1980ರ ದಶಕದಲ್ಲಿ ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿದ್ದ ಸಿನಿಮಾ ಅಮಿತಾಬ್, ರೇಖಾ ಜೋಡಿಯ ಸಿಲ್ಸಿಲಾ, ಶಾರುಖ್, ಐಶ್ವರ್ಯ ರೈ ನಟನೆಯ ಮೊಹಬ್ಬತೆ, ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ ಸೇರಿದಂತೆ ಹಲವಾರು ಸಿನಿಮಾಗಳು ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿದ್ದವು…ಈ ಎಲ್ಲಾ ಸಿನಿಮಾಗಳ ಸ್ಟಾರ್ ನಿರ್ದೇಶಕ ಯಶ್ ರಾಜ್ ಯಶ್ ಚೋಪ್ರಾ! ಬಾಲಿವುಡ್ ಚಿತ್ರಗಳ ಪ್ರಣಯ ರಾಜ ಎಂದೇ ಖ್ಯಾತರಾದವರು ಯಶ್ ಚೋಪ್ರಾ. ಸಿನಿಮಾ ನಿರ್ದೇಶಕರಾಗಿ, ನಿರ್ಮಾಪಕರಾಗಿ ಯಶ್ ರಾಜ್ ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದರು.
ಯಶ್ ಚೋಪ್ರಾ ಅವರು 1932ರಲ್ಲಿ ಲಾಹೋರ್(ಈಗ ಪಾಕಿಸ್ತಾನದಲ್ಲಿದೆ)ನಲ್ಲಿ ಜನಿಸಿದ್ದರು. ಅಂದು ಬ್ರಿಟಿಷ್ ಪಂಜಾಬ್ ಆಡಳಿತದಲ್ಲಿ ಚೋಪ್ರಾ ಅವರ ತಂದೆ ಪಿಡಬ್ಲ್ಯುಡಿ ಇಲಾಖೆಯಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 1945ರ ಹೊತ್ತಿಗೆ ಚೋಪ್ರಾ ವಿದ್ಯಾಭ್ಯಾಸ ಮುಂದುವರಿಸಲು ಜಲಂಧರ್ ನ ಕಾಲೇಜ್ ಗೆ ಸೇರಿಕೊಂಡಿದ್ದರು. ಬಳಿಕ ಕುಟುಂಬದ ಸದಸ್ಯರು ಲುಧಿಯಾನದಲ್ಲಿ ಬಂದು ವಾಸ್ತವ್ಯ ಹೂಡಿದ್ದರು. ಚೋಪ್ರಾಗೆ ತಾನೊಬ್ಬ ಇಂಜಿನಿಯರ್ ಆಗಬೇಕೆಂಬ ಕನಸು ಕಂಡಿದ್ದರು.
ತದನಂತರ ಚೋಪ್ರಾ ಅವರು ಸಿನಿಮಾ ನಿರ್ದೇಶನ ಮಾಡುವ ಕನಸಿನಿಂದ ವಾಣಿಜ್ಯ ನಗರಿ ಮುಂಬೈಗೆ ಬಂದಿದ್ದರು. ಆರಂಭದಲ್ಲಿ ಆ ಕಾಲದ ಖ್ಯಾತ ನಟ, ನಿರ್ದೇಶಕ, ಬರಹಗಾರ, ನಿರ್ಮಾಪಕ ಇಂದರ್ ಸೇನ್ ಜೋಹರ್(ಐಎಸ್ ಜೋಹರ್) ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಬಳಿಕ ಸಹೋದರ, ನಿರ್ದೇಶಕ, ನಿರ್ಮಾಪಕ ಬಲ್ ದೇವ್ ರಾಜ್ ಚೋಪ್ರಾ ಜೊತೆ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು.
ಅಮಿತಾಬ್ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಹೊರಹೊಮ್ಮಲು ಕಾರಣ ಚೋಪ್ರಾ!
