ಹುಬ್ಬಳ್ಳಿ/ಹಳೇಬೀಡು: ರೈತರಿಗೆ ಅನುಕೂಲವಾಗುವಂತೆ ಪಿಎಲ್‌ಡಿ, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿ ರೈತರು ಪಡೆದಿರುವ ಅಲ್ಪಾವಧಿ ಹಾಗೂ ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳಿಂದ ರೈತರು ಸಾಲದ ಒತ್ತಡದಲ್ಲಿ ಸಿಲುಕಿದ್ದಾರೆ. ಹೀಗಾಗಿ ಬ್ಯಾಂಕ್‌ಗಳಲ್ಲಿ ಮಾಡಿದ್ದ ಸಾಲದ ಬಡ್ಡಿ, ಸುಸ್ತಿ ಬಡ್ಡಿ ಕಟ್ಟಲಾಗದ ಸ್ಥಿತಿಯಲ್ಲಿದ್ದಾರೆ. ಅವರಿಗೆ ನೆರವಾಗುವ ನಿಟ್ಟಿನಲ್ಲಿ ಬಡ್ಡಿ ಮನ್ನಾ ಮಾಡಲಾಗುತ್ತಿದೆ ಎಂದರು.
ಬಡ್ಡಿ ಹಾಗೂ ಸುಸ್ತಿ ಬಡ್ಡಿ ಮನ್ನಾದಿಂದ ಸರಕಾರಕ್ಕೆ ಅಂದಾಜು 400 ಕೋಟಿ ರೂ.ಗೂ ಅಧಿಕ ಹೊರೆ ಬೀಳಲಿದೆ. ಮಾರ್ಚ್ ಅಂತ್ಯದೊಳಗಾಗಿ ಸಾಲ ಮರು ಪಾವತಿಸುವ ರೈತರಿಗೆ ರಿಯಾಯಿತಿ ಸಹ ನೀಡಲು ಯೋಚಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಮಧ್ಯೆ, ಹಳೇಬೀಡಿನಲ್ಲಿ ಮಾತನಾಡಿದ ಯಡಿಯೂರಪ್ಪ, ರೈತರ ಸಂಕಷ್ಟಗಳಿಗೆ ಸ್ಪಂದಿಸಲೆಂದೇ ನಾವು ಅಧಿಕಾರ ಹಿಡಿದಿದ್ದೇವೆ. ಈಗಾಗಲೇ ರೈತರ ಜೀವನ ಹಸ ನಾಗಿಸಲು ಗ್ರಾಮೀಣ ಭಾಗದಲ್ಲಿ ನೆಮ್ಮದಿಯ ಜೀವನ ಸಾಗಿಸಲು ರೈತರ ಯಂತ್ರೋಪಕರಣಗಳ ಸಾಲ ಕೂಡ ಮನ್ನಾ ಮಾಡಲು ಸಿದ್ದರಿರುವುದಾಗಿ ಹೇಳಿದರು.
ಅಂತರ್ಜಲ ಕುಸಿದು ರೈತರು ನೀರಿಲ್ಲದೆ ಸಾಕಷ್ಟು ಬವಣೆ ಅನುಭವಿಸುತ್ತಿದ್ದಾರೆ. ಅವರ ಬದುಕಿಗೆ ಅರ್ಥ ಕೊಡಲು ಹಾಗೂ ಅಂತರ್ಜಲ ಹೆಚ್ಚಿಸಲು ಕೆರೆಗಳನ್ನು ತುಂಬಿಸುವ ಕಾರ್ಯ ಕೂಡ ಮಾಡಲು ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ತಿಳಿಸಿದರು.