Advertisement

ಮೂಲ ಸೌಕರ್ಯ ಸಮರ್ಪಕ ಅನುಷ್ಠಾನಕ್ಕೆ ಆಸಕ್ತಿ ವಹಿಸಿ

10:10 PM Jun 04, 2019 | Team Udayavani |

ನಗರ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ನಿಮ್ಮ ದನಿಗೆ ನಮ್ಮ ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವತ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು. ಈ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ. ವೈಯಕ್ತಿಕ ಸಮಸ್ಯೆ, ಕಾನೂನು ವ್ಯಾಜ್ಯದ ದೂರು ಅಥವಾ ವಿವಾದದಲ್ಲಿರುವ ವಿಷಯಗಳನ್ನು ಪರಿಗಣಿಸುವುದಿಲ್ಲ. ನಾಗರಿಕರು ತಮ್ಮ ಪ್ರದೇಶದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು ಪೂರಕವೆನಿಸುವ ಒಂದು ಫೋಟೊ ಜತೆ ಹೆಸರು, ವಿಳಾಸ ಮತ್ತು ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಅಂಚೆ, ಇಮೇಲ್‌ ಅಥವಾ ವಾಟ್ಸಪ್‌ ಮೂಲಕ ಕಳುಹಿಸಬಹುದು. ಅರ್ಹ ದೂರುಗಳನ್ನು ಪ್ರಕಟಿಸಿ, ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಸುದಿನ ಮಾಡಲಿದೆ.

Advertisement

ಚರಂಡಿ ನೀರು ಅಂಗಡಿಗೆ
ಅತ್ತಾವರದಲ್ಲಿರುವ ಆದಾಯ ತೆರಿಗೆ ಕಚೇರಿ ಮುಂಭಾಗದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲದಿರುವುದರಿಂದ ಸುತ್ತಮುತ್ತಲಿನ ಮನೆಗಳಿಗೆ ವ್ಯಾಪಾರಸ್ಥರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಮಳೆ ಬಂದಾಗ ಚರಂಡಿ ಸಂಪೂರ್ಣ ಬ್ಲಾಕ್‌ ಆಗಿ ಪಕ್ಕದ ಅಂಗಡಿಗಳ ಒಳಗೆ ನೀರು ಹರಿಯುತ್ತದೆ. ಸುಮಾರು ಒಂದು ವರ್ಷದಿಂದ ಇದೇ ಸ್ಥಿತಿಯಲ್ಲಿದ್ದು, ಸಂಬಂಧಪಟ್ಟವರು ತತ್‌ಕ್ಷಣ ಈ ಚರಂಡಿಯನ್ನು ವ್ಯವಸ್ಥಿತ ರೀತಿಯಲ್ಲಿ ಹರಿಯುವಂತೆ ಮಾಡಬೇಕು.
-ರಂಜಿತ್‌, ಸ್ಥಳೀಯ ವ್ಯಾಪಾರಸ್ಥರು

ಹೂಳು ತುಂಬಿ ಚರಂಡಿ ಬ್ಲಾಕ್‌
ಕಾವೂರು ಮುಲ್ಲಕಾಡಿನಲ್ಲಿ ಚರಂಡಿಯಲ್ಲಿ ಹೂಳು ತುಂಬಿ ಬ್ಲಾಕ್‌ ಆಗಿ ಮಳೆಗಾಲದಲ್ಲಿ ಮನೆಗಳಿಗೆ ನೀರು ಬರುತ್ತದೆ. ಇಲ್ಲಿ ಸ್ವಲ್ಪ ಕೆಳಭಾಗದಲ್ಲಿ ಚರಂಡಿಗೆ ಅಡ್ಡಲಾಗಿ ಕಾಂಕ್ರಿಟ್‌ ಗೋಡೆಯನ್ನು ಕಟ್ಟಿರುವುದೇ ಇದಕ್ಕೆ ಕಾರಣವಾಗಿದೆ. ಮಳೆಗಾಲದಲ್ಲಿ ನೀರು ಹರಿದು ಹೋಗಲು ಜಾಗವಿಲ್ಲದೆ, ಚರಂಡಿಯಲ್ಲೇ ತುಂಬಿಕೊ ಳ್ಳುತ್ತದೆ. ಸ್ಥಳೀಯ ಕಾರ್ಪೊರೇಟರ್‌ಗೆ ಹಲವು ಬಾರಿ ಹೇಳಿದ್ದರೂ, ಪ್ರಯೋಜನ ಇಲ್ಲದಾಗಿದೆ. ಇದಕ್ಕೊಂದು ಪರಿಹಾರ ದೊರಕಿಸಿಕೊಡಬೇಕು.
-ಭಾಸ್ಕರ್‌ ದೇವಾಡಿಗ, ಸ್ಥಳೀಯರು

