Advertisement
ಇತ್ತೀಚಿನ ದಿನಗಳಲ್ಲಿ ಹಣದುಬ್ಬರ ನಿಯಂತ್ರಣ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್, ಪದೇಪದೆ ರೆಪೋ ದರವನ್ನು ಏರಿಸಿದೆ. ಹೀಗಾಗಿ ಬ್ಯಾಂಕುಗಳು ಅನಿವಾರ್ಯವಾಗಿ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸುತ್ತಿವೆ. ಆದ್ದರಿಂದ ರೈತರಿಗೆ ನೀಡುವ ಕೃಷಿ ಸಾಲದ ಮೇಲಿನ ಬಡ್ಡಿ ದರವನ್ನು ಏರಿಸದಿರಲಿ ಎಂಬ ಉದ್ದೇಶದಿಂದ ಕೇಂದ್ರ ಸರಕಾರ ಕೃಷಿ ಸಾಲದ ಮೇಲಿನ ಬಡ್ಡಿ ಸಹಾಯಧನ ಯೋಜನೆಯನ್ನು ಪುನರಾರಂಭ ಮಾಡಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಇದಕ್ಕಾಗಿ 34,856 ಕೋಟಿ ರೂ.ಗಳ ಹೆಚ್ಚುವರಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.
Related Articles
ಆರ್‌ಬಿಐ ಬಡ್ಡಿದರವನ್ನು ಇಳಿಕೆ ಮಾಡಿದ್ದರಿಂದಾಗಿ ಈ ಯೋಜನೆ ಯನ್ನು 2020ರಲ್ಲಿ ನಿಲ್ಲಿಸಲಾಗಿತ್ತು. ಈಗ ಜಾರಿಗೊಳಿಸಿರುವ ಸಹಾಯ ಧನ ಯೋಜನೆಯು 2022-23 ಮತ್ತು 2024-25ಕ್ಕೆ ಮಾತ್ರ ಅನ್ವಯ ವಾಗಲಿದೆ. ಇದರಂತೆ ರೈತರು ಶೇ.7ರ ಬಡ್ಡಿದರದಲ್ಲಿ 3 ಲಕ್ಷ ರೂ.ಗಳ ವರೆಗೆ ಅಲ್ಪಾವಧಿ ಸಾಲ ಪಡೆಯಬಹುದು. ಒಂದು ವೇಳೆ ಸರಿಯಾಗಿ ಕಂತು ಕಟ್ಟಿದರೆ ಅಂಥ ರೈತರಿಗೆ ಶೇ.4ರಷ್ಟು ಮಾತ್ರ ಬಡ್ಡಿ ವಿಧಿಸಲಾಗುತ್ತದೆ. ಸದ್ಯ ಇದಕ್ಕೆ ಬಡ್ಡಿ ಸಹಾಯಧನ ಯೋಜನೆ ಎಂಬ ಹೆಸರಿದ್ದು, ಮುಂದೆ “ಸುಧಾರಿತ ಬಡ್ಡಿ ಸಹಾಯಧನ ಯೋಜನೆ’ ಎಂದು ಕರೆಯಲಾಗುವುದು.
Advertisement
ಬ್ಯಾಂಕುಗಳಿಗೆ ಹೆಚ್ಚುವರಿ ನಿಧಿಬಡ್ಡಿ ಪ್ರೋತ್ಸಾಹ ಯೋಜನೆಯಂತೆ, ಕೇಂದ್ರ ಸರಕಾರ ಕೃಷಿ ಸಾಲ ನೀಡುವ ಬ್ಯಾಂಕುಗಳಿಗೆ ಹಣವನ್ನು ಒದಗಿಸಲಾಗಿದೆ. ಅದರಲ್ಲೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳಿಗೆ ಹೋಗಲಿದೆ. ಇವುಗಳಿಗೆ ಹಣದ ಹರಿವು ಹೆಚ್ಚಾಗುವುದರಿಂದ ರೈತರಿಗೆ ಹೆಚ್ಚೆಚ್ಚು ಸಾಲ ನೀಡಲು ಸಾಧ್ಯವಾಗುತ್ತದೆ. ಹಾಗೆಯೇ, ರೈತಾಪಿ ಚಟುವಟಿಕೆಗಳು ಹೆಚ್ಚಿ ಉದ್ಯೋಗ ಸೃಷ್ಟಿಯೂ ಮಾಡಿದಂತೆ ಆಗುತ್ತದೆ ಎಂದು ಸರಕಾರ ಹೇಳಿದೆ. ಹೈನುಗಾರಿಕೆ, ಪಶುಸಂಗೋಪನೆ, ಕೋಳಿ ಸಾಕಣೆ ಹಾಗೂ ಮೀನುಗಾರಿಕೆಗೂ ಇದರಿಂದ ಸಾಲ ನೀಡಬಹುದಾಗಿದೆ ಎಂದಿದೆ.