Advertisement
ಸರ್ಕಾರಿ ನೌಕರರಿಗೆ ನಗದು ರಹಿತ ಶಸ್ತ್ರಚಿಕಿತ್ಸೆ: ಸರ್ಕಾರಿ ನೌಕರರು, ಅವರ ಅವಲಂಬಿತರಿಗೆ ಚಾಲ್ತಿಯಲ್ಲಿರುವ ಜ್ಯೋತಿ ಸಂಜೀವಿನಿ ಯೋಜನೆಯನ್ನು ಮಾರ್ಪಡಿಸಿ ಶಸ್ತ್ರ ಚಿಕಿತ್ಸಾ ವಿಧಾನ ಗಳಿಗೆ ನಗದುರಹಿತ ಚಿಕಿತ್ಸೆ ನೀಡಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ನಗದು ರಹಿತ ಚಿಕಿತ್ಸೆ ರಾಜ್ಯ ಸರ್ಕಾರಿ ನೌಕರರ ದೀರ್ಘಕಾಲದ ಬೇಡಿಕೆಯಾಗಿದ್ದು, ಈ ಯೋಜನೆಯಿಂದ 22.5 ಲಕ್ಷ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿ ತರು ಪ್ರಯೋಜನ ಪಡೆಯಲಿದ್ದು, ಅಂದಾಜು ವಾರ್ಷಿಕ ವೆಚ್ಚ 50 ಕೋಟಿ ರೂ. ಆಗಲಿದೆ.
Related Articles
Advertisement
ವನ್ಯಜೀವಿ ಸಂರಕ್ಷಣೆ: ಐದು ಕೋಟಿ ರೂ. ವೆಚ್ಚ ಮಾಡಿ ರಾಜ್ಯದಲ್ಲಿರುವ ಶೋಲಾ ಅರಣ್ಯಗಳನ್ನು ಸರ್ವೇಕ್ಷಣೆ ಮಾಡಲು ಸಿಎಂ ಬಿಎ ಸ್‌ವೈ ಮುಂದಾಗಿದ್ದಾರೆ. ಶಿವಮೊಗ್ಗ ಹೊರವಲಯ ದಲ್ಲಿರುವ ತಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿರುವ ಮಿನಿ ಮೃಗಾಲಯ ಉನ್ನತೀಕರಿಸಲು 5 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ರಾಮನಗರ ಜಿಲ್ಲೆಯ ರಣಹದ್ದುಧಾಮದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರವನ್ನು ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ಮೊದಲ ಕಡಲಧಾಮ: ರಾಜ್ಯದ ಮೊದಲ ಕಡಲಧಾಮವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರ್ಮಿಸಲಾಗುವುದು. ಜಿಲ್ಲೆ ಅನೇಕ ಸಮುದ್ರ ತೀರಗಳ ಪೈಕಿ ಯಾವುದಾದರೊಂದು ಸಮುದ್ರ ತೀರದಲ್ಲಿ 1 ಕೋಟಿ ರೂ.ಗಳ ಕಡಲಧಾಮ ಸ್ಥಾಪಿಸಲಾಗಲಿದೆ.
ಮಂಗಗಳ ಪುನರ್ವಸತಿ: ಮಲೆನಾಡಿನಲ್ಲಿ ಮಂಗಗಳ ಉಪಟಳದಿಂದ ಅಡಕೆ ಬೆಳೆ ರಕ್ಷಿಸಲು ಹಾಗೂ ಮಂಗನ ಕಾಯಿಲೆ ಅತೋಟಿ ನಿಟ್ಟಿನಲ್ಲಿ ಮಂಗಗಳ ಪುನರ್ವಸತಿಗೆ ರಾಜ್ಯ ಸರ್ಕಾರ ಮುಂದಾಗಿದೆ. 5ವರ್ಷಗಳಿಗೆ ಒಟ್ಟಾರೆ 6.25 ಕೋಟಿ ರೂ. ವೆಚ್ಚದಲ್ಲಿ ಪುನರ್ವಸತಿಗೆ ಯೋಜನೆ ರೂಪಿಸುತ್ತದೆ. 2020-21ನೇ ಸಾಲಿನಲ್ಲಿ 1.25 ಕೋಟಿ ರೂ. ಒದಗಿಸಲಾಗುತ್ತಿದೆ.
