ಬೆಂಗಳೂರು:‘ಕೊಲೆ ಮಾಡಲೆಂದೇ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಇರಿಯಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವನಾಥ್ ಶೆಟ್ಟಿ ಅವರನ್ನು ಇರಿದು ಹತ್ಯೆಗೆ ಯತ್ನಿಸಿದ ವಿಚಾರ ತಿಳಿದ ತಕ್ಷಣವೇ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಮಲ್ಯ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆಸ್ಪತ್ರೆಯಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು, ವೈದ್ಯರ ಬಳಿ ಮಾತುಕತೆ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ‘ಮೆಲ್ನೋಟಕ್ಕೆ ವಿಶ್ವನಾಥ್ ಶೆಟ್ಟಿ ಅವರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ’ ಎಂದರು.
‘ಆರೋಪಿ ತೇಜ್‌ರಾಜ್ ಶರ್ಮಾ ಎನ್ನುವವ ಯಾವುದೋ ಟೆಂಡರ್ ಪಡೆಯಲು ಅರ್ಜಿ ಹಾಕಿದ್ದು , ಸಿಗದೆ ಹೋದಾಗ ಅಧಿಕಾರಿಯಿಂದ ಮೋಸವಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದ ಆದರೆ ವಿಚಾರಣೆ ಮುಗಿದಿದೆ ಎಂದು ಎಂಡಾರ್ಸ್‌ಮೆಂಟ್ ನೀಡಿದ್ದಾರೆ. ಇದರಿಂದ ಸಿಟ್ಟಿಗೆದ್ದು ಲೋಕಾಯುಕ್ತರಿಗೆ ಇರಿದಿದ್ದಾನೆ. ಕೊಲೆ ಮಾಡಲೆಂದೇ ಇರಿದಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ’ ಎಂದರು.
‘ಭದ್ರತಾ ವೈಫಲ್ಯವಾಗಿದೆಯೋ ಎನ್ನುವ ಕುರಿತು ತನಿಖೆ ನಡೆಸಲು ಸೂಚಿಸಿದ್ದೇನೆ. ಸಾಮನ್ಯವಾಗಿ ಭೇಟಿ ಮಾಡಲು ಬಂದವರಿಗೆ ಚೀಟಿ ಕೋಡುತ್ತಾರೆ. ಕರೆದ ತಕ್ಷಣ ಒಳಗೆ ಹೋಗಿ ಚೂರಿ ಇರಿದಿದ್ದಾನೆ. ಗನ್ ಮ್ಯಾನ್ ಆ ವೇಳೆ ಹೊರಗೆ ಇದ್ದರು. ನಮ್ಮನ್ನೂ ಭೇಟಿ ಮಾಡಲು ಹಲವರು ಬರುತ್ತಾರೆ, ಆಯುಧ ತೆಗೆದುಕೊಂಡು ಬಂದರೆ ಗೊತ್ತಾಗುತ್ತದಾ’ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಚಿವರಾದ ಕೆ.ಜೆ.ಜಾರ್ಜ್ ಅವರೂ ಆಗಮಿಸಿದ್ದರು.
ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ.