Advertisement

ಅಂತರಸಂತೆ ಬಳಿ ಪ್ರತ್ಯಕ್ಷವಾಗಿದ್ದ ಹೆಣ್ಣು ಹುಲಿ ಸೆರೆ 

12:11 PM Oct 11, 2017 | Team Udayavani |

ಎಚ್‌.ಡಿ.ಕೋಟೆ: ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ವನ್ಯಜೀವಿ ವಲಯಕ್ಕೆ ಸೇರಿದ ಅಂತರಸಂತೆ ಗ್ರಾಮದ ಸಮೀಪದ ನಾಗೇಗೌಡ ಅವರ ಜಮೀನಿನಲ್ಲಿ ಸೋಮವಾರ ಜನರಿಗೆ ಕಾಣಿಸಿಕೊಂಡು ಅಕ್ಕಪಕ್ಕದ ಗ್ರಾಮದ ಜನರಲ್ಲಿ ಭಯ ಮೂಡಿಸಿದ್ದ 8 ವರ್ಷದ ಹೆಣ್ಣು ಹುಲಿಯನ್ನು ಮಂಗಳವಾರ ಸಂಜೆ 5.30ರಲ್ಲಿ ಅಂತರಸಂತೆ ಗ್ರಾಮ ಸಮೀಪದ ಶನಿದೇವರ ದೇವಸ್ಥಾನದ ಬಳಿ ಸೇರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

Advertisement

ಹುಲಿ ಗ್ರಾಮದ ಜನರಿಗೆ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಸೋಮವಾರವೇ ಕೋಬಿಂಗ್‌ ನಡೆಸಿದ್ದ ಅರಣ್ಯ ಅಧಿಕಾರಿಗಳಿಗೆ ಹುಲಿ ಮತ್ತೆ ಕಾಣಿಸಿಕೊಂಡಿರಲಿಲ್ಲ, ಅದರೆ ಹೆಜ್ಜೆ ಗುರುತಿನಿಂದ ಹುಲಿ ಬಂದಿರುವುದು ಖಚಿತಪಟ್ಟಿದ್ದರಿಂದ ಮಂಗಳವಾರವು ಮೂರು ದಸರಾ ಆನೆಗಳ ಸಹಾಯದಿಂದ ಕಾರ್ಯಾಚರಣೆ ಪ್ರಾರಂಭಿಸಿದಾಗ ಮೊದಲು ರೈತ ಉದಯ್‌ ಅವರ ಜಮೀನಿನಲ್ಲಿ ಹುಲಿ ಪ್ರತ್ಯಕ್ಷವಾಯಿತು. ಕೂಡಲೇ ಆನೆ ಮೇಲೆ ಕೂತ ಆರವಳಿಕೆ ತಜ್ಞರು ಹುಲಿ ಕಡೆ ಆರವಳಿಕೆ ಚುಚ್ಚುಮದ್ದನ್ನು ಪೈರ್‌ ಮಾಡಿದರು.

ಸೆರೆ: ಚುಚ್ಚುಮದ್ದು ತಗಲಿದರೂ ಅಲ್ಲಿಂದ ಅರ್ಧ ಕಿ.ಮೀ ದೂರ ಕ್ರಮಿಸಿ ಜಯಣ್ಣ ಎಂಬುವರಿಗೆ ಸೇರಿದ ಜಮೀನಿನಲ್ಲಿ ಪ್ರಜ್ಞೆತಪ್ಪಿ ಕೆಳಕ್ಕೆ ಉರುಳಿತು, ನಂತರ ಹುಲಿಯನ್ನು ಬಲೆಯಿಂದ ಬಂಧನಕ್ಕೊಳಪಡಿಸಿ ಬೋನ್‌ ಹಾಕಿದ ಅರಣ್ಯಾಧಿಕಾರಿಗಳು ಅಂತರಸಂತೆ ವನ್ಯಜೀವಿ ವಲಯಕ್ಕೆ ಸೇರಿದ ಸುಂಕದ ಕಟ್ಟೆಗೆ ತೆಗೆದುಕೊಂಡು ಹೋದರು.
ಕಾರ್ಯಾಚರಣೆಯಲ್ಲಿ ದಸರಾ ಆನೆಗಳಾದ ಅರ್ಜುನ, ಕೃಷ್ಣ, ಅಭಿಮನ್ಯು ಬಳಸಿಕೊಳ್ಳಲಾಗಿತ್ತು. ಜೊತೆಗೆ ಚಲನವಲನ ತಿಳಿಯಲು ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.

ಹುಲಿ ಆರೋಗ್ಯ: ಹುಲಿಯು ನಿತ್ರಣಗೊಂಡಿರುವ ಕಾರಣ ತಿಂದಿದ್ದ (ಮಾಂಸ) ಆಹಾರವನ್ನು ಕೂಡ ವಾಂತಿ ಮಾಡಿಕೊಂಡಿದ್ದು, ಕಾರಣ ತಿಳಿದು ಬಂದಿಲ್ಲ ಎಂದು ಅರಣ್ಯಾಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದ್ದು, ಸಿಸಿಎಫ್ ಮಣಿಕಂಠನ್‌ ಮಾತ್ರ ಹುಲಿ ಆರೋಗ್ಯವಾಗಿದ್ದು ಸ್ವಲ್ಲ ಸಮಯ ಇರಿಸಿಕೊಂಡು ಅದನ್ನು ಸೂಕ್ಷ್ಮವಾಗಿ ಗಮನಿಸಿ ನಂತರ ಕಾಡಿಗೆ ಬಿಡಲಾಗುವುದು ಎಂದು ತಿಳಿಸಿದ್ದಾರೆ.

ಎಸಿಎಪ್‌ ಪೂವಯ್ಯ, ಆರ್‌ಎಫ್ಒಗಳಾದ ರುದ್ರೇಶ್‌, ವಿನಯ್‌, ಪಶುವೈದ್ಯರಾದ ಡಾ.ಸಂತೃಪ್ತ್, ಆರವಳಿಕೆ ತಜ್ಞ ಮುಜೀಬ್‌, ಸಿಬ್ಬಂದಿ ಕೃತಿಕಾ, ನಿಸಾರ್‌ ಹಾಗೂ ಎಸ್‌ಟಿಪಿಪಿಎಪ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next