ಉದ್ಯೋಗ ಕೋಶ: ರಾಜ್ಯದಿಂದ ಉತ್ತೀರ್ಣರಾಗುವ ವೈದ್ಯಕೀಯ, ಶುಶ್ರೂಷಾ, ಅರೆ-ವೈದ್ಯಕೀಯ ಮತ್ತು ಫಾರ್ಮಸಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಒಂದು ಕೇಂದ್ರಿಕೃತ ಉದ್ಯೋಗ ಕೋಶ ತೆರೆಯಲು ಸರ್ಕಾರ ಉದ್ದೇಶಿಸಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಆರ್ಥಿಕ ನೆರವಿನೊಂದಿಗೆ ಒಂದು ಚರ್ಮಶಾಸ್ತ್ರ ಮತ್ತು ಸೌಂದರ್ಯವರ್ಧಕ ಶಾಸ್ತ್ರದ ಸಂಸ್ಥೆ ಮತ್ತು ಜಿರಿಯಾಟ್ರಿಕ್ಸ್ ಸಂಸ್ಥೆಗಳನ್ನು ಸರ್ಕಾರ ಸ್ಥಾಪಿಸಲಿದೆ.
ಮಠಗಳಿಗೆ ಆರ್ಥಿಕ ಸಹಕಾರ: ರಾಜ್ಯದಲ್ಲಿ ಶಾಂತಿ ನೆಲೆಸಲು ಹಾಗೂ ಸಾಮರಸ್ಯ ಕಾಪಾಡಲು ಮಠ ಮಾನ್ಯಗಳ ಕೂಡುಗೆ ಅಪಾರ. ವಿವಿಧ ಸಮುದಾಯಗಳ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದು ಇಂತಹ ಮಠಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡಲು ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಜತೆಗೆ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 5 ಕೋಟಿ ರೂ.ನೀಡಲು ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಮಂಡಿಸಿರುವ ಬಜೆಟ್ ಜನಪರ, ರೈತಪರ ಬಜೆಟ್ ಆಗಿದ್ದು, ಇದನ್ನು ಸ್ವಾಗತಿಸುತ್ತೇನೆ, ಬಜೆಟ್‌ನಲ್ಲಿ ಸೇರಿರುವ ಹಲವು ಯೋಜನೆಗಳು ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುತ್ತದೆ. -ಜೆ.ಸಿ ಮಾಧುಸ್ವಾಮಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಮಾನವ ಹಾಗೂ ಪ್ರಾಣಿ ಸಂಘರ್ಷದ ಕುರಿತು ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಮಳೆ ಹಾನಿ ಪರಿಹಾರಕ್ಕೆ ವಿಶೇಷ ಅನುದಾನದ ನಿರೀಕ್ಷೆಯಲ್ಲಿದ್ದೆವು. ಆದರೆ ಅದಕ್ಕೂ ಯಾವುದೇ ಅನುದಾನವಿಲ್ಲ. ಮಲೆನಾಡು ಜನರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
-ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ರಾಜ್ಯ ಬಜೆಟ್‌ನಲ್ಲಿ ಯಾವುದೇ ಜಿಲ್ಲೆ ಅಥವಾ ತಾಲೂಕುಗಳನ್ನು ಪ್ರಮುಖವಾಗಿ ಗುರಿಯಾಗಿಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಬಾರಿ ಅನುದಾನ ಬಿಡುಗಡೆ ಮಾಡಿಲ್ಲ. ಆದರೆ ಇಲಾಖಾವಾರು ಅನುದಾನ ಬಿಡುಗಡೆಮಾಡಿದ್ದಾರೆ.
-ನಾರಾಯಣಗೌಡ, ಪೌರಾಡಳಿತ ಸಚಿವ