Advertisement

ಬುದ್ಧಿಜೀವಿಗಳಿಗೆ ಬುದ್ಧಿಮಾತು

06:00 AM Dec 19, 2017 | Team Udayavani |

ನವದೆಹಲಿ: ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿನ ಬಿಜೆಪಿ ಗೆಲುವು ಅಭಿವೃದ್ಧಿ ಕೆಲಸಗಳಿಗೆ ನೀಡಿದ ಮನ್ನಣೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. 

Advertisement

ಈ ಎರಡು ರಾಜ್ಯಗಳಲ್ಲಿನ ಫ‌ಲಿತಾಂಶ ಹೊರಬಿದ್ದ ಮೇಲೆ ದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಗೆ ಸೋಮವಾರ ಸಂಜೆ ತೆರಳಿದ ಮೋದಿ, ಕಾರ್ಯಕರ್ತರು, ಪಕ್ಷದ ನಾಯಕರನ್ನು ಉದ್ದೇಶಿಸಿ ಮಾತನಾಡಿದರು. 

ಗೆಲುವಿನ ಬಗ್ಗೆ ಕಾರ್ಯಕರ್ತರು, ನಾಯಕರಿಗೆ ಅಭಿನಂದನೆ ಸಲ್ಲಿಸಿದ ಅವರು, ನೇರವಾಗಿಯೇ ಬಿಜೆಪಿ ವಿರೋಧಿಸುತ್ತಿರುವ ಬುದ್ಧಿಜೀವಿಗಳನ್ನು ತರಾಟೆಗೆ ತೆಗೆದುಕೊಂಡರು. ಉತ್ತರ ಪ್ರದೇಶ ಚುನಾವಣೆ ವೇಳೆ ಇದೇ ಬುದ್ದಿಜೀವಿಗಳು ಜಿಎಸ್‌ಟಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಬಿಜೆಪಿ ಸೋಲು ಬಯಸಿದರು. ಆದರೆ, ಜನ ಇದನ್ನು ಒಪ್ಪದೇ ಬಿಜೆಪಿ ಕೈಹಿಡಿದರು. ಅದೇ ರೀತಿ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆಯಲ್ಲೂ ಬುದ್ಧಿಜೀವಿಗಳ ಕಾರ್ಯ ಪುನರಾವರ್ತಿಸಿತು. ಆಗಲೂ ಮಹಾರಾಷ್ಟ್ರ ಬಿಜೆಪಿ ಈ ಅಡ್ಡಿ ನಿವಾರಿಸಿ ಅಭೂತಪೂರ್ವ ಗೆಲುವು ಸಾಧಿಸಿತು. ಹೀಗಾಗಿ ನಾನು ಈ ಸಂದರ್ಭದಲ್ಲಿ ಬುದ್ಧಿಜೀವಿಗಳಿಗೆ ಒಂದು ಮನವಿ ಮಾಡುತ್ತಿದ್ದೇನೆ; ದಯಮಾಡಿ ಜಿಎಸ್‌ಟಿ ಬಗ್ಗೆ ವದಂತಿ ಹಬ್ಬಿಸುವುದನ್ನು ಬಿಡಿ ಎಂದು ಹೇಳಿದರು. 

ಗುಜರಾತ್‌ ಮತ್ತು ಹಿಮಾಚಲ ಪ್ರದೇಶದ ಜನ ಅಭಿವೃದ್ಧಿಗಾಗಿ ಮತ ಹಾಕಿದ್ದಾರೆ ಎಂದ ಅವರು, ನೀವು ವಿಕಾಸವನ್ನು ಮರೆತರೆ ಜನ ನಿಮ್ಮನ್ನು ಐದು ವರ್ಷ ಮತ್ತೆ ದೂರ ಇಡುತ್ತಾರೆ ಎಂದು ಪ್ರತಿಪಕ್ಷಗಳಿಗೆ ಟಾಂಗ್‌ ನೀಡಿದರು. ಅಲ್ಲದೆ ತಾವು ಗುಜರಾತ್‌ನಿಂದ ಹೊರಬಂದ ಮೇಲೆಯೂ ಅಭಿವೃದ್ಧಿ ಪರ ಮತ ಹಾಕುವಂತೆ ಮಾಡಿದ ಪಕ್ಷದ ಕಾರ್ಯಕರ್ತರಿಗೂ ಮೋದಿ ಅಭಿನಂದನೆ ಸಲ್ಲಿಸಿದರು. 

ಹಿಮಾಚಲ ಪ್ರದೇಶದಲ್ಲೂ ಅಭಿವೃದ್ಧಿ ಕಾರ್ಯ ನಡೆಸದ ಕಾಂಗ್ರೆಸ್‌ ಸರ್ಕಾರಕ್ಕೆ ಜನ ಪಾಠ ಕಲಿಸಿದ್ದಾರೆ. ಅದೇ ರೀತಿ ತಮಗೆ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಜತೆಗೆ ಇತ್ತೀಚಿನ ಚುನಾವಣೆಗಳಲ್ಲಿ ದೇಶ ಸುಧಾರಣಾ ಕ್ರಮಗಳಿಗೆ ಮನ್ನಣೆ ನೀಡುತ್ತಿರುವುದು ಕಂಡು ಬರುತ್ತಿದೆ. ಅವರು ಭಾರಿ ಬದಲಾವಣೆ ಕಾಣು ತ್ತಿದ್ದಾರೆ ಎಂಬುದು ಈ ಫ‌ಲಿತಾಂಶಗಳಿಂದ ವ್ಯಕ್ತವಾಗಿದೆ ಎಂದರು. 

Advertisement

ಇದೇ ವೇಳೆ 30 ವರ್ಷಗಳ ಹಿಂದೆ ಗುಜರಾತ್‌ನಲ್ಲಿ ಜಾತೀಯತೆಯ ವಿಷಬೀಜ ಹರಡುತ್ತಿತ್ತು. ನನ್ನಂಥ ಕಾರ್ಯಕರ್ತರು ಈ ವಿಷಬೀಜವನ್ನು ಹೊರಗೆ ಹಾಕಲು ಶ್ರಮ ಪಡುತ್ತಲೇ ಬಂದು, ಯಶಸ್ವಿಯಾಗಿದ್ದೆವು. ಆದರೆ ಈ ಚುನಾವಣೆ ವೇಳೆ ಕಾಂಗ್ರೆಸ್‌ ಮತ್ತೆ ಈ ಜಾತಿಯ ವಿಷ ಬೀಜ ಬಿತ್ತನೆ ಮಾಡಲು ಮುಂದಾಗಿತ್ತು. ಆದರೆ ಅದರ ಪ್ರಯತ್ನಗಳಿಗೆ ಜನ ಮನ್ನಣೆ ನೀಡಲಿಲ್ಲ ಎಂದೂ ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಮಾತನಾಡಿ, ಕಾಂಗ್ರೆಸ್‌ ಧರ್ಮಾಧಾರಿತವಾಗಿ ಗುಜರಾತ್‌ ಅನ್ನು ವಿಭಜಿಸಲು ನೋಡಿತ್ತು. ಆದರೆ ಅದು ಈಡೇರಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next