ಉಡುಪಿ: ಮಂಗಳೂರು ವಿ.ವಿ. ಜಿ.ಪಂ., ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ, ತೆಂಕನಿಡಿಯೂರು ಸರಕಾರಿ ಕಾಲೇಜು ಮತ್ತು ಲಯನ್ಸ್ ಕ್ಲಬ್ ಉಡುಪಿ ಅಮೃತ್ ಸಹಯೋಗದಲ್ಲಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಜರಗಿದ ಮಂಗಳೂರು ವಿವಿ ಅಂತರ್ ಕಾಲೇಜು ಆ್ಯತ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ತಂಡ ಸತತ 21ನೇ ಸಲ ಚಾಂಪಿಯನ್ ಆಗಿದೆ.
ಆಳ್ವಾಸ್ ಕಾಲೇಜಿನ ಪುರುಷರ ತಂಡ 259 ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿದ್ದು, ಉಜಿರೆ ಎಸ್‌ಡಿಎಂ ಕಾಲೇಜು ದ್ವಿತೀಯ, ಪುತ್ತೂರು ವಿವೇಕಾನಂದ ಕಾಲೇಜು ತೃತೀಯ ಸ್ಥಾನ ಪಡೆದಿದೆ.
ಆಳ್ವಾಸ್ ಕಾಲೇಜಿನ ಮಹಿಳಾ ತಂಡ 247 ಅಂಕಗಳೊಂದಿಗೆ ಪ್ರಥಮ ಸ್ಥಾನಿಯಾಗಿದೆ. ಅಜ್ಜರಕಾಡು ಡಾ| ಜಿ. ಶಂಕರ್ ಸರಕಾರಿ ಮಹಿಳಾ ಕಾಲೇಜು ದ್ವಿತೀಯ, ವಾಮನಪದವು ಜಿಎಫ್ಜಿಸಿ ತೃತೀಯ ಸ್ಥಾನ ಪಡೆಯಿತು. ಓವರ್‌ಆಲ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಕಾಲೇಜು ಪ್ರಥಮ, ಉಜಿರೆ ಎಸ್‌ಡಿಎಂ ದ್ವಿತೀಯ, ವಾಮನ ಪದವು ಜಿಎಫ್ಜಿಸಿ ತೃತೀಯ ಸ್ಥಾನ ಪಡೆದುಕೊಂಡಿತು. ಆಳ್ವಾಸ್ ಕಾಲೇಜಿನ ಸನೀಶ್ ಪಿ. ಎಸ್., ಅಂಜಲಿ ಉತ್ತಮ ಆ್ಯತ್ಲೀಟ್ ಪ್ರಶಸ್ತಿ ಪಡೆದರು.
ಪದಕ ಪಡೆದ ಪುರುಷ ಕ್ರೀಡಾಪಟು ಗಳು ತಮಿಳು ನಾಡಿನಲ್ಲಿ, ಮಹಿಳಾ ಕ್ರೀಡಾಳುಗಳು ಭುವನೇಶ್ವರದಲ್ಲಿ ನಡೆಯಲಿರುವ ಅಂತರ ವಿ.ವಿ. ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾಜಿ ಶಾಸಕ ರಘುಪತಿ ಭಟ್, ನಿರೂಪಮಾ ಪ್ರಸಾದ್ ಶೆಟ್ಟಿ, ಶೇಷಪ್ಪ ಗೌಡ, ಉದಯ ಗಾಂವ್ಕರ್, ಡಾ| ಜೆರಾಲ್ಡ್ ಸಂತೋಷ್ ಡಿ’ಸೋಜಾ, ಭಾರತಿ ಹರೀಶ್ ವಿಜೇತರಿಗೆ ಪ್ರಶಸ್ತಿ ವಿತರಿಸಿ ದರು. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರವೀಣ್ ನಿರೂಪಿಸಿದರು.