Advertisement

10 ರಿಂದ ಇಂಟರ್ಸಿಟಿ ರೈಲು ಸಂಚಾರ

04:26 PM Oct 06, 2018 | |

ಸಾಗರ: ಸಾಗರ, ಸಿದ್ದಾಪುರ, ಶಿರಸಿ ಸೇರಿದಂತೆ ಸಾಗರ ಉಪ ವಿಭಾಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿರುವ ಇಂಟರ್ಸಿಟಿ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಅ. 10ರಂದು ಇಂಟರ್ಸಿಟಿ ರೈಲು ತಾಳಗುಪ್ಪವರೆಗೆ ವಿಸ್ತರಿಸುವ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ಸಿಗಲಿದೆ.

Advertisement

ಬೆಂಗಳೂರಿನಿಂದ ಬಂದು ಶಿವಮೊಗ್ಗದಲ್ಲಿ ನಿಲ್ಲುತ್ತಿದ್ದ ಇಂಟರ್ಸಿಟಿ ರೈಲನ್ನು ತಾಳಗುಪ್ಪವರೆಗೆ ವಿಸ್ತರಿಸಬೇಕು ಎಂದು ಸ್ಥಳೀಯ ರೈಲ್ವೆ ಹೋರಾಟ ಸಮಿತಿ, ಕನ್ನಡಪರ ಸಂಘಟನೆಗಳು, ಬಳಕೆದಾರರ ವೇದಿಕೆ, ಸಾರ್ವಜನಿಕರು ಒತ್ತಾಯಿಸುತ್ತಾ ಬಂದಿದ್ದರು. ಒಂದು ಹಂತದಲ್ಲಿ ಶಿವಮೊಗ್ಗದ ಪ್ರಭಾವಿಗಳು ತಾಳಗುಪ್ಪವರೆಗೆ ಇಂಟರ್ಸಿಟಿ ರೈಲು ವಿಸ್ತರಿಸಲು ಅಡ್ಡಗಾಲು ಹಾಕುತ್ತಿದ್ದಾರೆ ಎನ್ನುವ ಆರೋಪ ಸಹ ಕೇಳಿ ಬಂದಿತ್ತು. 

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಾಗರಕ್ಕೆ ಬಂದಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಮನೋಜಕುಮಾರ್‌ ಸಿನ್ಹಾ ಅವರಿಗೆ ರೈಲ್ವೆ ಹೋರಾಟ ಸಮಿತಿ, ಬಿಜೆಪಿ ಘಟಕ ಮನವಿ ಸಲ್ಲಿಸಿ, ಇಂಟರ್ಸಿಟಿ ರೈಲನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಿತ್ತು. ಸಚಿವರು ಇದಕ್ಕೆ ಪೂರಕವಾಗಿ ಸ್ಪಂದಿಸಿ, ಮುಂದಿನ ಮೂರು ತಿಂಗಳಿನೊಳಗೆ ರೈಲು ವಿಸ್ತರಿಸುವ ಭರವಸೆ ನೀಡಿದ್ದರು. 

ಇದಕ್ಕೆ ಪೂರಕವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಹಾಲಿ ಸಾಗರ ಕ್ಷೇತ್ರದ ಶಾಸಕ ಎಚ್‌. ಹಾಲಪ್ಪ ಇಂಟರ್ಸಿಟಿ ರೈಲು ವಿಸ್ತರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಕೇಂದ್ರ ರೈಲ್ವೆ ಇಲಾಖೆ ಗುರುವಾರ ಬೆಂಗಳೂರು ಶಿವಮೊಗ್ಗ ಇಂಟರ್ಸಿಟಿ ರೈಲನ್ನು ವಿಸ್ತರಿಸುವ ಅಧಿಕೃತ ಆದೇಶ ಹೊರಡಿಸಿದ್ದು, ಎಲ್ಲರ ಹೋರಾಟಕ್ಕೆ ಸಂದ ಜಯವಾಗಿದೆ.

