Advertisement

ಶಿಸ್ತುಬದ್ಧವಾಗಿ ಜೀವಿಸಿದ್ದಅವರಿಗೆ ಕುಟುಂಬವೆಂದರೆ ಪಂಚಪ್ರಾಣವಾಗಿತ್ತು

08:45 AM Apr 27, 2018 | Team Udayavani |

ಉಳ್ಳಾಲ: ಸಣ್ಣ ಪ್ರಾಯದಲ್ಲೇ ನಿರಂತರ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ನಮ್ಮ ತಂದೆಯವರು ಮೂರನೇ ಅವಕಾಶಕ್ಕಾಗಿ 20 ವರ್ಷ ತಾಳ್ಮೆಯಿಂದ ಕಾದಿದ್ದರು. ಶಾಸಕರಾಗಿ ಆಯ್ಕೆಯಾದ ನಾಲ್ಕು ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ ಒಮ್ಮೆಯೂ ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ರಾಜಕೀಯವನ್ನು ಜನಸೇವೆಯಾಗಿ ಸ್ವೀಕರಿಸಿದವರು. ಇದು ಉಳ್ಳಾಲ ವಿಧಾನ ಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ದಿ| ಯು.ಟಿ. ಫರೀದ್‌ ಅವರ ಮಗಳು ಝೀನತ್‌ ಫರೀದ್‌ ಯೂನಸ್‌ ಅವರು ತಂದೆಯ ಬಗ್ಗೆ ಅಭಿಮಾನದಿಂದ ಹೇಳುವ ಮಾತುಗಳು.

Advertisement

ವೃತ್ತಿಯಲ್ಲಿ ನ್ಯಾಯವಾದಿಯಾಗಿದ್ದ ಯು.ಟಿ. ಫರೀದ್‌ ಕಾಲೇಜು ದಿನಗಳಲ್ಲೇ ಕಾಂಗ್ರೆಸ್‌ ಕಾರ್ಯಕರ್ತನಾಗಿ 30ರ ಹರೆಯದಲ್ಲೇ ಶಾಸಕರಾಗಿ ಆಯ್ಕೆಯಾದವರು. ಅಂದಿನ ಕಾಂಗ್ರೆಸ್‌ ಚಿಹ್ನೆಯಾಗಿದ್ದ ದನ ಮತ್ತು ಕರು (ಪೆತ್ತ ಕಂಜಿ) ಅಡಿಯಲ್ಲಿ 1972ರಲ್ಲಿ ಆಯ್ಕೆಯಾಗಿದ್ದ ಸಂದರ್ಭದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಎರಡನೇ ಬಾರಿಗೆ 1978ರಲ್ಲಿ ಶಾಸಕರಾಗಿ ಆಯ್ಕೆಯಾದಾಗ ಗುಂಡೂರಾವ್‌ ಮುಖ್ಯಮಂತ್ರಿಯಾಗಿದ್ದರು. ದೀರ್ಘ‌ ಕಾಲದ ಬಳಿಕ (16 ವರ್ಷಗಳು) 1999ರಲ್ಲಿ ಎಸ್‌.ಎಂ. ಕೃಷ್ಣ ಅವಧಿಯಲ್ಲಿ ಶಾಸಕರಾಗಿದ್ದ ಅವರು 2004ರಲ್ಲಿ ನಾಲ್ಕನೇ ಬಾರಿಗೆ ಶಾಸಕರಾದರು. ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದ ವೇಳೆ ಅನಾರೋಗ್ಯದಿಂದ ಶಾಸಕರಾಗಿ ಅಧಿಕಾರದಲ್ಲಿದ್ದಾಗಲೇ ನಿಧನಹೊಂದಿದ್ದರು.

ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾಗ 1974ರ ನೆರೆ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ಪಾವೂರು, ಹರೇಕಳ ನದಿ ತೀರದ ನೆರೆ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಸುಮಾರು 150 ಸಂತ್ರಸ್ತ ಕುಟುಂಬಗಳಿಗೆ ತಲಾ ಒಂದು ಎಕರೆಯಂತೆ ಭೂಮಿ ಮಂಜೂರು ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇಂದಿಗೂ ಹರೇಕಳ ಗ್ರಾಮದಲ್ಲಿರುವ ಈ ಪ್ರದೇಶ ಫರೀದ್‌ ನಗರವೆಂದೇ ಪ್ರಸಿದ್ಧಿ ಪಡೆದಿದೆ. ಎರಡನೇ ಅವಧಿಯ ಸಂದರ್ಭದಲ್ಲಿ ಕೊಣಾಜೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದ್ದು, ಸ್ಥಾಪಕ ಸದಸ್ಯರಲ್ಲಿ 
ಓರ್ವರಾಗಿದ್ದರು. ಹರೇಕಳ ಅಂಬ್ಲಿಮೊಗರು, ರೆಂಜಾಡಿ, ಸಹಿತ ಅನೇಕ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಸೇತುವೆ ಮೂಲಕ ಮೂಲಸೌಕರ್ಯ, ಸಂತೋಷ್‌ನಗರ, ಎಕ್ಕೂರುಗುಡ್ಡೆ, ಸುಭಾಷ್‌ನಗರ, ಅಸೈಗೋಳಿಯಲ್ಲಿ ಸೈಟ್‌ ನಿರ್ಮಿಸಿ ಹಕ್ಕುಪತ್ರ ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ನಮ್ಮ ತಂದೆ ಎನ್ನುತ್ತಾರೆ ಝೀನತ್‌ ಅವರು.

ಸಾಮಾಜಿಕ ಕಾರ್ಯರ್ತ ಮತ್ತು ಗುತ್ತಿಗೆದಾರರಾಗಿದ್ದ ನಮ್ಮ ತಾಯಿಯ ತಂದೆ (ಫರೀದ್‌ ಅವರ ಪತ್ನಿ ನಸೀಮಾ ಫರೀದ್‌ ಅವರ ತಂದೆ) ಅಬ್ದುಲ್‌ ಕಡಬಕಾರ್‌ ಅವರ ಬೆಂಬಲವೇ ರಾಜಕೀಯ ಪ್ರವೇಶಿಸಿ ಶಾಸಕರಾದವರು. ಬಳಿಕ ಅವರ ಸ್ವವರ್ಚಸ್ಸಿನಿಂದ ಮೂರು ಬಾರಿ ಶಾಸಕರಾದ ವರು. ಅಂದಿನ ಕಾಲದಲ್ಲಿ ಕಾಂಗ್ರೆಸ್‌ ಮುಖಂಡರಾದ ಅಝೀಝ್ ಸೇಠ್, ಮಲ್ಲಿಕಾರ್ಜುನ ಖರ್ಗೆ, ಕಾಪು ಭಾಸ್ಕರ ಶೆಟ್ಟಿ, ಬಿ.ಎ. ಮೊಯಿದಿನ್‌, ಶ್ರೀಕಂಠಯ್ಯ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಮುಖಂಡರ ಒಡನಾಟವನ್ನು ನಮ್ಮ ತಂದೆಯವರು ಹೊಂದಿದ್ದರು.

ಕುಟುಂಬ ಎಂದರೆ ಪಂಚ ಪ್ರಾಣವಾಗಿದ್ದ ಅವರು ಶಿಸ್ತುಬದ್ಧ ಜೀವನ ನಡೆಸುವುದರೊಂದಿಗೆ ಮಕ್ಕಳಿಗೂ ಅದನ್ನೇ ಹೇಳಿಕೊಟ್ಟಿದ್ದರು. ಕುಟುಂಬ ಜೀವನದಲ್ಲಿ ಎಂದಿಗೂ ರಾಜಕೀಯವನ್ನು ಬೆರೆಸುತ್ತಿರಲಿಲ್ಲ. 2003ರಲ್ಲಿ ಪತ್ನಿ (ನಸೀಮಾ ಫರೀದ್‌) ನಿಧನದ ಅನಂತರ ಮಾನಸಿಕವಾಗಿ ಕುಗ್ಗಿದ್ದ ಅವರು ಮೂರು ವರ್ಷ ಕಾಲ ಅನಾರೋಗ್ಯ ಪೀಡಿತರಾಗಿ 2006ರಲ್ಲಿ ನಿಧನ ಹೊಂದಿದರು. ಉಳ್ಳಾಲ ಕ್ಷೇತ್ರದ ಹಿರಿಯರು ಇಂದಿಗೂ ಯು.ಟಿ. ಫರೀದ್‌ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ನೆನಪಿಸುತ್ತಾರೆ ಎನ್ನುತ್ತಾರೆ ಝೀನತ್‌.

Advertisement

— ವಸಂತ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next