ಕುಲಶೇಖರ ಶಕ್ತಿನಗರ ಕ್ರಾಸ್‌ ರಸ್ತೆಯ ದುರವಸ್ಥೆ
ಕುಲಶೇಖರ ಶಕ್ತಿನಗರ ಕ್ರಾಸ್‌ ಡಾಮರು ರಸ್ತೆಯನ್ನು ಸುಮಾರು ನೂರು ಮೀಟರ್‌ ದೂರದಲ್ಲಿ ಯಾವುದೋ ಟೆಲಿಫೋನ್‌ ಕಂಪೆನಿಯವರು ತನ್ನ ಫೈಬರ್‌ ಕೇಬಲ್‌ ಅಳವಡಿಸಲು ರಾತ್ರಿಯಲ್ಲಿ ರಸ್ತೆಯನ್ನು ಅಗೆದು ಕೇಬಲನ್ನು ಹಾಕಿ ಅದನ್ನು ಮಣ್ಣಿನಿಂದ ಮುಚ್ಚಿ ಹೋಗಿದ್ದಾರೆ. ಈಗ ಮಣ್ಣು ಎದ್ದು ಹೋಗಿ ದೊಡ್ಡ ಹೊಂಡ ಸೃಷ್ಟಿಯಾಗಿದೆ. ಮಳೆ ಬಂದರೆ ಗುಂಡಿಯಲ್ಲಿ ನೀರು ತುಂಬಿ ವಾಹನ ಅಪಘಾತವಾಗುವ ಸಂಭವ ಹೆಚ್ಚು. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
-ಜಾನ್‌, ಸ್ಥಳೀಯರು

ಕಾಂಕ್ರೀಟ್‌ ಶಿಥಿಲಾವಸ್ಥೆಯಲ್ಲಿ
ಜೆಪ್ಪು ಕುಡುಪ್ಪಾಡಿ ರಸ್ತೆಯ ಶ್ರೀ ಜನಾರ್ದನ ಭಜನ ಮಂದಿರಕ್ಕೆ ಹೋಗುವ ದಾರಿಯಲ್ಲಿ ತೋಡಿಗೆ ಅಡ್ಡಲಾಗಿ ಹಾಕಿರುವ ಕಾಂಕ್ರೀಟ್‌ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಸಂದರ್ಭ ಬೀಳುವ ಸ್ಥಿತಿಯಲ್ಲಿದೆ. ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ಚ ಬಗ್ಗೆ ಸಂಬಂಧಪಟ್ಟವರು ಗಮನಹರಿಸಲಿ.
-ಅರುಣ್‌ ಕುಮಾರ್‌, ಸ್ಥಳೀಯರು

