Advertisement

ಉದ್ದೇಶಪೂರ್ವಕ ಸುಸ್ಥಿದಾರರಿಗೆ ರಕ್ಷಣೆ ಇಲ್ಲ

11:51 AM Jul 29, 2017 | Team Udayavani |

ಬೆಂಗಳೂರು: ಉದ್ದೇಶಪೂರ್ವಕ ಸುಸ್ಥಿದಾರರು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಂತವರ ಬಗ್ಗೆ ಸರ್ಕಾರಗಳು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದ್ದು, ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

Advertisement

ಅಸೋಚಾಮ್‌ ಸಂಸ್ಥೆಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಆರ್ಥಿಕ ದಿವಾಳಿತನದ ನೀತಿ’ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, “ಅನೇಕ ಕಂಪನಿಗಳು ಉದ್ದೇಶಪೂರ್ವಕವಾಗಿ ಆರ್ಥಿಕ ನಷ್ಟವನ್ನು ತೋರುವ ಪರಿಪಾಠವನ್ನು ಬೆಳೆಸಿಕೊಳ್ಳುತ್ತಿವೆ. ಈ ಬಗ್ಗೆ ಸರ್ಕಾರಗಳು ಎಚ್ಚರ ವಹಿಸುವ ಅಗತ್ಯವಿದೆ. ಹಾಗೆಯೇ ಕೇಂದ್ರ ಸರ್ಕಾರ ಹೊಸದಾಗಿ ರೂಪಿಸಿರುವ ದಿವಾಳಿತನ ನೀತಿಯ ಪರಿಣಾಮಗಳ ಬಗ್ಗೆ ಅವಲೋಕನ ನಡೆಯಬೇಕಿದೆ’ ಎಂದು ತಿಳಿದರು.

ಆರ್ಥಿಕ ದಿವಾಳಿತನದ ಬಗ್ಗೆ ವಿಧಾನಮಂಡಲದ ಕಲಾಪದ ವೇಳೆ ಸಾಕಷ್ಟು ಚರ್ಚೆ ನಡೆಯುತ್ತದೆ. ಸಾಲ ಮನ್ನಾ ವಿಚಾರ ಬಂದಾಗ ಸಾಲ ಮರುಪಾವತಿ ಹಾಗೂ ಕೈಗಾರಿಕೆಗಳಿಗೆ ಮಾತ್ರ ಸಾಲ ಮನ್ನಾ ಮಾಡಿ ರೈತರ ಸಾಲ ಮನ್ನಾ ಮಾಡುವುದಿಲ್ಲ ಎಂದು ಆರೋಪಗಳಿವೆ. ಈ ಕುರಿತು ಸಾಕಷ್ಟು ಚರ್ಚೆ ನಡೆಯಬೇಕಿದ್ದು, ಈ ನಿಟ್ಟಿನಲ್ಲಿ ಸರ್ಕಾರಗಳ ಮುಂದಿರುವ ಅವಕಾಶಗಳ ಬಗ್ಗೆಯೂ ಗಂಭೀರ ಚಿಂತನೆ ನಡೆಯಬೇಕು ಎಂದು ಹೇಳಿದರು.

ಬಳ್ಳಾರಿಯ ಗಣಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಹಲವು ಕಂಪನಿಗಳು ಇಂತಹ ಪ್ರವೃತ್ತಿಗಳಿಂದ ಪ್ರಭಾವಿತವಾಗಿದ್ದು, ಈ ಕುರಿತು ಅನೇಕ ಪ್ರಕರಣಗಳಿವೆ. ರಾಜ್ಯದ ಗಣಿ ಉದ್ಯಮ ಹಗರಣಗಳ ಸಂಬಂಧ ವಿಶೇಷ ತನಿಖಾ ದಳ ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಕೆಲ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಹೈಕೋರ್ಟ್‌ ತೀರ್ಪಿನಿಂದ ನಿರಾಳಗೊಂಡಿದ್ದ ಪ್ರಕರಣಗಳು ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿವೆ.

ರಾಜ್ಯ ಸರ್ಕಾರ ಈಗಾಗಲೇ ಬೆಂಗಳೂರು, ಬಳ್ಳಾರಿಯಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಿದ್ದು, ಜಿಲ್ಲಾ ನ್ಯಾಯಾಲಯಗಳು ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಆದ್ಯತೆ ನೀಡಿವೆ. ಪ್ರಸ್ತುತ ಕೇಂದ್ರದ ಹೊಸ ನೀತಿ ಅನ್ವಯ ಸುಪ್ರೀಂ ಕೋರ್ಟ್‌ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ ಎಂದು ತಿಳಿಸಿದರು.

