Advertisement

ನ್ಯೂಜಿಲ್ಯಾಂಡ್‌-ದಕ್ಷಿಣ ಆಫ್ರಿಕಾ ಏಕದಿನ ತೀವ್ರ ಪೈಪೋಟಿಯ ಮುನ್ಸೂಚನೆ

03:45 AM Feb 19, 2017 | |

ಹ್ಯಾಮಿಲ್ಟನ್: ಏಕೈಕ ಟಿ-20 ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡಿಗೆ ಹೀನಾಯ ಸೋಲುಣಿಸಿದ ದಕ್ಷಿಣ ಆಫ್ರಿಕಾ, ಏಕದಿನದಲ್ಲಿ ತನ್ನ ಅಜೇಯ ಅಭಿಯಾನ ಮುಂದುವರಿಸುವ ಹವಣಿಕೆಯಲ್ಲಿದೆ. 

Advertisement

ಇನ್ನೊಂದೆಡೆ ಮೊನ್ನೆಯಷ್ಟೇ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ವಿರುದ್ಧ ಸರಣಿ ಗೆದ್ದ ಕಿವೀಸ್‌, ಪ್ರವಾಸಿ ಹರಿಣಗಳಿಗೂ ಗತಿಕಾಣಿಸುವ ಯೋಜನೆ ಹಾಕಿಕೊಂಡಿದೆ. ಇತ್ತಂಡಗಳ ಮೊದಲ ಏಕದಿನ ಸಮರ ರವಿವಾರ ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ.

ತವರಿನ ಸರಣಿಯಲ್ಲಿ ಶ್ರೀಲಂಕಾಕ್ಕೆ 5-0 ವೈಟ್‌ವಾಶ್‌ ಮಾಡಿ ಬಂದಿರುವ ದಕ್ಷಿಣ ಆಫ್ರಿಕಾ ತನ್ನ ಅಜೇಯ ಓಟವನ್ನು 11 ಪಂದ್ಯಗಳಿಗೆ ವಿಸ್ತರಿಸಿದೆ. ಇನ್ನೊಂದು ಪಂದ್ಯ ಗೆದ್ದರೆ ತನ್ನ ದಾಖಲೆಯನ್ನು ಸರಿದೂಗಿಸಲಿದೆ. 2005ರಲ್ಲಿ ಆಫ್ರಿಕಾ ಸತತ 12 ಪಂದ್ಯಗಳಲ್ಲಿ ಸೋಲು ಕಾಣದೆ ಉಳಿದಿತ್ತು. ಅಂದು ವೆಸ್ಟ್‌ ಇಂಡೀಸ್‌ ನೆಲದಲ್ಲೂ ದಕ್ಷಿಣ ಆಫ್ರಿಕಾ 5 ಏಕದಿನ ಪಂದ್ಯಗಳನ್ನಾಡಿ ಎಲ್ಲವನ್ನೂ ಜಯಿಸಿದ್ದನ್ನು ಮರೆಯುವಂತಿಲ್ಲ. ಆದರೆ ಈ ಬಾರಿ ಹರಿಣಗಳ ಅಷ್ಟೂ 11 ಗೆಲುವುಗಳು ತವರಿನಂಗಳದಲ್ಲೇ ದಾಖಲಾಗಿವೆ. ಹೀಗಾಗಿ ವಿದೇಶದಲ್ಲಿ ಎಬಿಡಿ ಪಡೆ ಎಂಥ ಸಾಹಸ ಪ್ರದರ್ಶಿಸೀತು ಎಂಬುದೊಂದು ಕುತೂಹಲ.

ಅನುಭವದಲ್ಲಿ ಆಫ್ರಿಕಾ ಮುಂದು
ಅನುಭವಕ್ಕೆ ಹೋಲಿಸಿದರೆ ದಕ್ಷಿಣ ಆಫ್ರಿಕಾ ತಂಡವೇ ಹೆಚ್ಚು ಬಲಿಷ್ಠ. ಗಾಯಾಳು ಡೇವಿಡ್‌ ಮಿಲ್ಲರ್‌ ಅವರನ್ನು ಹೊರತುಪಡಿಸಿ ಆಫ್ರಿಕಾದ ಸಂಭಾವ್ಯ ಆಡುವ ಬಳಗವನ್ನು ಗಣನೆಗೆ ತೆಗೆದುಕೊಂಡರೆ ಅಲ್ಲಿ 72 ಶತಕಗಳು ಕಂಡುಬರುತ್ತವೆ. ನ್ಯೂಜಿಲ್ಯಾಂಡ್‌ ಕಡೆಯಿಂದ ದಾಖಲಾಗಿರುವುದು 28 ಶತಕ ಮಾತ್ರ. ಇದರಲ್ಲಿ 16 ಸೆಂಚುರಿಗಳನ್ನು ರಾಸ್‌ ಟಯ್ಲರ್‌ ಒಬ್ಬರೇ ಹೊಡೆದಿದ್ದಾರೆ!
ಇನ್‌ ಫಾರ್ಮ್ ರಾಸ್‌ ಟಯ್ಲರ್‌ 6 ಸಾವಿರ ರನ್‌ ಸಾಧನೆಗೆ ಹತ್ತಿರವಾಗಿದ್ದು, ಇದಕ್ಕೆ ಕೇವಲ 51 ರನ್‌ ಮಾಡಿದರೆ ಸಾಕು. ಅವರು ಈ ಸಾಧನೆಗೈದ ನ್ಯೂಜಿಲ್ಯಾಂಡಿನ 4ನೇ ಕ್ರಿಕೆಟಿಗನಾಗಲಿದ್ದಾರೆ. ಬ್ರೆಂಡನ್‌ ಮೆಕಲಮ್‌, ನಥನ್‌ ಆ್ಯಸ್ಲೆ, ಸ್ಟೀಫ‌ನ್‌ ಫ್ಲೆಮಿಂಗ್‌ ಉಳಿದ ಮೂವರು.ಮುಂಬರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಇತ್ತಂಡಗಳಿಗೂ ಇದು ಮಹತ್ವದ ಸರಣಿ. ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಎರಡೂ ತಂಡಗಳು ಆಡಲಿರುವ ಕೊನೆಯ ಏಕದಿನ ಸರಣಿ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next