“ನಡುವೆ ಅಂತರವಿರಲಿ’ ಎಂಬ ಚಿತ್ರವೊಂದು ಆರಂಭವಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇಂದು ತೆರೆಕಾಣುತ್ತಿದೆ. ರವಿನ್ ಕುಮಾರ್ ಈ ಚಿತ್ರದ ನಿರ್ದೇಶಕರು. ನಿರ್ದೇಶನದ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಪ್ರಖ್ಯಾತ್ ಎಂಬ ಹೊಸ ಪ್ರತಿಭೆಗೆ ಐಶಾನಿ ಶೆಟ್ಟಿ ಜೋಡಿ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ರವಿನ್, “ಇದು ಹದಿಹರೆಯದ ಲವ್‌ಸ್ಟೋರಿ. ಹರೆಯದಲ್ಲಿ ಪ್ರೀತಿಗೆ ಬಿದ್ದರೆ ಮುಂದೆ ಏನಾಗುತ್ತದೆ ಎಂಬ ಅಂಶವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ಸಾಕಷ್ಟು ನೈಜ ಘಟನೆಗಳು ಈ ಚಿತ್ರಕ್ಕೆ ಪ್ರೇರಣೆ. ಈಗಾಗಲೇ ಚಿತ್ರದ ಹಾಡು ಹಾಗೂ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚೆಗೆ ಒಂದಷ್ಟು ಮಂದಿ ಕಾಮನ್ ಆಡಿಯನ್ಸ್‌ಗೆ ಸಿನಿಮಾ ತೋರಿಸಿದೆ. ಅವರು ಚಿತ್ರ ನೋಡಿ ಖುಷಿಪಟ್ಟರು. ಇಲ್ಲಿ ಯುವ ಜೋಡಿಗಳ ಜೊತೆ ಪಾಲಕರಿಗೂ ಒಂದು ಸಂದೇಶವಿದೆ’ ಎಂದರು. ಇನ್ನು ಚಿತ್ರಕ್ಕೆ ಪ್ರಖ್ಯಾತ್ ಆಯ್ಕೆಯಾಗಿದ್ದು, ಆರಂಭದಲ್ಲಿ ಎಡವಿದ್ದು, ನಂತರ ಸುಧಾರಿಸಿಕೊಂಡ ಬಗ್ಗೆ ಹೇಳಿಕೊಂಡರು. ನಾಯಕ ಪ್ರಖ್ಯಾತ್‌ಗೆ ಆರಂಭದಲ್ಲಿ ಕಷ್ಟವಾಯಿತಂತೆ. ಆ ನಂತರ ಎಲ್ಲರ ಸಹಕಾರದಿಂದ ಚೆನ್ನಾಗಿ ನಟಿಸಿದರಂತೆ. ಪ್ರತಿ ದಿನ ನಿರ್ದೇಶಕರಿಗೆ ನಗುಮೊಗದ ಸೆಲ್ಫಿ ಕಳುಹಿಸಬೇಕಿತ್ತಂತೆ. ಈ ಮೂಲಕ ಪಾತ್ರಕ್ಕೆ ತಯಾರು ಮಾಡುತ್ತಿದ್ದರಂತೆ. ನಾಯಕಿ ಐಶಾನಿ ಶೆಟ್ಟಿ ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ ಚಿತ್ರದ ಕಥೆ ಹಾಗೂ ಪಾತ್ರವಂತೆ. ತುಂಬಾ ಭಿನ್ನವಾದ ಪಾತ್ರ ಸಿಕ್ಕಿದ್ದರಿಂದ ಒಪ್ಪಿಕೊಂಡಿದ್ದಾಗಿ ಹೇಳಿಕೊಂಡರು. ಚಿತ್ರದಲ್ಲಿ ನಿರ್ಮಾಪಕ ಉದಯ್ ಮೆಹ್ತಾ ಕೂಡಾ ನಟಿಸಿದ್ದಾರೆ.