಂಧಿತ ಸೈನಿಕ
1965ರ ಭಾರತ-ಪಾಕಿಸ್ಥಾನ ಯುದ್ಧದ ಸಮಯದಲ್ಲಿ ಪಾಕಿಸ್ಥಾನ ಸೈನ್ಯದ ಮೇಜರ್‌ ಓರ್ವನನ್ನು ಬಂಧಿಸಲಾಗುತ್ತದೆ. ಬಂಧಿತ ಪಾಕಿಸ್ಥಾನಿ ಮೇಜರ್‌ ಭಾರತದ ಸಿನೆಮಾ ದಿಗ್ಗಜ ರಾಜ್‌ ಕಪೂರ್‌ ಅವರ ದೊಡ್ಡ ಅಭಿಮಾನಿ. ಆಗ ಆತ ಭಾರತದ ಸೈನಿಕರಲ್ಲಿ ತನಗೆ ರಾಜ್‌ ಕಪೂರ್‌ ಅಭಿನಯದ ಸಂಗಮ ಚಿತ್ರವನ್ನು ತೋರಿಸುವಂತೆ ವಿನಂತಿಸಿಕೊಳ್ಳುತ್ತಾನೆ. ಆಗ ಸೇನೆಯ ಮುಖ್ಯಸ್ಥರ ಆದೇಶದ ಮೇರೆಗೆ ಅಹ್ಮದಾಬಾದ್‌ನ ಸಿನೆಮಾ ಮಂದಿರದಲ್ಲಿ ಆತನಿಗೆ ಸಂಗಮ
ಚಿತ್ರವನ್ನು ತೋರಿಸಿದ ಬಳಿಕ ದಿಲ್ಲಿಗೆ ಕರೆದುಕೊಂಡು ಬರಲಾಗುತ್ತದೆ. ಈ ಘಟನೆಯೂ ಭಾರತೀಯ ಸೇನೆಯ ಮಾನವೀಯತೆ ಎತ್ತಿ ಹಿಡಿದಿತ್ತು.

ಯೇ ದಿಲ್‌ ಮಾಂಗೇ ಮೋರ್‌
ಭಾರತ-ಪಾಕಿಸ್ಥಾನದ ನಡುವೆ ನಡೆದ ಕಾರ್ಗಿಲ್‌ ಯುದ್ಧದಲ್ಲಿ ವಿಕ್ರಮ್‌ ಬಾತ್ರಾ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನ ಮಾಡಿ, ಕಾರ್ಗಿಲ್‌ ಹೀರೋ ಆದರು. ಯುದ್ಧದ ಗೆಲುವಿನಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಯುದ್ಧದ ಸಮಯದಲ್ಲಿ ಇವರ “ಯೇ ದಿಲ್‌ ಮಾಂಗೇ ಮೋರ್‌’ ಎಂಬ ಘೋಷಣೆಯು ಯುದ್ಧ ಸೈನಿಕರಲ್ಲಿ ಹೊಸ ಚೈತನ್ಯ ಮೂಡಿಸಿತ್ತು.

ಯುದ್ಧ ಸೈನಿಕರೆಲ್ಲ ನನ್ನ ಮಕ್ಕಳು ಎಂದಿದ್ದರು ಕಾರಿಯಪ್ಪ
1965ರಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆದ ಯುದ್ಧದ ಅವಧಿಯಲ್ಲಿ ಭಾರತ ಸೇನೆಯ ನೌಕಾ ತಂಡ ನಾಯಕ ಕೆ.ಸಿ. ಕಾರಿಯಪ್ಪರನ್ನು ಪಾಕಿಸ್ಥಾನ ಸೈನ್ಯ ಬಂಧಿಸಿರುತ್ತದೆ. ಆಗ ಈ ವಿಷಯ ಎಲ್ಲೆಡೆಯೂ ಹರಿದಾಡುತ್ತದೆ. ಏಕೆಂದರೆ ಬಂಧಿತನಾಗಿದ್ದ ಸೈನಿಕ ದೇಶದ ಜನರಲ್‌ ಆಗಿದ್ದ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರಿಯಪ್ಪ ಅವರ ಮಗನಾಗಿದ್ದರು. ಈ ವಿಷಯ ಪಾಕಿಸ್ಥಾನದ ಪ್ರಧಾನಿಗೆ ತಿಳಿಯುತ್ತದೆ. ಪಾಕ್‌ ಪ್ರಧಾನಿ ಆಯೂಬ್‌ ಖಾನ್‌ ಬ್ರಿಟಿಷ್‌ ಇಂಡಿಯನ್‌ ಆರ್ಮಿಯಲ್ಲಿ ಕೆ.ಎಂ. ಕಾರಿಯಪ್ಪ ಅವರ ಸಹೋದ್ಯೋಗಿಯಾಗಿದ್ದನು. ಆತ ಕೆ.ಎಂ. ಕಾರಿಯಪ್ಪ ಅವರಿಗೆ ನಿಮ್ಮ ಮಗನನ್ನು ನಮ್ಮ ಸೈನ್ಯವು ಬಿಡುಗಡೆ ಮಾಡುತ್ತದೆ ಎಂದಾಗ, ಕೆ.ಎಂ. ಕಾರಿಯಪ್ಪ ಅವರು, ನೀವು ನನ್ನ ಮಗ ಎಂದು ಆತನನ್ನು ಬಿಡುಗಡೆ ಮಾಡಬೇಕಿಲ್ಲ. ನಿಮ್ಮ ಸೆರೆಯಲ್ಲಿರುವ ದೇಶದ ಎಲ್ಲ ಸೈನಿಕರ ಜತೆಗೆ ಮಾತ್ರ ಆತನನ್ನು ಬಿಡುಗಡೆ ಮಾಡಿ, ಇಲ್ಲವಾದರೆ ನೀವೆ ಇಟ್ಟುಕೊಳ್ಳಿ. ಯುದ್ಧ ಸೈನಿಕರೆಲ್ಲ ನನ್ನ ಮಕ್ಕಳು ಎಂದು ಅಯೂಬ್‌ ಖಾನ್‌ಗೆ ಮುಖಕ್ಕೆ ಹೊಡೆದಂತೆ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next