Advertisement

ಕೋವಿಡ್ ಪೂರ್ವಕ್ಕೆ ತಲುಪಿದ ಬಡ್ಡಿದರ; ಮೂರನೇ ಬಾರಿಗೆ ಶೇ.0.5 ಬಡ್ಡಿದರ ಹೆಚ್ಚಿಸಿದ ಆರ್‌ಬಿಐ

08:34 PM Aug 05, 2022 | Team Udayavani |

ಮುಂಬೈ: ಪ್ರಸಕ್ತ ವಿತ್ತೀಯ ವರ್ಷದಲ್ಲಿ ಮೂರನೇ ಬಾರಿಗೆ ಆರ್‌ಬಿಐ ಸಾಲಗಳ ಮೇಲಿನ ಬಡ್ಡಿದರವನ್ನು ಶೇ.0.5 (50 ಬೇಸಿಸ್‌ ಪಾಯಿಂಟ್ಸ್‌) ಏರಿಕೆ ಮಾಡಿದೆ.

Advertisement

ಹೀಗಾಗಿ, ಬಡ್ಡಿದರ ಪ್ರಮಾಣ ದೇಶಕ್ಕೆ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುವುದಕ್ಕಿಂತ ಮೊದಲು ಇದ್ದ ಪ್ರಮಾಣ ಅಂದರೆ ಶೇ. 5.40ಕ್ಕೆ ತಲುಪಿದಂತಾಗಿದೆ. ಜತೆಗೆ 2019ನೇ ಸಾಲಿಗೆ ಹೋಲಿಕೆ ಮಾಡಿದರೆ, ಗರಿಷ್ಠ ಏರಿಕೆ ಇದಾಗಿದೆ. ಮೇ ಬಳಿಕ ಬಡ್ಡಿದರ ಶೇ.1.40 ಏರಿಕೆಯಾಗಿದೆ.

ಬುಧವಾರ ಶುರುವಾಗಿದ್ದ ಆರು ಮಂದಿ ಸದಸ್ಯರ ವಿತ್ತೀಯ ನೀತಿ ಪರಿಶೀಲನಾ ಸಮಿತಿ (ಎಂಪಿಸಿ) ಸಭೆ ಶುಕ್ರವಾರ ಮುಕ್ತಾಯವಾಗಿದೆ.

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಡ್ಡಿದರ ಏರಿಕೆ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ. ಇದರಿಂದಾಗಿ ಗೃಹ, ವಾಹನ, ವೈಯಕ್ತಿಕ ಮತ್ತು ಕಾರ್ಪೊರೇಟ್‌ ಸಾಲಗಳ ಬಡ್ಡಿದರಗಳು ಹೆಚ್ಚಾಗಲಿದೆ.

ಹೀಗಾಗಿ ಇಎಂಐ ಕೂಡ ತುಟ್ಟಿಯಾಗಲಿದೆ. ಇನ್ನೊಂದು ಲೆಕ್ಕಾಚಾರದಲ್ಲಿ ಹೇಳುವುದಾದರೆ ಬ್ಯಾಂಕ್‌ಗಳಲ್ಲಿ ಇರಿಸಲಾಗಿರುವ ಉಳಿತಾಯ ಠೇವಣಿಗಳಿಗೆ ಬಡ್ಡಿದರ ಕೂಡ ಹೆಚ್ಚಲಿದೆ.

Advertisement

ಅಭಿವೃದ್ಧಿದರದಲ್ಲಿ ಯಥಾ ಸ್ಥಿತಿ:
ಉಕ್ರೇನ್‌-ರಷ್ಯಾ, ಚೀನಾ ಮತ್ತು ತೈವಾನ್‌ ನಡುವಿನ ಬಿಕ್ಕಟ್ಟು ಸೇರಿದಂತೆ ರಾಜಕೀಯ ತಲ್ಲಣಗಳಿಂದಾಗಿ ಆರ್ಥಿಕ ಹಿಂಜರಿತ ಎಚ್ಚರಿಕೆಯನ್ನೂ ಗಮನದಲ್ಲಿ ಇರಿಸಿಕೊಂಡು ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಯ ಪ್ರಮಾಣವನ್ನು ಶೇ.7.2ರ ಪ್ರಮಾಣಕ್ಕೇ ಇರಿಸಲು ತೀರ್ಮಾನಿಸಲಾಗಿದೆ ಎಂದು ಶಕ್ತಿಕಾಂತ ದಾಸ್‌ ಹೇಳಿದ್ದಾರೆ. ಇದರ ಜತೆಗೆ ಪ್ರಸಕ್ತ ವಿತ್ತೀಯ ವರ್ಷಕ್ಕೆ ಸಂಬಂಧಿಸಿದಂತೆ ಹಣದುಬ್ಬರ ಪ್ರಮಾಣ ಶೇ.6.7ನ್ನೇ ಮುಂದುವರಿಸಲು ತೀರ್ಮಾನಿಸಿದೆ. ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆಯ ಬೆಲೆಗಳಲ್ಲೂ ಇಳಿಕೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next