ಬೆಂಗಳೂರು: ನಾವು ಗುರ್ರ್ ಅಂದ್ರೆ ಜಾತ್ಯಾತೀತತೆಗೆ ಅಪಚಾರ ಆಗುತ್ತದೆ ಅಪಮಾನ ಆಗುತ್ತೆ ಸಂವಿಧಾನ ವಿರೋಧಿಯಾಗುತ್ತೆ. ಮೀಯಾಂವ್ ಅಂತಾ ಹೇಳ್ತಾ ಇರ್ಬೇಕಾ? ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಭಾನುವಾರ ಮತ್ತೆ ಬುದ್ದಿಜೀವಿಗಳ ವಿರುದ್ಧ ಕಿಡಿ ಕಾರಿದ್ದಾರೆ.
ಸಮೃದ್ಧ ಸಾಹಿತ್ಯ ಹಮ್ಮಿಕೊಂಡಿದ್ದ ಸಾವರ್ಕರ್ ಅವರ ಹಿಂದುತ್ವ ಅನುವಾದ ಕೃತಿ ಬಿಡುಗಡೆಗೊಳಿಸಿ ತೀವ್ರ ವಾಗ್ಧಾಳಿ ನಡೆಸಿದರು.
‘ಹಿಂದುತ್ವ ಅಂದರೆ ರಾಜಕಾರಣದ ಕಾಲ್‌ಚೆಂಡು ಅಲ್ಲ. ಅದು ನಮ್ಮ ಸ್ವಭಾವ, ನಮ್ಮತನ, ನಮ್ಮ ಬದುಕು ನಮ್ಮ ಪರಂಪರೆ ಇದನ್ನು ಬುದ್ಧಿ ಜೀವಿಗಳು ಅರ್ಥ ಮಾಡಿಕೊಳ್ಳಬೇಕು’ ಎಂದರು.
ಹಿಂದುತ್ವ ನಮ್ಮ ದೇಶದ ಬೆನ್ನೆಲುಬು. ಒಂದು ದೇಶ ನಾಶವಾಗಬೇಕಾದರೆ ಅದರ ಬೆನ್ನೆಲುಬು ನಾಶವಾಗಬೇಕು ಎಂದರು.
ಜಾತಿಯಿಂದ ದೇಶ ದೊಡ್ಡದಾಗಿಲ್ಲ. ಹಿಂದುತ್ವವಾದಿಗಳು ಜಾತಿಗೆ ಒತ್ತುಕೊಟ್ಟಿಲ್ಲ. ಕೃಷ್ಣ ಬ್ರಾಹ್ಮಣನೆ? ರಾಮ ಬ್ರಾಹ್ಮಣನೆ? ಮಣ್ಣಿನಿಂದ ಹುಟ್ಟಿಬಂದ ಗಣಪತಿ, ಹಾವಿನ ರೂಪದಲ್ಲಿರುವ ಸುಬ್ರಹ್ಮಣ್ಯ ಬ್ರಾಹ್ಮಣನೆ ಎಂದು ಪ್ರಶ್ನಿಸಿದರು.
ನಾವು ಈ ಮಣ್ಣಿನಲ್ಲೆ ಹುಟ್ಟಿ ಬೆಳೆದವರು.ನಮ್ಮದು ಅಲೆಮಾರಿ ಸಂಸ್ಕೃತಿ ಅಲ್ಲ ಎಂದರು.