Advertisement
ಸಿಎಂ ಮತ್ತು ಗೃಹ ಸಚಿವರು ಸುಮಾರು ಎರಡೂವರೆ ಗಂಟೆ ಕಾಲ ಸಭೆ ನಡೆಸಿದ್ದು, ಡಿಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ವಿನಾಯಕ ಪಾಟೀಲ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪ್ರತಿಭಟನೆ ಹತ್ತಿಕ್ಕುವಲ್ಲಿ ವಿಫಲವಾದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಭದ್ರತೆ ಮಾತ್ರವಲ್ಲದೆ, ಗುಪ್ತಚರ ಇಲಾಖೆ ವೈಫಲ್ಯವೂ ಇದೆ. ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕುತ್ತಾರೆ ಎಂದರೆ ಹೇಗೆ ಎಂದು ಗರಂ ಆದ ಮುಖ್ಯಮಂತ್ರಿ, ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಅನಾಹುತಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಶನಿವಾರ ಸರ್ಕಾರ ಹಾಗೂ ಗೃಹ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಆರಂಭಿಸಿದ ಕಾರ್ಯಕರ್ತರು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ರಾಜ್ಯದಲ್ಲಿ ಯೋಗಿ ಆದಿತ್ಯನಾಥ ಮಾದರಿಯ ಸರ್ಕಾರ ಜಾರಿಗೆ ಬರಬೇಕು. ಸಮಾಜಘಾತುಕ ಶಕ್ತಿಗಳನ್ನು ಸದೆಬಡಿಯಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಿಂದೂ ಕಾರ್ಯಕರ್ತರು ಹತ್ಯೆಯಾದರೂ ಸರ್ಕಾರ ಯಾವುದೇ ಕಠಿಣ ಕ್ರಮಕೈಗೊಳ್ಳುತ್ತಿಲ್ಲ. ಈ ಘಟನೆಗಳಿಂದ ಮುಖ್ಯಮಂತ್ರಿಗಳು, ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಜ್ಯದಲ್ಲಿ ಎಸ್‌ಡಿಪಿಐ ಮತ್ತು ಪಿಎಫ್ಐ ಸಂಘಟನೆ ನಿಷೇಧಿಸಬೇಕೆಂದು ಒತ್ತಾಯಿಸಿದರು. ಇದೇ ವೇಳೆ ಕಾರ್ಯಕರ್ತರು ಏಕಾಏಕಿ ಗೇಟ್ ತೆಗೆದು ಸಚಿವರ ಮನೆಗೆ ನುಗ್ಗಲು ಯತ್ನಿಸಿದ್ದರು. ಆಗ ಸ್ಥಳದಲ್ಲಿದ್ದ ಪಿಎಸ್‌ಐ ಹಾಗೂ ಪೊಲೀಸರು ಕಾರ್ಯಕರ್ತರನ್ನು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ. ಬಳಿಕ ಗೇಟ್ ನೆಗೆದ ಕಾರ್ಯಕರ್ತರು ನೇರವಾಗಿ ಮನೆಗೆ ನುಗ್ಗಲು ಯತ್ನಿಸಿದ್ದರು. ಆಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದರು. ಅದಕ್ಕೂ ಜಗ್ಗದ ಕಾರ್ಯಕರ್ತರು ಸಚಿವರು, ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇನ್ನಷ್ಟು ಮಂದಿ ಪೊಲೀಸರು ಸ್ಥಳಕ್ಕೆ ಬಂದು ಲಾಠಿ ಪ್ರಹಾರ ನಡೆಸಿ ಎಲ್ಲ ಕಾರ್ಯಕರ್ತರನ್ನು ವಶಕ್ಕೆ ಪಡೆದುಕರೆದೊಯ್ದರು. ಬಳಿಕ 40 ಮಂದಿ ವಿರುದ್ಧ ಜೆ.ಸಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಎಲ್ಲರ ಬಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದರು.
Related Articles
ಪರಿಸ್ಥಿತಿ ಅರಿತ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಮಾಹಿತಿ ಪಡೆದುಕೊಂಡರು. ಬಳಿಕ ಸಚಿವರು ಕಾರ್ಯನಿಮಿತ್ತ ಹೊರಗಡೆ ಹೋಗಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು, ಏಕಾಏಕಿ ಮನೆಗೆ ನುಗ್ಗಿ, ಬಾಗಿಲು ಮುರಿದು ಧಿಕ್ಕಾರ ಕೂಗಿದ್ದಾರೆ. ಹೀಗಾಗಿ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಬೇಕಾಗಿತ್ತು ಎಂದು ಹೇಳಿದರು.
