Advertisement

ಸಮ್ಮಿಶ್ರ ಗೊಂದಲದಿಂದ ಅಭಿವೃದ್ಧಿ ನೆನೆಗುದಿಗೆ

12:03 PM Sep 16, 2018 | Team Udayavani |

ಬೆಂಗಳೂರು: ಅಧಿಕಾರಕ್ಕೆ ಬಂದಾಗಿನಿಂದಲೂ ಗೊಂದಲದ ಗೂಡಾಗಿರುವ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಈಗ ಅಭಿವೃದ್ಧಿ ಕಾರ್ಯಗಳು ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ನಡೆದಿದ್ದೇ ದಾರಿ ಎಂಬ ವಾತಾವರಣ ಸೃಷ್ಟಿಯಾಗಿದೆ. ಇದರ ಪರಿಣಾಮ ಅಭಿವೃದ್ಧಿ ಕೆಲಸಗಳು ನಿಂತ ನೀರಾಗಿವೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಇದಕ್ಕೆ ಪುಷ್ಠಿ ನೀಡುವಂತೆ ಸರ್ಕಾರ ಯೋಜನೆಗಳಿಗೆ ಮಾಡುವ ವೆಚ್ಚದಲ್ಲಿ ಕಳೆದ ಎರಡು ತಿಂಗಳಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿಲ್ಲ. ಇದುವರೆಗೆ ಒಟ್ಟು ಬಜೆಟ್‌ ವೆಚ್ಚದ ಶೇ. 21ರಷ್ಟು ಮಾತ್ರ ವೆಚ್ಚ ಆಗಿದ್ದು, ಹಿಂದಿನ ವರ್ಷ ಇದೇ ಅವಧಿಯಲ್ಲಿ ಶೇ. 36.4ರಷ್ಟು ವೆಚ್ಚವಾಗಿತ್ತು. ಅಭಿವೃದ್ಧಿ ಕೆಲಸಗಳು ಸರಿಯಾಗಿ ನಡೆಯದೇ ಇರುವುದೇ ವೆಚ್ಚದಲ್ಲಿ ಏರಿಕೆಯಾಗದಿರಲು ಕಾರಣ. 

ಆಡಳಿತದ ಚುಕ್ಕಾಣಿ ಹಿಡಿದವರು ಅಧಿಕಾರಿಗಳ ಮೇಲೆ ಹಿಡಿತ ಹೊಂದಿದ್ದರೆ ಅವರು ಕ್ರಿಯಾಶೀಲರಾಗಿರುತ್ತಾರೆ. ಇಲ್ಲದಿದ್ದರೆ ತಮ್ಮ ದೈನಂದಿನ ಕೆಲಸಗಳ ಬಗ್ಗೆ ಮಾತ್ರ ಗಮನಹರಿಸುತ್ತಾರೆ. ಸಮ್ಮಿಶ್ರ ಸರ್ಕಾರ ಗೊಂದಲದಲ್ಲೇ ಮುಳುಗಿರುವುದರಿಂದ ಮತ್ತು ವರ್ಗಾವಣೆ ವಿಚಾರದಲ್ಲಿ ಬೇಕಾಬಿಟ್ಟಿ ವರ್ತಿಸುತ್ತಿರುವುದರಿಂದ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಈ ಮಧ್ಯೆ ಅಭಿವೃದ್ಧಿ ಕೆಲಸಗಳು ಸರಿಯಾಗಿ ನಡೆಯದೇ ಇರಲು ಅಧಿಕಾರಿಗಳು ಕಾರಣ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಅಧಿಕಾರಿಗಳ ವಲಯದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ನಿಯಮಿತವಾಗಿ ನಡೆಯುವ ಕೆಲಸಗಳನ್ನು ಬಿಟ್ಟು ಹೊಸ ಯೋಜನೆಗಳಾವುವೂ ಜಾರಿಯಾಗುತ್ತಿಲ್ಲ. ಸಚಿವ ಸಂಪುಟದ ಅನುಮೋದನೆ ಇಲ್ಲದೆ ಅವುಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ.

ಹೀಗಿರುವಾಗ ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಸರಿಯಲ್ಲ ಎಂದು ಇಲಾಖೆಗಳ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಸಮ್ಮಿಶ್ರ ಸರ್ಕಾರ ಉರುಳುತ್ತದೆ ಎಂದು ಹೇಳುತ್ತಿರುವ ಕೆಲವು ಅಧಿಕಾರಿಗಳು ನಮಗೆ ಸ್ಪಂದಿಸುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳೂ ಕುಂಠಿತವಾಗುತ್ತಿವೆ. ಅಂತಹ ಅಧಿಕಾರಿಗಳಿಗೆ ಚಾಟಿ ಬೀಸುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪದೇ ಪದೇ ಹೇಳುತ್ತಿದ್ದಾರೆ.