1959ರಲ್ಲಿ ಚೋಪ್ರಾಗೆ ತಮ್ಮ ಮೊದಲ ಸಿನಿಮಾದ ನಿರ್ದೇಶನ ಮಾಡುವ ಅವಕಾಶ ಸಿಕ್ಕಿತ್ತು. ಆ ಚಿತ್ರದ ಹೆಸರು ಧೂಳ್ ಕಾ ಫೂಲ್..ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಹಿರಿಯ ಅಣ್ಣ ಬಿಆರ್ ಚೋಪ್ರಾ. ಚಿತ್ರದಲ್ಲಿ ಮಾಲಾ ಸಿನ್ನಾ, ರಾಜೇಂದ್ರ ಕುಮಾರ್, ಲೀಲಾ ಚಿಟ್ನೀಸ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಈ ಸಿನಿಮಾ ಗಳಿಕೆಯಲ್ಲೂ ಸೂಪರ್ ಹಿಟ್ ಆಗಿತ್ತು.
ಹೀಗೆ ಹೀರೋ ಆಗಬೇಕೆಂಬ ಕನಸು ಕಟ್ಟಿಕೊಂಡು ಬಂದಿದ್ದ ಇಂಕಿಲಾಬ್ ಶ್ರೀವಾತ್ಸವ್ ಎಂಬ ಯುವಕ ಬಾಲಿವುಡ್ ನಲ್ಲಿ ಖ್ಯಾತಿ ಪಡೆಯಲು ಹೆಣಗಾಡುತ್ತಿದ್ದ..1969ರಲ್ಲಿಯೇ ಬಾಲಿವುಡ್ ಗೆ ಕಾಲಿಟ್ಟಿದ್ದ ಈ ಯುವ ನಟ ಅಭಿನಯಿಸಿದ್ದ 14 ಸಿನಿಮಾಗಳಲ್ಲಿ 12 ಸಿನಿಮಾ ಸೋತು ಹೋಗಿದ್ದವು, 2 ಸಿನಿಮಾ ಮಾತ್ರ ಸಾಧಾರಣ ಹಿಟ್ ಆಗಿದ್ದವು. 1975ರಲ್ಲಿ ಪ್ರಕಾಶ್ ಮೆಹ್ರಾ ನಿರ್ಮಾಣದ ಜಂಜೀರ್ ಹಾಗೂ ಯಶ್ ಚೋಪ್ರಾ ನಿರ್ದೇಶನದ ದೀವಾರ್ ಸಿನಿಮಾದ ಮೂಲಕ ಇಂಕಿಲಾಬ್ ಅಲಿಯಾಸ್ ಅಮಿತಾಬ್ ಬಚ್ಚನ್ ಆ್ಯಂಗ್ರಿ ಯಂಗ್ ಮ್ಯಾನ್ ಪಟ್ಟಕ್ಕೇರುವಂತಾಗಿತ್ತು. ಆ ನಂತರ ಅಮಿತಾಬ್ ಬಾಲಿವುಡ್ ನ ಸೂಪರ್ ಸ್ಟಾರ್ ನಟನಾಗಿ ಬೆಳೆದು ಬಿಟ್ಟಿದ್ದರು.
ಅದೇ ರೀತಿ 1980ರ ದಶಕದಲ್ಲಿ ಟೆಲವಿಷನ್ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದ ಶಾರುಖ್ ಖಾನ್ ಬಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದು ಯಶ್ ಚೋಪ್ರಾ ನಿರ್ದೇಶನದ ಥ್ರಿಲ್ಲರ್ ಸಿನಿಮಾ ಡರ್(1993) ಮೂಲಕ. ಆ ನಂತರ ಯಶ್ ಬ್ಯಾನರ್ ನಡಿ ಖಾಯಂ ಸಿನಿಮಾಗಳಲ್ಲಿ ನಟಿಸಿ ಬಾಲಿವುಡ್ ಬಾದ್ ಶಾ ಎನ್ನಿಸಿಕೊಂಡ ಇತಿಹಾಸ ನಮ್ಮ ಕಣ್ಮುಂದೆ ಇದೆ.
