Advertisement

ಮೆಲುಕು : 8 ಬಾರಿ ಗೆದ್ದು ಸಿಎಂ ಆದ ಮೇಲೆ ಸೋತರು!

10:05 AM Mar 16, 2018 | Team Udayavani |

ದಿವಂಗತ ಎನ್‌.  ಧರಂಸಿಂಗ್‌ ಅವರು ಮುಖ್ಯಮಂತ್ರಿ ಆಗುವವರೆಗೂ ಸತತ ಎಂಟು ಸಲ ಕಲಬುರ್ಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದರು. ಆದರೆ ಮುಖ್ಯಮಂತ್ರಿಯಾದ ನಂತರ ನಡೆದ ಚುನಾವಣೆಯಲ್ಲಿ ಸೋತರು. ಸಿಎಂ ಆದ ನಂತರ ಸೋಲು ಅನುಭವಿಸಿರುವುದು ರಾಜ್ಯದ ರಾಜಕಾರಣದಲ್ಲಿ ಒಂದು ಅಪರೂಪವೇ ಸರಿ. ಜೇವರ್ಗಿಯಿಂದ ಎಂಟನೇ ಸಲ ಆಯ್ಕೆಯಾದಾಗ 20 ತಿಂಗಳ ಕಾಲ ಧರಂಸಿಂಗ್‌ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದರು.

Advertisement

1972ರಿಂದ 2004ರವರೆಗೆ ಧರಂಸಿಂಗ್‌ ಸತತವಾಗಿ ಶಾಸನಸಭೆಗೆ ಚುನಾಯಿತರಾದರು. 2004ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾದ ಅವರು 2006ರಲ್ಲಿ ಕೆಳಗಿಳಿದರು. 2008ರ ಚುನಾವಣೆವರೆಗೂ ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ಪಡೆದಿದ್ದರು. ಆದರೆ 2008ರಲ್ಲಿ ಕೇವಲ 52 ಮತಗಳಿಂದ ಧರಂಸಿಂಗ್‌ ಅವರು ಬಿಜೆಪಿಯ ದೊಡ್ಡಪ್ಪ ಗೌಡ ಪಾಟೀಲ ನರಿಬೋಳ ಎದುರು ಸೋತರು.

ಪ್ರತಿ ಸಲ ಚುನಾವಣೆ ಬಂದಾಗ ಈ ಸಲ ಧರಂಸಿಂಗ್‌ ಅವರು ಸೋಲುತ್ತಾರೆ ಎನ್ನಲಾಗುತ್ತಿತ್ತು. ಆದರೆ ಕೊನೆಗೆ ಧರಂಸಿಂಗ್‌ ಅವರೇ ಗೆದ್ದು ಬರುತ್ತಿದ್ದರು. ಧರಂಸಿಂಗ್‌ ಅವರ ಜನಾಂಗದ ರಜಪೂತ ಸಮಾಜದವರು ಜೇವರ್ಗಿ ತಾಲೂಕಿನಲ್ಲಿ ಎರಡು ಸಾವಿರ ಮತದಾರರಿಲ್ಲ. ಆದರೆ ಜಾತ್ಯತೀತ ನಾಯಕ ಎಂದೇ ಖ್ಯಾತಿ ಪಡೆದಿದ್ದ ಧರಂಸಿಂಗ್‌ ಎಲ್ಲರ ಬೆಂಬಲದೊಂದಿಗೆ ಆಯ್ಕೆಯಾಗುತ್ತಲೇ ಬರುತ್ತಿದ್ದರು.

ಧರಂಸಿಂಗ್‌ ಸಾಧಿಸಿದ 8 ಗೆಲುವಿನಲ್ಲಿ 10 ಸಾವಿರಕ್ಕೂ ಅಧಿಕ ಮತಗಳಿಂದ ಒಮ್ಮೆಯೂ ಗೆದ್ದಿಲ್ಲ. ಎರಡು ಸಲವಂತೂ ಕೇವಲ 2 ಸಾವಿರ ಮತಗಳಿಂದ ಗೆಲುವು ಸಾಧಿಸಿರುವುದು ಮತ್ತೂಂದು ವಿಶೇಷ. 2008ರಲ್ಲಿ ಸೋತ ನಂತರ 2009ರ ಲೋಕಸಭಾ ಚುನಾವಣೆಯಲ್ಲಿ ಬೀದರ್‌  ಕ್ಷೇತ್ರದಿಂದ ಗೆದ್ದು ಸಂಸದರಾದರು.

ಸ್ವಾತಂತ್ರ್ಯಾನಂತರ ನಡೆದ 13 ಚುನಾವಣೆಗಳಲ್ಲಿ ಜೇವರ್ಗಿ ಕ್ಷೇತ್ರದ ಜನರು ಕೇವಲ ಆರು ಜನರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಇದು ಕೂಡ ದಾಖಲೆ. 1957ರಲ್ಲಿ ಶರಣಗೌಡ ಸಿದ್ರಾಮಯ್ಯ, 1962ರಲ್ಲಿ ನೀಲಕಂಠಪ್ಪ ಶರಣಪ್ಪ, 1967ರಲ್ಲಿ ಎನ್‌. ಸಿದ್ರಾಮಗೌಡ, 1972ರಿಂದ 2004ರವರೆಗೆ ಧರಂಸಿಂಗ್‌ ಹಾಗೂ 2008ರಲ್ಲಿ ದೊಡ್ಡಪ್ಪ ಗೌಡ ಪಾಟೀಲ ನರಿಬೋಳ ಹಾಗೂ 2013ರಲ್ಲಿ ಧರಂಸಿಂಗ್‌ ಪುತ್ರ ಡಾ.ಅಜಯಸಿಂಗ್‌ ಚುನಾಯಿತರಾಗಿದ್ದಾರೆ. ಜೇವರ್ಗಿ ಕ್ಷೇತ್ರದಲ್ಲಿ 1957 ಮತ್ತು 1967ರಲ್ಲಿ ಸ್ವತಂತ್ರ ಅಭ್ಯರ್ಥಿ ಬಿಟ್ಟರೆ ಉಳಿದ 10 ಸಲ ಕಾಂಗ್ರೆಸ್‌ ಗೆದ್ದಿದೆ. ಬಿಜೆಪಿ ಒಂದು ಸಲ ಗೆದ್ದಿದೆ. ವಿಪಕ್ಷಗಳು ತಂತ್ರಗಾರಿಕೆ ರೂಪಿಸಿದ್ದರೂ ಧರಂ ಸಿಂಗ್‌ ಅವುಗಳನ್ನು ನಿರುಪಯುಕ್ತಗೊಳಿಸಿ ಆಯ್ಕೆಯಾಗುತ್ತಾ ಬರುತ್ತಿದ್ದರು.

Advertisement

– ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next