Advertisement
ಬಾಗಿಲು ಮುರಿಯಲು ಯತ್ನ, ಹೂಕುಂಡಗಳು ನಾಶಕಾಂಪೌಂಡ್ ಒಳಗೆ ನುಗ್ಗಿದ ಕಾರ್ಯಕರ್ತರು ಸಚಿವರ ಮನೆಯ ಬಾಗಿಲು ಮುರಿದು ಒಳಗೆ ನುಗ್ಗಲು ಯತ್ನಿಸಿದರು. ಅದನ್ನು ಪೊಲೀಸರು ತಡೆದಾಗ ಬಾಗಿಲು ಮುಂಭಾಗವಿದ್ದ ಹೂಕುಂಡಗಳನ್ನು ನಾಶಪಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಮಧ್ಯೆ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪದ ಮೇಲೆ ಪಿಎಸ್‌ಐ ಸೇರಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಭಾವನೆ ಅರ್ಥ ಮಾಡಿಕೊಂಡಿದ್ದೇನೆ
ಘಟನೆ ಕುರಿತು ಹೇಳಿಕೆ ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆಗಳಿಂದ ಹಿಡಿದು, ಇತ್ತೀಚೆಗಿನ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯಂತಹ ಘಟನೆಗಳ ಹಿನ್ನೆಲೆಯಲ್ಲಿ ಎಸ್‌ಡಿಪಿಐ ಅಂತಹ ಸಂಘಟನೆಗಳ ಮೇಲೆ ನಿಷೇಧ ಹೇರಬೇಕು ಎಂಬ ಬೇಡಿಕೆಯೊಂದಿಗೆ ಎಬಿವಿಪಿ ಕಾರ್ಯಕರ್ತರು ಬಂದಿದ್ದರು ಎಂದು ಹೇಳಿದ್ದಾರೆ. ಮನೆಯಲ್ಲಿ ನನ್ನನ್ನು ಭೇಟಿಯಾಗಲು ಬಂದಿದ್ದ ಎಬಿವಿಪಿ ಕಾರ್ಯಕರ್ತರು, ನನ್ನ ಅನುಪಸ್ಥಿತಿಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಎಬಿವಿಪಿ ಸದಸ್ಯರನ್ನು ನಾನೇ ಆಹ್ವಾನಿಸಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. ರಾಜೀನಾಮೆ ಕೇಳಿಲ್ಲ: ಎಬಿವಿಪಿ ಸ್ಪಷ್ಟನೆ
ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳ ಹಿಂದೆ ಎಸ್‌ಡಿಪಿಐ, ಪಿಎಫ್ಐ, ಸಿಎಫ್ಐ ಸಂಘಟನೆಗಳು ಭಾಗಿಯಾಗಿರುವುದು ಕಂಡು ಬರುತ್ತಿದ್ದು, ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಮತ್ತು ಈ ರೀತಿಯ ಪ್ರಕರಣಗಳಿಗೆ ಕೊನೆಗಾಣಿಸುವ ನಿಟ್ಟಿನಲ್ಲಿ ಸರ್ಕಾರ ಎಸ್‌ಡಿಪಿಐ, ಪಿಎಫ್ಐ, ಸಿಎಫ್ಐ ರೀತಿಯ ಸಂಘಟನೆಗಳನ್ನು ನಿಷೇಧಿಸುವಂತೆ ಎಬಿವಿಪಿಯ ಆಗ್ರಹವಾಗಿತ್ತು. ಆದರೆ, ಗೃಹ ಸಚಿವರ ರಾಜೀನಾಮೆಗೆ ಎಬಿವಿಪಿ ಆಗ್ರಹಿಸಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ರಾಜೀನಾಮೆಯಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ಅಂತಹ ಬೇಡಿಕೆಯು ನಮ್ಮದಾಗಿರಲಿಲ್ಲ. ಎಸ್‌ಡಿಪಿಐ, ಪಿಎಫ್ಐ, ಸಿಎಫ್ಐ ಸಂಘಟನೆಗಳನ್ನು ನಿಷೇಧಿಸಬೇಕು ಎಂಬುದು ನಮ್ಮ ಆಗ್ರಹವಾಗಿತ್ತು ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.