ಸ್ವಿಜರ್ ಲ್ಯಾಂಡ್ ಗೂ ಯಶ್ ಗೂ ಅವಿನಾಭಾವ ಸಂಬಂಧ!
ನಿರ್ದೇಶಕ ಯಶ್ ಚೋಪ್ರಾಗೆ
ಸ್ವಿಜರ್ ಲ್ಯಾಂಡ್ ಬಗ್ಗೆ ಎಲ್ಲಿಲ್ಲದ ಪ್ರೀತಿಯಂತೆ. ಆ ಕಾರಣಕ್ಕಾಗಿ 1985ರಲ್ಲಿ ಮೊದಲ ಬಾರಿಗೆ ತಮ್ಮ ಫಾಸ್ಲೆ ಸಿನಿಮಾವನ್ನು ಸಿಟ್ಜರ್ ಲ್ಯಾಂಡ್ ನಲ್ಲಿ ಚಿತ್ರೀಕರಿಸಿದ್ದರು. ಚೋಪ್ರಾ ಅವರು ಸ್ವಿಸ್ ನ ಅಲ್ಪೆನ್ ರಶ್ ಲೇಕ್ ಸುತ್ತಮುತ್ತ ಹಲವಾರು ಸಿನಿಮಾಗಳ ಚಿತ್ರೀಕರಣ ನಡೆಸಿದ್ದರು. ಆ ಕಾರಣಕ್ಕಾಗಿಯೇ ಅದನ್ನು ಚೋಪ್ರಾ ಲೇಕ್ ಎಂದು ಸ್ವಿಸ್ ಸರ್ಕಾರ ಮರುನಾಮಕರಣ ಮಾಡಿತ್ತು! ಅಷ್ಟೇ ಅಲ್ಲ ಸ್ವಿಜರ್ ಲ್ಯಾಂಡ್ ನ ಜಂಗ್ ಫ್ರೌ ರೈಲ್ವೇ ರೈಲಿಗೆಯಶ್ ಚೋಪ್ರಾ ಅವರ ಹೆಸರನ್ನು ಇಟ್ಟು ಚೋಪ್ರಾ ಅವರ ಕೈಯಲ್ಲೇ ಉದ್ಘಾಟಿಸಿತ್ತು!
ನಟಿ ಶ್ರೀದೇವಿ ಕೂಡಾ ಟಾಪ್ ಸ್ಟಾರ್ ಆಗಲು ಕಾರಣ ಯಶ್ ಚೋಪ್ರಾ ನಿರ್ದೇಶನದ ಸಿನಿಮಾಗಳು. ದಿಲ್ ತೋ ಪಾಗಲ್ ಹೈ ಸಿನಿಮಾ ಜರ್ಮನಿಯಲ್ಲಿ ಚಿತ್ರೀಕರಣಗೊಂಡ ಮೊದಲ ಬಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಯಶ್ ರಾಜ್ ಸಿನಿಮಾದ ಹೆಗ್ಗಳಿಕೆ ಬಗ್ಗೆ ಗೊತ್ತಾ?
1995ರಲ್ಲಿ ಯಶ್ ಚೋಪ್ರಾ ನಿರ್ಮಿಸಿದ್ದ ದಿಲ್ ವಾಲೇ ದುಲ್ಹಾನಿಯಾ ಲೇ ಜಾಯೇಂಗೆ ಸಿನಿಮಾ ಭಾರತೀಯ ಸಿನಿಮಾರಂಗದ ಇತಿಹಾಸದಲ್ಲಿಯೇ ಹಲವು (20ವರ್ಷಕ್ಕಿಂತ ಹೆಚ್ಚು) ವರ್ಷಗಳ ಕಾಲ ಪ್ರದರ್ಶನ ಕಂಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1989ರಲ್ಲಿ ಚೋಪ್ರಾ ಅವರು ಚಾಂದಿನಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾಗ ಅದು ಆ್ಯಕ್ಷನ್ ಸಿನಿಮಾದ ಕಾಲವಾಗಿತ್ತು. ಹೀಗೆ ಚೋಪ್ರಾ ಅವರು ಕಾರಿನಲ್ಲಿ ಹೋಗುತ್ತಿದ್ದಾಗ..ಎಲ್ಲೆಡೆ ಆ್ಯಕ್ಷನ್ ಸಿನಿಮಾಗಳ ಪೋಸ್ಟರ್ ಗಳೇ ಕಾಣಿಸಿದ್ದವಂತೆ. ತದನಂತರ ಶ್ರೀದೇವಿ ನಟನೆಯ ಚಾಂದಿನಿ ಸಿನಿಮಾ ರೊಮ್ಯಾಂಟಿಕ್ ಚಿತ್ರವಾಗಿ ಮೂಡಿ ಬರಲು ಕಾರಣವಾಗಿತ್ತು.