Advertisement

ಭೂಗತ ಒಳಚರಂಡಿ ಸಂಪರ್ಕ ಮಾಡಿ
ಮಠದಕಣಿ ಪ್ರಥಮ ತಿರುವು ರಸ್ತೆಯ ಇಕ್ಕೆಲಗಳ ನಿವಾಸಿಗಳಿಗೆ ಭೂಗತ ಒಳಚರಂಡಿ ಸಂಪರ್ಕ ವ್ಯವಸ್ಥೆ ಮಾಡದೆ 25 ವರುಷಗಳು ಸಂದುವು. ಹಲವು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದೂರು ನೀಡಿ ದರೂ ಪ್ರಯೋಜನವಾಗಿಲ್ಲ. 2006ರಲ್ಲಿ ಒಳಚರಂಡಿ ವ್ಯವಸ್ಥೆಯ ಕಾಮಗಾರಿ ಪುನರ್ಜೀವಗೊಂಡು ಸುಮಾರು 90 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ನಡೆಸಲು ಯೋಜನೆ ರೂಪಿಸಲಾಗಿತ್ತು. ಸುಮಾರು 7 ವರ್ಷಗಳು ಕಳೆದರೂ ಭೂಗತ ಒಳ ಚರಂಡಿ ಸಂಪರ್ಕಕ್ಕೆ ಕಾಲ ಕೂಡಿ ಬಂದಿಲ್ಲ. ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿದೆ.
-ಯೋಗೀಶ್‌ ಆಚಾರ್‌, ಮಠದಕಣಿ ಪ್ರಥಮ ತಿರುವು

ಹಂಪ್‌ನಿಂದ ಸಂಕಟ
ಜೆಪ್ಪು ಮಾರ್ಕೆಟ್‌ ಬಳಿ ಓಣಿಕೆರೆಗೆ ತೆರಳುವ ತಿರುವಿನ ಪಕ್ಕದಲ್ಲಿ ಹಾಗೂ ಮೋರ್ಗನ್ಸ್‌ ಗೇಟ್‌ ಹೊಟೇಲ್‌ ರಾಮಭವನದ ಬಳಿ ರಸ್ತೆಗೆ ಹಂಪ್‌ ನಿರ್ಮಿಸಲಾಗಿದ್ದು, ಹಳೆಯದಾಗಿ ಇದ್ದ ರಸ್ತೆ ಉಬ್ಬನ್ನು ಸ್ವಲ್ಪ ವಿಸ್ತರಿಸಲಾಗಿದೆ. ಹಂಪ್‌ ನಿರ್ಮಾಣಗೊಂಡ ದಿನದಿಂದಲೂ ಇಲ್ಲಿ ಅಪಘಾತ ಸಂಭವಿಸುತ್ತಿದ್ದು, ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ರಸ್ತೆ ಉಬ್ಬು ಗುರುತಿಸಲು ಸಾಧ್ಯವಾಗುವಂತೆ ಸೂಕ್ತ ಬಣ್ಣ ಬಳಿದು ಮುಂದೆ ಅನಾಹುತಗಳು ಸಂಭವಿಸದಂತೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು.
 -ನೇಮು ಕೊಟ್ಟಾರಿ, ಜೆಪ್ಪು

ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿ
ಬಲ್ಮಠ ಗೋಲ್ಡ್‌ ಪಿಂಚ್‌ ಹೊಟೇಲ್‌ನಿಂದ ಜ್ಯೂಸ್‌ ಜಂಕ್ಷನ್‌ಗೆ ಸಾಗುವ ಬಲ್ಮಠ ಬ್ರಿಡ್ಜ್ ರಸ್ತೆಯ ಕಾಮಗಾರಿಯನ್ನು ಅರ್ಧಂಬರ್ಧ ಮಾಡಲಾಗಿದೆ. ಹಲವು ಸಮಯಗಳಿಂದ ಈ ಸಮಸ್ಯೆ ಹಾಗೆ ಇದ್ದು, ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ. ಸದ್ಯ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ತೆರಳಿದರೆ ಅಪಘಾತ ಸಂಭವಿಸುವುದು ನಿಚ್ಚಲ. ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಅದಕ್ಕೂ ಮುನ್ನ ರಸ್ತೆ ಸರಿಪಡಿಸದಿದ್ದಲ್ಲಿ ಇನ್ನಷ್ಟು ಸಮಸ್ಯೆ ಎದುರಾಗಲಿದೆ.
-ಮನೋಹರ್‌, ಸ್ಥಳೀಯರು

