Advertisement

ಗುಪ್ತಚರ ಇಲಾಖೆ ಅಂತಿಮ ವರದಿಯಲ್ಲೂ ಸುಮಲತಾಗೆ ಲೀಡ್‌?

11:26 PM May 11, 2019 | Lakshmi GovindaRaj |

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣಾ ಫ‌ಲಿತಾಂಶ ಕುರಿತಂತೆ ಗುಪ್ತಚರ ಇಲಾಖೆ ಸಲ್ಲಿಸಿರುವ ಅಂತಿಮ ವರದಿಯಲ್ಲೂ ಪಕ್ಷೇತರ ಅಭ್ಯರ್ಥಿ ಸುಮಲತಾ ಮುನ್ನಡೆ ಸಾಧಿಸಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮತ್ತೆ ಶಾಕ್‌ ನೀಡಿದೆ.

Advertisement

ಗುಪ್ತಚರ ಇಲಾಖೆ ಅಧಿಕಾರಿಗಳು ನಡೆಸಿರುವ ಸಮೀಕ್ಷೆಯಂತೆ ನಾಗಮಂಗಲ, ಮೇಲುಕೋಟೆ, ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಕೆ.ನಿಖೀಲ್‌ಗೆ ಸಮಾಧಾನಕರ ಎನ್ನುವಂತಹ ಮುನ್ನಡೆ ಸಿಗಲಿದೆ. ಉಳಿದಂತೆ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ ಹಾಗೂ ಕೆ.ಆರ್‌.ನಗರ ಕ್ಷೇತ್ರಗಳಲ್ಲಿ ಸುಮಲತಾ ಮುನ್ನಡೆ ಸಾಧಿಸಲಿದ್ದಾರೆ.

ಗುಪ್ತಚರ ಇಲಾಖೆಯ ಅಧಿಕಾರಿಗಳು ಮೈತ್ರಿ ಅಭ್ಯರ್ಥಿಯ ಹಿನ್ನಡೆ-ಮುನ್ನಡೆಗೆ ಕಾರಣವೇನು ಎಂಬ ಬಗ್ಗೆಯೂ ಸವಿಸ್ತಾರ ವರದಿ ನೀಡಿದ್ದಾರೆಂದು ತಿಳಿದು ಬಂದಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಜನರು ಕೊಟ್ಟಿರುವ ಲೀಡ್‌ ನೋಡಿ ಕುಮಾರಸ್ವಾಮಿ ಕಂಗಾಲಾಗಿದ್ದಾರೆ. ಈ ಸಂಬಂಧ ಮಡಿಕೇರಿಯ ಇಬ್ಬನಿ ರೆಸಾರ್ಟ್‌ನಲ್ಲೇ ಆಪ್ತರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿದರು ಎಂದು ತಿಳಿದು ಬಂದಿದೆ.

ಗುಪ್ತಚರ ಇಲಾಖೆ ಈವರೆಗೆ ಸಲ್ಲಿಸಿರುವ ಮೂರೂ ವರದಿಗಳು ಕುಮಾರಸ್ವಾಮಿಗೆ ನಿದ್ದೆಗೆಡಿಸುವಂತೆ ಮಾಡಿದ್ದವು. ಕೊನೆಯ ಹಂತದಲ್ಲಿ ನಡೆಸಿರುವ ಅಂತಿಮ ವರದಿಯೂ ಪುತ್ರನ ಗೆಲುವಿಗೆ ವಿರುದ್ಧವಾಗಿಯೇ ಬಂದಿರುವುದು ತಳಮಳ ಹಾಗೂ ಆತಂಕ ಮೂಡಿಸಿದೆ. ಆದರೆ, ನಿಖೀಲ್‌ ಸೋಲು-ಗೆಲುವಿನ ಬಗ್ಗೆ ಸ್ಪಷ್ಟತೆ ನೀಡದ ಗುಪ್ತಚರ ಇಲಾಖೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ವರದಿ ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್‌ಗೆ ಒಳ ಏಟಿನ ಭೀತಿ: ಕಾಂಗ್ರೆಸ್‌ನ ಪರಾಜಿತ ಶಾಸಕರು, ಬಿಜೆಪಿ, ರೈತಸಂಘ ಎಲ್ಲರೂ ಒಗ್ಗೂಡಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕಾರ್ಯಾಚರಣೆ ನಡೆಸಿರುವುದು ಸಿಎಂಗೆ ತಲೆನೋವು ತಂದಿದ್ದರೆ, ಜೆಡಿಎಸ್‌ ಶಾಸಕರಲ್ಲಿ ಕೆಲವರು ಚುನಾವಣೆ ವೇಳೆ ಸರಿಯಾಗಿ ಕೆಲಸ ಮಾಡದಿರುವುದು ಪುತ್ರನ ಸೋಲಿನ ಆತಂಕ ಹೆಚ್ಚುವಂತೆ ಮಾಡಿದೆ.

Advertisement

ಜೆಡಿಎಸ್‌ನ ಕೆಲ ಮುಖಂಡರೇ ಈ ವಿಷಯವಾಗಿ ಸಿಎಂಗೆ ಖುದ್ದು ದೂರು ನೀಡಿದ್ದಾರೆಂದು ತಿಳಿದು ಬಂದಿದೆ. ಮಹಿಳಾ ಮತದಾರರು ಹಾಗೂ ಯುವ ಮತದಾರರ ಓಟುಗಳು ಎತ್ತ ಹರಿದಿವೆ ಎನ್ನುವುದು ಜಿಲ್ಲಾ ರಾಜಕೀಯ ವಲಯದಲ್ಲಿ ಬಹಳ ಸೋಜಿಗ ಮೂಡಿಸಿದೆ. ಅದನ್ನು ನಿಖರವಾಗಿ ಗುರುತಿಸುವುದಕ್ಕೆ ಗುಪ್ತಚರ ಇಲಾಖೆಯಿಂದಲೂ ಸಾಧ್ಯವಾಗುತ್ತಿಲ್ಲ.

ಕ್ಷೇತ್ರದೊಳಗೆ ಜನರು ಬಹಿರಂಗವಾಗಿಯೇ ಸುಮಲತಾ ಅವರನ್ನು ಬೆಂಬಲಿಸಿರುವುದಾಗಿ ಮಾತನಾಡುತ್ತಿದ್ದಾರೆ. ಅದರ ಆಧಾರದ ಮೇಲೆ ಸುಮಲತಾ ಗೆಲುವಿನ ಸಾಧ್ಯತೆಗಳ ಲೆಕ್ಕಾಚಾರ ನಡೆದಿದೆ. ಆದರೆ, ಅಂತಿಮವಾಗಿ ವಿಜಯಮಾಲೆ ಯಾರ ಕೊರಳಿಗೆ ಬೀಳಲಿದೆ ಎನ್ನುವುದು ಮೇ 23ರಂದು ಅಧಿಕೃತವಾಗಿ ಬಹಿರಂಗವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next