ಪ್ರಸ್ತುತ ಶಿವಮೊಗ್ಗ ಬೆಂಗಳೂರು ನಡುವಿನ ಇಂಟರ್ಸಿಟಿ ರೈಲು ಸಂಖ್ಯೆ 20651 ಮತ್ತು 20652 ತಾಳಗುಪ್ಪವರೆಗೆ ವಿಸ್ತರಿಸಲಿದೆ. ಈ ರೈಲು ಬೆಳಗ್ಗೆ 3.50ಕ್ಕೆ ತಾಳಗುಪ್ಪದಿಂದ ಹೊರಟು, 4.30ಕ್ಕೆ ಸಾಗರ ಬಿಟ್ಟು 11.35ಕ್ಕೆ ಬೆಂಗಳೂರು ತಲುಪಲಿದೆ. ಮಧ್ಯಾಹ್ನ 3ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 10-15ಕ್ಕೆ ತಾಳಗುಪ್ಪ ತಲುಪಲಿದೆ. ಬೆಂಗಳೂರು ಶಿವಮೊಗ್ಗ ನಡುವೆ ಸೂಪರ್‌ ಎಕ್ಸ್‌ಪ್ರೆಸ್‌ ಆಗಿ ಚಲಿಸುತ್ತಿದ್ದ ರೈಲು ಅ. 10ರ ನಂತರ ಬೆಂಗಳೂರು, ಶಿವಮೊಗ್ಗ ತಾಳಗುಪ್ಪ ನಡುವೆ ಸೂಪರ್‌ ಎಕ್ಸ್‌ಪ್ರೆಸ್‌ ರೈಲಾಗಿ ಚಲಿಸಲಿದ್ದು, ಆನಂದಪುರ ಮತ್ತು ಸಾಗರದಲ್ಲಿ ನಿಲುಗಡೆ ಹೊಂದಿರುತ್ತದೆ.

Advertisement

ಹಾಲಪ್ಪ ಅವರಿಂದ ಕೃತಜ್ಞತೆ: ಇಂಟರ್ಸಿಟಿ ರೈಲು ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಗುರುವಾರ ಶಾಸಕ ಹಾಲಪ್ಪ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಮಲೆನಾಡು ಜನರ ಬಹುಕಾಲದ ಬೇಡಿಕೆ ಈಡೇರಿಸಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಶಾಲು ಹೊದೆಸಿ ಸನ್ಮಾನಿಸುವ ಮೂಲಕ ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
 
ಹೋರಾಟ ಸಮಿತಿ ಅಭಿನಂದನೆ: ಬೆಂಗಳೂರು-ಶಿವಮೊಗ್ಗ ಇಂಟರ್ಸಿಟಿ ರೈಲನ್ನು ತಾಳಗುಪ್ಪವರೆಗೆ ವಿಸ್ತರಿಸಿರುವುದಕ್ಕೆ ರೈಲ್ವೆ ಹೋರಾಟ ಸಮಿತಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹಾಗೂ ಶಾಸಕ ಎಚ್‌. ಹಾಲಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದೆ. ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ಇಂಟರ್ಸಿಟಿ ರೈಲಿನ ಬೇಡಿಕೆಯನ್ನು ಮಾಜಿ ಮುಖ್ಯಮಂತ್ರಿಗಳು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಬಿ.ಎಸ್‌.ಯಡಿಯೂರಪ್ಪ ಅವರು ಈಡೇರಿಸಿದ್ದಾರೆ. ಇದಕ್ಕೆ ಕ್ಷೇತ್ರದ ಶಾಸಕ ಎಚ್‌.ಹಾಲಪ್ಪ ಸಾಥ್‌ ನೀಡಿದ್ದಾರೆ. ಇವರ ಪ್ರಯತ್ನದಿಂದ ಮಲೆನಾಡಿನ ಜನರು ಇಂಟರ್ಸಿಟಿ ರೈಲಿನಲ್ಲಿ ಓಡಾಡುವ ಕನಸು ಈಡೇರಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.

ಈ ಹೋರಾಟಕ್ಕೆ ಸದಾ ಬೆನ್ನೆಲುಬಾಗಿ ನಿಂತ ಆನಂದಪುರ ಮುರುಘಾಮಠದ ಡಾ|ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳ ಸಹಕಾರ ಅಮೂಲ್ಯವಾದದ್ದು, ಜೊತೆಗೆ ಸಾಗರದ ಪತ್ರಕರ್ತರು, ಬಳಕೆದಾರರ ವೇದಿಕೆ, ವಿವಿಧ ಕನ್ನಡಪರ ಸಂಘಟನೆಗಳು, ಜನಪ್ರತಿನಿ ಗಳು, ಸಾರ್ವಜನಿಕರು ಹೋರಾಟಕ್ಕೆ ಸದಾ ಬೆಂಬಲ ನೀಡಿದ್ದು, ಅವರಿಗೆ ಹೋರಾಟ ಸಮಿತಿ ಪರವಾಗಿ ಪ್ರಧಾನ ಕಾರ್ಯದರ್ಶಿ ವಿಲಿಯಂ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next