ಚಿಕ್ಕೋಡಿ: ಅಭಿವೃದ್ಧಿ ಹಿತದೃಷ್ಠಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ನೂತನ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡುವುದು ಅವಶ್ಯಕವಾಗಿದೆ. ಈಗಾಗಲೇ ಜಿಲ್ಲಾ ಹೋರಾಟ ಸಮಿತಿ ಕಳೆದ 30 ವರ್ಷಗಳಿಂದ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಹೋರಾಟ ಮಾಡುತ್ತಾ ಬಂದಿದೆ. ಈಗ ಕಾಂಗ್ರೆಸ್ ಸರ್ಕಾರ ನೂತನ ಜಿಲ್ಲೆ ಘೋಷಣೆ ಮಾಡಿ ಮಾತು ಉಳಿಸಿಕೊಳ್ಳಬೇಕು ಎಂದು ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರೊ.ಎಸ್.ವೈ.ಹಂಜಿ ಒತ್ತಾಯಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲಾ ವಿಭಜನೆ ಮಾಡುವುದು ಅವಶ್ಯಕವಾಗಿದೆಂದು ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಯನ್ನು ಜಿಲ್ಲಾ ಹೋರಾಟ ಸಮಿತಿ ಸ್ವಾಗತಿಸುತ್ತದೆ. ಅದರಂತೆ ಚುನಾವಣೆ ಪೂರ್ವದಲ್ಲಿ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿರುವ ವಿ.ಪ.ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ಅವರಿಗೂ ಜಿಲ್ಲಾ ಹೋರಾಟ ಸಮಿತಿ ಧನ್ಯವಾದ ತಿಳಿಸುತ್ತದೆ. ಆದರೆ ನೂತನ ಸರ್ಕಾರದಲ್ಲಿ ಮುಖ್ಯಮಂತ್ರಿ ಮನವೊಲಿಸಿ ಜಿಲ್ಲೆ ಘೋಷನೆ ಮಾಡುವುದು ಜಿಲ್ಲೆಯ ಎಲ್ಲ ನಾಯಕರಲ್ಲಿ ದೊಡ್ಡ ಸವಾಲಿದೆ ಎಂದರು.
ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಜಿಲ್ಲಾ ಹೋರಾಟ ಸಮಿತಿಗೆ ನ್ಯಾಯವಾದಿಗಳ ಸಂಘ, ದಲಿತ ಸಂಘಟನೆಗಳು, ರೈತ ಸಂಘಟನೆಗಳು, ವರ್ತಕರ ಸಂಘ, ಪತ್ರಕರ್ತರ ಸಂಘ, ಕರವೇ, ಸಾಹಿತಿಗಳು ಸೇರಿ ನಿಯೋಜಿತ ಚಿಕ್ಕೋಡಿ ಜಿಲ್ಲೆ ವ್ಯಾಪ್ತಿಗೆ ಬರುವ ಎಲ್ಲ ತಾಲೂಕಿನ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಲು ಬೆಳಗಾವಿ ಕನ್ನಡಪರ ಸಂಘಟನೆಗಳು ಯಾವುದೇ ರೀತಿ ವಿರೋಧ ಮಾಡಿಲ್ಲ ಅವರೂ ಸಹ ಸಹಮತ ಇದೆ. ಸದ್ಯ ಜಿಲ್ಲೆ ಮಾಡುವ ಪ್ರಸ್ತಾಪ ಸರ್ಕಾರದ ಮಟ್ಟದಲ್ಲಿ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಸರ್ಕಾರ ಕೂಡಲೇ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಹಿಂದಿನ ಬಿಜೆಪಿ ಸರ್ಕಾರ ಬೆಳಗಾವಿಯಲ್ಲಿ ನಡೆಸಿದ ಅಧಿವೇಶನದಲ್ಲಿ ಜಿಲ್ಲಾ ಹೋರಾಟ ಸಮಿತಿ ಯಡೂರದಿಂದ ಬೆಳಗಾವಿಯವರೆಗೆ ೧೦೦ ಕಿ.ಮೀ ಪಾದಯಾತ್ರೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಬರಲಾಗಿದೆ. ದಿ.ಬಿ.ಆರ್.ಸಂಗಪ್ಪಗೋಳ ನೇತೃತ್ವದಲ್ಲಿ ಎರಡು ತಿಂಗಳು ಕಾಲ ಧರಣಿ ಸತ್ಯಾಗ್ರಹ ಮಾಡಲಾಗಿದೆ. ಈಗ ಮತ್ತೊಮ್ಮೆ ಹೋರಾಟ ತಿವ್ರಗೊಳಿಸಿ ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರುದ್ರಪ್ಪ ಸಂಘಪ್ಪಗೋಳ, ತುಕಾರಾಮ ಕೋಳಿ, ಸುರೇಶ ಬ್ಯಾಕೂಡೆ, ತ್ಯಾಗರಾಜ ಕದಮ, ರಮೇಶ ಬಸ್ತವಾಡ, ಬಿ.ಎನ್.ಪಾಟೀಲ ಮುಂತಾದವರು ಇದ್ದರು.