Advertisement

ಆದರೆ, ಯಾವುದೇ ಅಧಿಕಾರಿಗೆ ಮಾಡಲು ನಿರ್ದಿಷ್ಟ ಕೆಲಸಗಳಿರುತ್ತವೆ. ಆ ಕೆಲಸಗಳನ್ನು ಅವಧಿಯೊಳಗೆ ಪೂರೈಸದಿದ್ದರೆ ಅವರ ಸೇವಾ ಪುಸ್ತಕದಲ್ಲಿ ಅದು ನಮೂದಾಗಿ ಮುಂದೆ ತೊಂದರೆಯಾಗುತ್ತದೆ. ಹೀಗಿರುವಾಗ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಹೇಳುವುದರಲ್ಲಿ ಅರ್ಥವೇನು ಎಂದು ಅವರು ಪ್ರಶ್ನಿಸುತ್ತಾರೆ.

ಅಧಿಕಾರಿಗಳು ಹೇಳುವುದೇನು?: ಸಮ್ಮಿಶ್ರ ಸರ್ಕಾರ ಬಂದ ಆರಂಭದಲ್ಲಿ ಸಂಪುಟ ರಚನೆ, ಖಾತೆಗಳ ಹಂಚಿಕೆ ಕುರಿತಂತೆ ಗೊಂದಲಗಳಾದವು. ನಂತರದಲ್ಲಿ ಸಂಪುಟ ವಿಸ್ತರಣೆ ಕುರಿತು ಸಮಸ್ಯೆ ಕಾಣಿಸಿಕೊಂಡಿದ್ದು, ಇದುವರೆಗೂ ಬಗೆಹರಿದಿಲ್ಲ. ಇನ್ನೊಂದೆಡೆ ಮುಖ್ಯಮಂತ್ರಿಗಳು ಪರಿಷ್ಕೃತ ಬಜೆಟ್‌ ಮಂಡಿಸಿದರು.

ಕೆಲವು ಹೊಸ ಕಾರ್ಯಕ್ರಮಗಳನ್ನು ಘೋಷಿಸುವುದರೊಂದಿಗೆ ಹಿಂದಿನ ಬಜೆಟ್‌ನಲ್ಲಿ ಇದ್ದ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಹೇಳಲಾಯಿತು. ಈ ಪೈಕಿ ರೈತರ ಸಾಲ ಮನ್ನಾ ಹೊರತುಪಡಿಸಿ ರಾಜ್ಯವ್ಯಾಪಿ ಅನ್ವಯವಾಗುವ ಯಾವೊಂದು ಕಾರ್ಯಕ್ರಮಗಳ ಬಗ್ಗೆಯೂ ಸರ್ಕಾರ ನಿರ್ಧಾರ ಕೈಗೊಂಡಿಲ್ಲ. ಕೆಲವೊಂದು ಯೋಜನೆಗಳ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಆದೇಶ ಹೊರಬಿದ್ದಿಲ್ಲ.

ಈ ವರ್ಷ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 28,537 ಕೋಟಿ ರೂ., ಅಬಕಾರಿ ಇಲಾಖೆಯಲ್ಲಿ 8,150 ಕೋಟಿ ರೂ., ಸಾರಿಗೆ ಇಲಾಖೆಯಲ್ಲಿ 2,377.67 ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ  4,332 ಕೋಟಿ ರೂ. ಸಂಗ್ರಹವಾಗಿದ್ದು, ಇದು ಕಳೆದ ವರ್ಷಕ್ಕಿಂತ ಹೆಚ್ಚು. ಅಧಿಕಾರಿಗಳು ಕೆಲಸ ಮಾಡದೇ ಇದ್ದರೆ ಆದಾಯ ಸಂಗ್ರಹಣೆಯಲ್ಲಿ ಕಳೆದೆರಡು ತಿಂಗಳಲ್ಲಿ ಹೇಗೆ ಪ್ರಗತಿ ಕಂಡುಬರುತ್ತಿತ್ತು? ಎಂದು ಪ್ರಶ್ನಿಸುತ್ತಾರೆ.

ಇದಲ್ಲದೆ, ರಾಜ್ಯದ ಕೊಡಗು ಸೇರಿದಂತೆ  ಕೆಲವು ಜಿಲ್ಲೆಗಳಲ್ಲಿ ಪ್ರವಾಹ ತಲೆದೋರಿದಾಗ ರಾಜಕಾರಣಿಗಳು ಬಂದು ಹೋದರು. ಈಗ ಅಲ್ಲಿ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುತ್ತಿರುವುದು ಅಧಿಕಾರಿಗಳು. ಅದೇ ರೀತಿ ಬರಪೀಡಿತ ಜಿಲ್ಲೆಗಳಲ್ಲೂ ಪರಿಹಾರ ಕಾರ್ಯಗಳು ನಡೆಯುತ್ತಿದ್ದು, ರಾಜಕಾರಣಿಗಳಾರೂ ಗಮನಹರಿಸುತ್ತಿಲ್ಲ. ಇಷ್ಟಾದರೂ ಅಧಿಕಾರಿಗಳ ಬಗ್ಗೆ ಆರೋಪ ಮಾಡುತ್ತಿರುವುದು ಸರಿಯಲ್ಲ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next