Advertisement

ಪೊಲೀಸರ ಅಂತರ್‌ ಜಿಲ್ಲಾ ವರ್ಗಾವಣೆ ಶೀಘ್ರ: ಸಚಿವ ಡಾ| ಜಿ. ಪರಮೇಶ್ವರ್‌

12:17 AM Jun 10, 2024 | Team Udayavani |

ಬೆಂಗಳೂರು: ಪೊಲೀಸರ ಅಂತರ್‌ಜಿಲ್ಲಾ ವರ್ಗಾವಣೆಗೆ ಚಾಲನೆ ನೀಡಲಾಗುವುದು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ತಿಳಿಸಿದರು.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಕಳೆದೆರಡು ತಿಂಗಳು ಸರಕಾರದ ಯಾವುದೇ ರೀತಿಯ ಕೆಲಸ, ಕಾರ್ಯಗಳು ಸಾಧ್ಯವಾಗಿಲ್ಲ. ಈಗ ಪೊಲೀಸರ ಅಂತರ್‌ಜಿಲ್ಲಾ ವರ್ಗಾವಣೆಗೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.

ಸಚಿವ ಸಂಪುಟ, ಕೋರ್‌ ಕಮಿಟಿ ಸಭೆ
ಸರಕಾರಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಹಂಚಿಕೊಳ್ಳಲು ಸಚಿವ ಸಂಪುಟ ಸಭೆ ಕರೆಯಲಾಗಿದೆ. ಪಕ್ಷಕ್ಕೆ ಸಂಬಂಧಪಟ್ಟ ತೀರ್ಮಾನಗಳನ್ನು ಕೈಗೊಳ್ಳಲು ಕೋರ್‌ಕಮಿಟಿ ಸಭೆ ಮಾಡಬಹುದು. ಇದಕ್ಕೆ ಅವಕಾಶಗಳನ್ನು ಪಕ್ಷದ ಅಧ್ಯಕ್ಷರು ಕೊಡಬೇಕಾಗುತ್ತದೆ. ಸಂದರ್ಭ ಬಂದಾಗ ಅವರು ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನಮ್ಮಲ್ಲಿ ಯಾವುದೇ ಒಳ ಜಗಳಗಳಿಲ್ಲ
ಕಾಂಗ್ರೆಸ್‌ನಲ್ಲಿ ಹಿರಿಯರನ್ನು ಪರಿಗಣಿಸುತ್ತಿಲ್ಲ ಎಂಬ ಆರೋಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಆ ರೀತಿ ಏನಿಲ್ಲ. ಸಂದರ್ಭಾನುಸಾರ ಅಂತಹ ಮಾತುಗಳನ್ನು ಹೇಳಿರುತ್ತೇವೆ. ನಮ್ಮಲ್ಲಿ ಒಳಜಗಳಗಳು ಆಗಿಲ್ಲ. ತುಮಕೂರಿನ ಶಾಸಕ ಸುರೇಶ್‌ ಗೌಡ ನಮ್ಮ ಪಕ್ಷದಲ್ಲಿನ ಒಳಜಗಳವನ್ನು ಎಲ್ಲಿ ನೋಡಿದ್ದಾರೋ? ಅದು ಅವರಿಗೇ ಗೊತ್ತು. ಯಾವುದಾದರೂ ವಿಚಾರಗಳು ಬಂದಾಗ ಒಬ್ಬಿಬ್ಬರು ಅಭಿಪ್ರಾಯಗಳನ್ನು ಹಂಚಿಕೊಂಡಿರಬಹುದು. ಅಂತಹ ಸಂದರ್ಭದಲ್ಲಿ ಬಿಟ್ಟರೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಮ್ಮ ಪಕ್ಷದಲ್ಲಿ ಒಳ ಜಗಳಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಸೋಲಿನ ಆತ್ಮಾವಲೋಕನ ಅಗತ್ಯ: ಡಾ| ಪರಮೇಶ್ವರ್‌
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 17 ಜಿಲ್ಲೆಗಳಲ್ಲಿ ಸೋತಿದ್ದೇವೆ. ಸೋಲಿನ ಆತ್ಮಾವಲೋಕನದ ಆವಶ್ಯಕತೆ ಇದೆ ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಜಿಲ್ಲೆ ಸೇರಿದಂತೆ 17 ಜಿಲ್ಲೆಗಳಲ್ಲಿ ಸೋತಿದ್ದೇವೆ. ಈ ಬಗ್ಗೆ ಪರಿಶೀಲನೆ ಮಾಡುವ, ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಇದನ್ನೇ ರಾಹುಲ್‌ ಗಾಂಧಿ ಹೇಳಿದ್ದಾರೆ. ನಾವೆಲ್ಲ ಅದನ್ನು ಒಪ್ಪುತ್ತೇವೆ. ಮುಂದೆ ನಮಗೆ ಏನು ಸಲಹೆ ಮಾಡುತ್ತಾರೋ ಅದನ್ನು ಪಾಲನೆ ಮಾಡುವ ಪದ್ಧತಿ ನಮ್ಮ ಪಕ್ಷದಲ್ಲಿದೆ ಎಂದು ಹೇಳಿದರು.

Advertisement

ಹೇಳಿದ್ದಕ್ಕೆಲ್ಲ ಓಕೆ ಅನ್ನೋದಿಲ್ಲ
ವಾಲ್ಮೀಕಿ ನಿಗಮದಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ರಾಜೀನಾಮೆ ನೀಡಬೇಕು ಎಂದು ಬಿಜೆಪಿಯವರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರು (ಬಿಜೆಪಿ) ಹೇಳಿದ್ದಕ್ಕೆಲ್ಲ “ಓಕೆ’ ಅನ್ನೋದಕ್ಕೆ ಆಗುವುದಿಲ್ಲ. ತನಿಖೆಯನ್ನು ಪ್ರಾರಂಭ ಮಾಡಿದ್ದೇವೆ. ಬ್ಯಾಂಕ್‌ನಲ್ಲಿ ವಂಚನೆ ಆಗಿದೆ ಅಂತ ಸಿಬಿಐನವರು ತನಿಖೆ ನಡೆಸುತ್ತಿದ್ದಾರೆ. ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ಎಸ್‌ಐಟಿಗೆ ಸೂಚಿಸಿದ್ದೇವೆ. ತನಿಖೆ ವಿಚಾರದಲ್ಲಿ ಅಧಿಕಾರಿಗಳಿಗೆ ಒತ್ತಾಯ ಮಾಡಲು ಆಗುವುದಿಲ್ಲ. ಅವರ ತನಿಖೆಗೆ ಸಮಯ ಕೊಡಬೇಕಾಗುತ್ತದೆ. ಏನೆಲ್ಲ ಹೇಳಿಕೆಗಳು ಬರುತ್ತವೆ ಪರಿಶೀಲಿಸುತ್ತಾರೆ. ಸಿಬಿಐನವರು ಅಧಿಕೃತವಾಗಿ ಯಾವುದೇ ಪತ್ರ ಬರೆದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next