ಪಾರ್ಕ್‌ನಲ್ಲಿ ತ್ಯಾಜ್ಯದರಾಶಿ
ನಗರದ ಹೃದಯಭಾಗದಲ್ಲಿರುವ ಪುರಭವನದ ಪಾರ್ಕ್‌ ಸದ್ಯ ದಾರಿಹೋಕರಿಗೆ, ಕುಡುಕರಿಗೆ ಆಶ್ರಯತಾಣವಾಗಿ ಬದಲಾಗಿದೆ. ಇದರಿಂದ ಸಾರ್ವಜನಿಕರು ಇಲ್ಲಿ ಬಂದು ಒಂದಷ್ಟು ಹೊತ್ತು ಕಾಲ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಇಲ್ಲಿ ಛಾವಣಿಗೆ ಹಾಕುವ ಶೀಟ್‌ಗಳು, ಮತ್ತಿತರ ಕಸಗಳನ್ನು ಎಸೆದಿರುವುದರಿಂದ ಪಾರ್ಕ್‌ ಗೆ ಹೋಗುವುದೇ ದೊಡ್ಡ ತೊಂದರೆಯಾಗಿದೆ. ಅಲ್ಲಲ್ಲಿ ಮಣ್ಣಿನ ರಾಶಿಯಿದ್ದು, ಆ ಮಣ್ಣಿನ ರಾಶಿಯ ಮೇಲೂ ತ್ಯಾಜ್ಯವೇ ಮೇಳೈಸುತ್ತಿದೆ. ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಬಿಂಬಿಸುವಂತಹ ಕಾರ್ಯಕ್ರಮಗಳು ಪುರಭವನದಲ್ಲಿ ನಡೆಯುವುದರಿಂದ ಪಾರ್ಕ್‌ನ್ನೂ ಸುಸ್ಥಿತಿಯಲ್ಲಿಡುವುದು ಸ್ಥಳೀಯಾಡಳಿತದ ಕರ್ತವ್ಯ.
– ಸ್ಥಳೀಯರು,

ಪಂಪ್‌ವೆಲ್‌ ರಾಜಕಾಲುವೆ ಸರಿಪಡಿಸಿ
ಮಳೆಗಾಲ ಸಮೀಪಿಸುತ್ತಿದೆ. ಪಂಪ್‌ವೆಲ್‌ ಕರ್ಣಾಟಕ ಬ್ಯಾಂಕ್‌ ಮುಂಭಾಗದ ರಾಜಕಾಲುವೆ ಹೂಳೆತ್ತುವ ಕೆಲಸ ಇನ್ನೂ ಆಗಿಲ್ಲ. ಪಂಪ್‌ವೆಲ್‌ ಮೇಲುಸೇತುವೆ ಕಾಮಗಾರಿ ನಡೆಯುತ್ತಿರುವ ಕಾರಣ ಮಳೆಗಾಲದಲ್ಲಿ ಈ ಭಾಗದಲ್ಲಿ ಸಂಚಾರ ಕಷ್ಟವಾಗಲಿದೆ. ಇನ್ನೂ ರಾಜಕಾಲುವೆ ಹೂಳೆತ್ತದೆ ಇರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ.
– ಸ್ಥಳೀಯರು

ನಾಮಫಲಕ ಸರಿಪಡಿಸಿ
ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಕ್ಕೆ ತೆರಳುವ ಜನರಿಗೆ ದಾರಿ ತೋರಿಸುವ ನಾಮಫಲಕದ ಹೆಸರನ್ನು ಹಳೆಯ ಕಂಕನಾಡಿ ಹೆಸರಿನ ಬೋರ್ಡ್‌ನ ಮೇಲೆಯೇ ಬರೆಯಲಾಗಿದ್ದು, ಇದೀಗ ಅಕ್ಷರಗಳು ಬಿದ್ದು ಹೋಗಿ ಓದಲು ಜನರು ಕಷ್ಟ ಪಡುವಂತಾಗಿದೆ.
-ನಿತ್ಯ ಪ್ರಯಾಣಿಕರು

Advertisement

Udayavani is now on Telegram. Click here to join our channel and stay updated with the latest news.

Next