ಮುಂಬಯಿ: ಹೊಸ ವಷìದಲ್ಲಿ ಮನೆ ಖರೀದಿಸಬೇಕು. ಸಾಲದ ಮೇಲಿನ ಬಡ್ಡಿ ದರ ಇಳಿಕೆಯಾದೀತು ಎಂಬ ನಿರೀಕ್ಷೆ ಸುಳ್ಳಾಗಿದೆ. ಮುಂದಿನ ಎರಡು ತ್ತೈಮಾಸಿಕಗಳಿಗೆ ಹಣದುಬ್ಬರ ದರ ಹೆಚ್ಚಾದೀತು ಎಂಬ ಕಾರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆರ್‌ಬಿಐ ಗವರ್ನರ್ ಡಾ.ಊರ್ಜಿತ್ ಪಟೇಲ್ ನೇತೃತ್ವದ ಆರು ಮಂದಿ ಸದಸ್ಯರಿರುವ ಹಣಕಾಸು ಸಲಹಾ ಸಮಿತಿ (ಎಂಪಿಸಿ) ಬುಧವಾರ ನಡೆದ ಐದನೇ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ಇದರ ಹೊರತಾಗಿಯೂ 2017-18ನೇ ಸಾಲಿನ ಬೆಳವಣಿಗೆ ದರವನ್ನು ಶೇ.6.7ಕ್ಕೆ ನಿಗದಿ ಮಾಡಲಾಗಿದೆ. ರಿವರ್ಸ್ ರೆಪೋ ರೇಟ್ ಕೂಡ ಶೇ.6.25 ಮುಂದುವರಿದಿದೆ.
ಮುಂದಿನ ಮಾರ್ಚ್ ವೇಳೆಗೆ ಹಣದುಬ್ಬರ ದರದ ನಿರೀಕ್ಷೆಯನ್ನು ಈ ಹಿಂದಿದ್ದ ಶೇ.4.2- ಶೇ.4.6ರಿಂದ ಶೇ.4.3-ಶೇ.4.7ಕ್ಕೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ. ಕಚ್ಚಾ ತೈಲ ದರ ಏರಿಕೆ, ತರಕಾರಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಆರ್‌ಬಿಐ ಹಣದುಬ್ಬರ ದರ ಏರಿಕೆಯ ನಿರೀಕ್ಷೆಯನ್ನು ಸಹಜವಾಗಿಯೇ ಇರಿಸಿಕೊಂಡಿದೆ. ಹೊಸ ಹಣಕಾಸು ವರ್ಷಕ್ಕಾಗಿ ಫೆ.1ರಂದು ಬಜೆಟ್ ಮಂಡನೆಯಾಗುವ ಹಿನ್ನೆಲೆಯಲ್ಲಿ ತ್ತೈಮಾಸಿಕ ಸಾಲ ನೀತಿ ಪರಾಮರ್ಶೆ ಸಭೆಯಲ್ಲಿ ಹೆಚ್ಚಿನ ಬದಲಾವಣೆ ಘೋಷಣೆ ಮಾಡದೆ ತಟಸ್ಥ ನಿಲುವು ಅನುಸರಿಸಿದೆ. ಐಐಎಂನ ಪ್ರಾಧ್ಯಾಪಕ ಮತ್ತು ಸಮಿತಿ ಸದಸ್ಯ ರವೀಂದ್ರ ಧೊಲಾಕಿಯಾ ಮಾತ್ರ 0.25 ಶೇ. ಬಡ್ಡಿ ದರ ಕಡಿಮೆ ಮಾಡಬೇಕೆಂದು ಪಟ್ಟುಹಿಡಿದರಾ ದರೂ, ಅವರ ನಿಲುವಿಗೆ ಬೆಂಬಲ ಸಿಗಲಿಲ್ಲ.
ಮನ್ನಾದಿಂದಲೂ ಪ್ರಭಾವ: ಉತ್ತರ ಪ್ರದೇಶ, ಪಂಜಾಬ್ ಸೇರಿ ಕೆಲ ರಾಜ್ಯ ಸರಕಾರಗಳಿಂದ ಸಾಲ ಮನ್ನಾ ಘೋಷಣೆ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಮತ್ತು ವ್ಯಾಟ್ ಕಡಿತ, ಜಿಎಸ್‌ಟಿಯಿಂದ ಕೆಲ ವಸ್ತುಗಳ ತೆರಿಗೆ ಕಡಿತದಿಂದಾಗಿ ಆದಾಯ ಸಂಗ್ರಹ ಕೂಡ ತಗ್ಗಿದೆ. ಇದರಿಂದ ಹಣಕಾಸು ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದಿದೆ.
ಶುಲ್ಕ ತಗ್ಗಿಸಲು ಒತ್ತು: ಆಯಾ ವ್ಯವಸ್ಥೆಗಳನ್ನು ಆಧರಿಸಿ ಡೆಬಿಟ್ ಕಾರ್ಡ್ ಮೂಲಕ ಮಾಡುವ ವ್ಯವಹಾರಗಳಿಗೆ ವಿಧಿಸಲಾಗುವ ಶುಲ್ಕಗಳನ್ನು ಕಡಿಮೆ ಮಾಡುವ ಬಗ್ಗೆಯೂ ಆರ್‌ಬಿಐ ಚಿಂತಿ ಸಿದೆ. ಈ ಮೂಲಕ ಡಿಜಿಟಲ್ ಪಾವತಿ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡಲು ಮುಂದಾಗಿದೆ. ಪಾಯಿಂಟ್ ಆಫ್ ಸೇಲ್ಸ್ ಮಷೀನ್‌ಗಳ ಮೂಲಕ ಡೆಬಿಟ್ ಕಾರ್ಡ್ ವಹಿವಾಟು ಹೆಚ್ಚಾಗಿದೆ ಎನ್ನುವುದನ್ನು ಅದು ಒಪ್ಪಿಕೊಂಡಿದೆ.
ಷೇರುಪೇಟೆಗೆ ಪ್ರತಿಕೂಲ: ಹಣದುಬ್ಬರದಲ್ಲಿ ಏರಿಕೆಯ ಮುನ್ಸೂಚನೆ ಮತ್ತು ಬಡ್ಡಿ ದರದಲ್ಲಿ ಬದಲು ಮಾಡದೇ ಇರುವ ಆರ್‌ಬಿಐ ನಿರ್ಣಯ ಬಾಂಬೆ ಷೇರು ಪೇಟೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಸಂವೇದಿ ಸೂಚ್ಯಂಕ 205 ಅಂಕ ಇಳಿಕೆಯಾಗಿದೆ. ವಿಶೇಷವಾಗಿ ಬ್ಯಾಂಕಿಂಗ್ ಕ್ಷೇತ್ರಗಳ ಷೇರುಗಳು ಭಾರಿ ಪ್ರಮಾಣದಲ್ಲಿ ಮಾರಾಟವಾಗಿವೆ. ನಿಫ್ಟಿ ಸೂಚ್ಯಂಕ 74.15 ಅಂಕಗಳಷ್ಟು ಕುಸಿತ ಕಂಡು 10,044.10ರಲ್ಲಿ ಮುಕ್ತಾಯವಾಯಿತು.