ಯಶ್ ಚೋಪ್ರಾ ಅವರ ಪತ್ನಿ ಪಮೇಲಾ ಚೋಪ್ರಾ ಅವರು ಕೇವಲ ಯಶ್ ಸಿನಿಮಾದಲ್ಲಿ ಮಾತ್ರ ಹಾಡುತ್ತಿದ್ದರು. ಡಿಡಿಎಲ್ ಜೆ ಸಿನಿಮಾದ ಘರ್ ಆಜಾ ಪರ್ದೇಶಿ ಹಾಗೂ ಚಾಂದಿನಿ ಸಿನಿಮಾದ ಮೈನ್ ಸಸುರಾಲ್ ನಹೀ ಜಾಹೂಂಗಿ ಹಾಡನ್ನು ಹಾಡಿದ್ದು ಮಿಸ್ ಪಮೇಲಾ!
ಚೋಪ್ರಾ ನಿರ್ದೇಶನದ ಕಭೀ, ಕಭೀ ಹಿಂದಿ ಸಿನಿಮಾ ನಿರ್ಮಾಣದ ಸಂದರ್ಭದಲ್ಲಿಯೇ ರಿಷಿ ಕಪೂರ್ ಹಾಗೂ ನೀತು ಸಿಂಗ್ ಪ್ರೇಮಿಸತೊಡಗಿದ್ದರು. 1980ರಲ್ಲಿ ಇಬ್ಬರು ಮದುವೆಯಾಗಿದ್ದರು. ಕಭೀ, ಕಭೀ ಸಿನಿಮಾದ ಹಾಡುಗಳ ರೆಕಾರ್ಡಿಂಗ್ ಸಂದರ್ಭದಲ್ಲಿ ಮ್ಯೂಜಿಶಿಯನ್ ಗಳು ಸ್ಟ್ರೈಕ್ ಮಾಡಿದ್ದರಂತೆ! ಆದರೆ ಅದಕ್ಕೆ ಡೋಂಟ್ ಕೇರ್ ಎಂದ ಚೋಪ್ರಾ ಅವರು ನೌಕಾಪಡೆಯ ಸಂಗೀತಗಾರರನ್ನು ಕರೆಯಿಸಿ ಹಾಡನ್ನು ಪೂರ್ಣಗೊಳಿಸಿದ್ದರು!
ಸಿನಿಮಾ ನಿರ್ದೇಶನ, ನಿರ್ಮಾಣಕ್ಕಾಗಿ ಚೋಪ್ರಾ ಅವರು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ತೀವ್ರವಾದ ಡೆಂಗ್ಯೂ ಜ್ವರಕ್ಕೆ ತುತ್ತಾದ ಚೋಪ್ರಾ ಅವರು 2012ರ ಅಕ್ಟೋಬರ್ 13ರಂದು ಇಹಲೋಕ ತ್ಯಜಿಸಿದ್ದರು. ಆದರೆ ಚೋಪ್ರಾ ಅವರ ನಿರ್ಮಾಣದ ಹಾಗೂ ನಿರ್ದೇಶನದ ಸಿನಿಮಾಗಳು ಇಂದಿಗೂ ನಮ್ಮ ನಡುವೆ ಅವರನ್ನು ಸದಾ ನೆನಪಿಸುವಂತೆ ಮಾಡುತ್ತಿದೆ…