Advertisement

ವರ್ಷದಿಂದ ವರ್ಷಕ್ಕೆ ಅನುತ್ಪಾದಕ ಸಾಲ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹಾಗಾಗಿ ಹೊಸ ನೀತಿಯಲ್ಲಿ ಏನೆಲ್ಲಾ ಅಂಶಗಳು ಅಡಕವಾಗಿವೆ ಎಂಬ ಬಗ್ಗೆ ಮಾಹಿತಿ ಪಡೆಯಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಆದಿತ್ಯ ಸೋಂಧಿ, “ನ್ಯಾಯಾಲಯಗಳಲ್ಲಿ ಮೂಲಸೌಕರ್ಯದ ಕೊರತೆ ಜತೆಗೆ ನ್ಯಾಯಾಧೀಶರ ಕೊರತೆಯಿಂದಾಗಿ ಆರ್ಥಿಕ ದಿವಾಳಿತನ ಪ್ರಕರಣಗಳ ಇತ್ಯರ್ಥಕ್ಕೆ ದೀರ್ಘ‌ಕಾಲ ಹಿಡಿಯುತ್ತದೆ. ಇದರಿಂದ ತ್ವರಿತವಾಗಿ ನ್ಯಾಯ ಇತ್ಯರ್ಥ ಸಂದರ್ಭದಲ್ಲಿ ಅನೇಕ ಪ್ರಕರಣಗಳಲ್ಲಿ ತಪ್ಪಿತಸ್ತರು ಪಾರಾಗುವ ಅಪಾಯವಿರುತ್ತದೆ’ ಎಂದು ತಿಳಿಸಿದರು.

ಇನ್‌ಸಾಲ್ವೆನ್ಸಿ ಅಂಡ್‌ ಬ್ಯಾಂಕ್ಟ್ರಪ್ಸಿ ಬೋರ್ಡ್‌ ಆಫ್ ಇಂಡಿಯಾ ಅಧ್ಯಕ್ಷ ಡಾ.ಎಂ.ಎಸ್‌.ಸಾಹು, “ದೇಶದಲ್ಲಿ ಉದ್ಯಮ ಆರಂಭಿಸಲು, ಮುಂದುವರಿಸಲು ಹಾಗೂ ಸ್ಥಗಿತಗೊಳಿಸಲು ಸ್ವಾತಂತ್ರ್ಯವಿದೆ. ಆದರೆ ಕೆಲವು ಬಾರಿ ಅಸಮರ್ಥತೆ ಕಾರಣಕ್ಕೆ ಕಂಪನಿಗಳು ನಷ್ಟಕ್ಕೆ ಸಿಲುಕಬಹುದು. ಆದರೆ ಪರಿಸ್ಥಿತಿಯ ಲಾಭ ಪಡೆಯಲು ಉದ್ದೇಶಪೂರ್ವಕವಾಗಿ ಆರ್ಥಿಕ ನಷ್ಟ ತೋರಿಸುವುದು ಅಪಾಯಕಾರಿ ಎಂದು ವಿಶ್ಲೇಷಿಸಿದರು.

ಅಸೋಚಾಮ್‌ ಕರ್ನಾಟಕ ಘಟಕದ ಅಧ್ಯಕ್ಷ ಆರ್‌.ಶಿವಕುಮಾರ್‌, “ರಾಜ್ಯದ ಗಣಿ ಉದ್ಯಮದಲ್ಲಿ ತೊಡಗಿಸಿಕೊಂಡ ಕಂಪನಿಗಳಲ್ಲಿ ಆರ್ಥಿಕ ಪರಿಸ್ಥಿತಿ ಹಳಿತಪ್ಪಿ ಕೆಲ ಕಂಪನಿಗಳು ಸುಸ್ಥಿದಾರರಾಗಿರಬಹುದು. ಆದರೆ ಕೆಲ ಕಂಪನಿಗಳು ಉದ್ದೇಶಪೂರ್ವಕ ಸುಸ್ಥಿದಾರರಾಗಿದ್ದರೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ತಿಳಿಸಬೇಕು’ ಎಂದು ಹೇಳಿದರು. ಅಸೋಚಾಮ್‌ನ ಪ್ರಧಾನ ಕಾರ್ಯದರ್ಶಿ ಡಿ.ಎಸ್‌.ರಾವತ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next