17ನೇ ಶತಮಾನದ ಅಂತ್ಯದಲ್ಲಿ ಜಾನ್ ಹೆದರಿಂಗ್ ಟನ್ ಎಂಬಾತ ಇಂಗ್ಲೆಂಡ್‌ನಲ್ಲಿದ್ದ. ಆತ ಬಹಳ ಮೋಜಿನ ವ್ಯಕ್ತಿ. ಆಗಿನ ಕಾಲದಲ್ಲಿ ಫ್ಯಾಷನ್‌ಗೆ ತಕ್ಕಂತೆ ಉಡುಗೆ ತೊಡುವುದರಲ್ಲಿ ಆತ ಹೆಸರುವಾಸಿಯಾಗಿದ್ದ. ಅಲ್ಲದೆ ದಿರಿಸಿನ ವಿಷಯದಲ್ಲಿ ಅನೇಕ ಪ್ರಯೋಗಗಳನ್ನೂ ಮಾಡುತ್ತಿದ್ದ. ಅನೇಕರಿಗೆ ಆತನ ಉಡುಗೆ ತೊಡುಗೆ ಮಾದರಿಯಾಗಿತ್ತು.
ಒಂದು ದಿನ ಎಂದಿನಂತೆ ಆಕರ್ಷಕವಾಗಿ ಸಿಂಗರಿಸಿಕೊಂಡ ಜಾನ್ ಮನೆಯಿಂದ ಹೊರಬಿದ್ದ. ಬೀದಿಯಲ್ಲಿ ಹೋಗುವಾಗ ಅನೇಕ ಮಹಿಳೆಯರು ಜಾನ್‌ನನ್ನು ಕಂಡು ಮೂರ್ಛೆ ಹೋದರು. ಮಕ್ಕಳು ಬೆದರಿ ಕಿರುಚಾಡಿದರು. ನಾಯಿಗಳು ಬೊಗಳುತ್ತಾ ಹಿಮ್ಮೆಟ್ಟಿದವು. ಈ ಗಲಾಟೆಯಲ್ಲಿ ಹಲವರು ಪೆಟ್ಟು ಮಾಡಿಕೊಂಡರು. ಆಗ ಪೊಲೀಸರು ಜಾನ್‌ನನ್ನು ಠಾಣೆಗೆ ಕರೆದೊಯ್ದರು.
ಜಾನ್‌ಗೆ, ಯಾಕೆ ಹೀಗಾಗುತ್ತಿದೆ ಎಂದು ತಿಳಿದಿರಲಿಲ್ಲ. ಹೀಗಾಗಿ ಅದೇನೆಂದು ಕೇಸ್ ಹಾಕುತ್ತಾರೋ ನೋಡೇ ಬಿಡೋಣ ಎಂದು ಸಮಾಧಾನಚಿತ್ತನಾಗಿ ಕುಳಿತಿದ್ದ. ವಿಷಯ ತಿಳಿದಾಗ ಹೌಹಾರುವ ಸ್ಥಿತಿ ಅವನದಾಗಿತ್ತು. ಟೋಪಿ ಧರಿಸಿದ್ದಕ್ಕೆ ಅವನನ್ನು ಪೊಲೀಸರು ಬಂಧಿಸಿದ್ದರು. ಜಾನ್‌ಗೆ ಈಗ ಅರ್ಥವಾಗಿತ್ತು. ಆ ಟೋಪಿ ಬೆಳಕಿನಲ್ಲಿ ಮಿರಮಿರನೆ ಹೊಳೆಯುತ್ತಿತ್ತು. ಅದು ಬಿಸಿಲಿನಲ್ಲಿ ಮಾಂತ್ರಿಕ ಶಕ್ತಿ ಹೊರಸೂಸುತ್ತಿದೆ ಎಂದುಕೊಂಡಿದ್ದೇ ಮಹಿಳೆಯರು ಮೂರ್ಛೆ ಹೋಗಲು ಕಾರಣವಾಗಿತ್ತು. ಆ ರೀತಿಯ ಟೋಪಿಯನ್ನು ಹಿಂದೆ ಯಾರೂ ಧರಿಸಿದ್ದೇ ಇಲ್ಲ. ಪ್ರಯೋಗದ ನೆಪದಲ್ಲಿ ಧರಿಸಿದ ಟೋಪಿಯಿಂದ ಇಷ್ಟೆಲ್ಲಾ ರಾದ್ಧಾಂತವಾಗಿತ್ತು.
ಆ ಟೋಪಿ ಇಂದು ಫ್ಯಾಷನ್ ಜಗತ್ತಿನಲ್ಲಿ “ಟಾಪ್ ಹ್ಯಾಟ್’ ಎಂದೇ ಪ್ರಖ್ಯಾತ. ಜಗತ್ತಿನ ಮಹಾನ್ ವ್ಯಕ್ತಿಗಳೆಲ್ಲಾ ಈ ಟೋಪಿಯನ್ನು ಧರಿಸಿ ಮಿಂಚಿದ್ದಾರೆ. ಅದನ್ನು ಮೊದಲ ಬಾರಿಗೆ ಧರಿಸಿದ ಶ್ರೇಯ ಜಾನ್ ಹೆದರಿಂಗ್‌ಟನ್‌ನದ್ದು! ಮೊದಲ ಬಾರಿ ಧರಿಸಿದಾಗ ಏನಾಯ್ತು ಎಂಬುದು ನಿಮಗೀಗಾಗಲೇ ತಿಳಿದಿರುತ್ತದೆ!
— ಹವನ