Advertisement

ಬಾಕಿ ತಾಲೂಕು ಸಹ ಬರಪೀಡಿತ ಪಟ್ಟಿಗೆ ಸೇರಿಸಲು ಯತ್ನ

02:23 PM Oct 25, 2018 | Team Udayavani |

ದಾವಣಗೆರೆ: ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಹೊನ್ನಾಳಿ, ನ್ಯಾಮತಿ ಮತ್ತು ಚನ್ನಗಿರಿ ತಾಲೂಕುಗಳನ್ನೂ ಬರಪೀಡಿತ ಪಟ್ಟಿಗೆ ಸೇರ್ಪಡೆಗೆ ಪ್ರಯತ್ನಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌ (ವಾಸು) ತಿಳಿಸಿದ್ದಾರೆ.

Advertisement

ಬುಧವಾರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ದಾವಣಗೆರೆ, ಹರಿಹರ, ಹರಪನಹಳ್ಳಿ, ಜಗಳೂರು ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಲಾಗಿದೆ. ಇನ್ನುಳಿದ ತಾಲೂಕುಗಳಲ್ಲೂ ಬರ ಇದೆ. ಅವುಗಳನ್ನು ಬರಪೀಡಿತ ತಾಲೂಕು ಘೋಷಣೆಗೆ ಪ್ರಯತ್ನ
ನಡೆಸುವುದಾಗಿ ತಿಳಿಸಿದರು. 

ಹರಪನಹಳ್ಳಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ತಿಂಗಳಿಗೆ 18 ಸಾವಿರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಅಗತ್ಯ ಇರುವ ಕಡೆ ಕೊಳವೆ ಬಾವಿ ಕೊರೆಸುವ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈಚೆಗೆ ದಾವಣಗೆರೆಯಲ್ಲಿ ಸುರಿದ ಭಾರೀ ಮಳೆಗೆ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಇತರೆ ಕಡೆಯಲ್ಲಿ ನೀರು ನುಗ್ಗಿರುವ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. 

ರಾಜ್ಯದ ಎಲ್ಲಾ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಸಣ್ಣ ಕೈಗಾರಿಕೆಗಳಿಗೆ ನಿವೇಶನ ಇತರೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿ, ಕೂಲಂಕುಷವಾಗಿ ಚರ್ಚಿಸಲಾಗಿದೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಯ ಜೊತೆಗೆ ಯುವ ಜನಾಂಗಕ್ಕೆ ಉದ್ಯೋಗ ಒದಗಿಸಲು ಅನುಕೂಲವಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಣ್ಣ ಕೈಗಾರಿಕೆಗಳ ಪ್ರಾರಂಭಕ್ಕೆ ಮುಂದೆ ಬರುವಂತಹವರಿಗೆ ಆದ್ಯತೆ ಕೊಡಲಾಗುತ್ತಿದೆ. ಎಲ್ಲ ಪರಿಶೀಲನೆ ನಂತರವೇ ಸೇಲ್‌ ಡೀಡ್‌ ಗೆ ಸೂಚಿಸಲಾಗಿದೆ. ಕೈಗಾರಿಕೆಗೆ ನೀಡಿರುವ ಜಾಗದಲ್ಲಿ ಪೂರ್ಣ ಪ್ರಮಾಣದ ಕೈಗಾರಿಕೆ ಇಲ್ಲದಿದ್ದಲ್ಲಿ ನಿವೇಶನ ವಾಪಸ್‌ಗೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Advertisement

ದಾವಣಗೆರೆಯ ಮಂಡಕ್ಕಿ ಭಟ್ಟಿ ಪ್ರದೇಶದಲ್ಲಿ ಇರುವಂತಹ ಸಮಸ್ಯೆಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿ ವಿಳಂಬ ಆಗುತ್ತಿರುವುದು ಗಮನಕ್ಕೆ ಬಂದಿದೆ. ಸಂಬಂಧಿತರೊಂದಿಗೆ ಚರ್ಚೆ ನಡೆಸಿ,
ಚುರುಕು ಮುಟ್ಟಿಸಲಾಗುವುದು ಎಂದು ತಿಳಿಸಿದರು.

ನಾನು ದಾವಣಗೆರೆಗೆ ಬರಲೇ ಬಾರದು ಎಂದೇನಿಲ್ಲ. ಕೆಲಸದ ಒತ್ತಡದ ಕಾರಣದಿಂದ ಬರಲಾಗುತ್ತಿಲ್ಲ. ಆದರೂ, ದಾವಣಗೆರೆ ಜಿಲ್ಲೆಯಲ್ಲಿನ ಸಮಸ್ಯೆಗಳು, ಆಗಿಹೋಗುಗಳ ಬಗ್ಗೆ ಎಲ್ಲಾ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಲೇ ಇರುತ್ತೇನೆ. ನಾನು ಸ್ಥಳೀಯ ಶಾಸಕನಲ್ಲವಾದರೂ ಇಲ್ಲಿ ಆಗಬೇಕಾಗಿರುವ ಎಲ್ಲಾ ಕೆಲಸಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತಿರುತ್ತೇನೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಗಮನ ನೀಡಲಾಗುವುದು ಎಂದು ತಿಳಿಸಿದರು.

ನೀವು ದಾವಣಗೆರೆಗೆ ಅತಿಥಿಯಂತೆ ಬಂದು ಹೋಗುತ್ತೀರಾ ಎಂಬ ಪ್ರಶ್ನೆಗೆ, ನೀವೇ ಮಾಧ್ಯಮದವರು ಒಂದು ಮನೆ ಕೊಡಿಸಿ. ಇಲ್ಲಿಯೇ ಇದ್ದು ಬಿಡುತ್ತೇನೆ. ನಾನು 30 ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ಎಲ್ಲೆಲ್ಲಿ ಏನೇನೂ ಕೆಲಸ ಆಗುತ್ತಿವೆ. ಏನು ಆಗಬೇಕು ಎಂಬುದರ ಬಗ್ಗೆ ಸದಾ ಗಮನ ನೀಡುತ್ತಲೇ ಇರುತ್ತೇನೆ. ನನ್ನ ಕ್ಷೇತ್ರದ ಕೆಲಸಗಳ ಕಾರಣಕ್ಕೆ ಇಲ್ಲಿಗೆ ಬರಲಾಗಲಿಲ್ಲ ಎಂದು ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next