Advertisement

ಉಕ ಸಮಗ್ರ ನೀರಾವರಿ; ಕೇಂದ್ರ ಸಚಿವರಿಗೆ ಮನವರಿಕೆ

03:20 AM Jul 05, 2019 | Team Udayavani |

ಹುಬ್ಬಳ್ಳಿ: ಉತ್ತರ ಕರ್ನಾಟಕ ಸಮಗ್ರ ನೀರಾವರಿ ಸೌಲಭ್ಯ ಕುರಿತ ಯೋಜನೆ, ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಎಂಆರ್‌ಎನ್‌(ನಿರಾಣಿ)ಫೌಂಡೇಶನ್‌ನ ಸಂಗಮೇಶ ನಿರಾಣಿ ನೇತೃತ್ವದ ವಿವಿಧ ಮಠಾಧೀಶರು ಹಾಗೂ ಜನಪ್ರನಿಧಿಗಳನ್ನೊಳಗೊಂಡ ರಾಜ್ಯದ ನಿಯೋಗ, ಗುರುವಾರ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.


Advertisement

ಕೇಂದ್ರ ಜಲಶಕ್ತಿ ಇಲಾಖೆ ಸಚಿವ ಗಜೇಂದ್ರಸಿಂಗ್‌ ಶೇಖಾವತ್‌, ಕೇಂದ್ರ ಕೃಷಿ ಸಚಿವ ಪುರುಷೋತ್ತಮ ರೂಪಾಲಾ ಅವರನ್ನು ಭೇಟಿ ಮಾಡಿದ ನಿಯೋಗ, ಉತ್ತರ ಕರ್ನಾಟಕದಲ್ಲಿ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ರೂಪಿಸಲಾದ ಕಾಳಿ ನದಿಯಿಂದ ಮಲಪ್ರಭಾ-ಘಟಪ್ರಭಾ ನದಿಗಳಿಗೆ ನೀರು ತರುವ ಅಮೃತಧಾರೆ ಯೋಜನೆ ಹಾಗೂ ಕೃಷ್ಣಾ ನದಿ ನೀರನ್ನು ಹಿಡಕಲ್ಲ ಹಾಗೂ ನವಿಲುತೀರ್ಥ ಜಲಾಶಗಳಿಗೆ ಸೇರಿಸುವ ಬಸವಧಾರೆ ಯೋಜನೆ ಕುರಿತು ಸಮಗ್ರ ಮಾಹಿತಿ ನೀಡಿತು.

ಉತ್ತರ ಕರ್ನಾಟಕ ಸಮಗ್ರ ನೀರಾವರಿ ಚಿಂತನೆ ರುವಾರಿ ಸಂಗಮೇಶ ನಿರಾಣಿ ಹಾಗೂ ನೀರಾವರಿ ತಜ್ಞ ರಂಗನಾಥ ಅವರು ಉತ್ತರ ಕರ್ನಾಟಕದಲ್ಲಿ ನೀರನ ಕೊರತೆ, ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವ ನದಿಗಳ ನೀರಿನ ಬಳಕೆ, ಲಭ್ಯವಿರುವ ನೀರಿನ ಪ್ರಮಾಣ ಇನ್ನಿತರ ವಿಷಯಗಳನ್ನು ಸವಿಸ್ತಾರವಾಗಿ ಸಚಿವರಿಗೆ ವಿವರಿಸಿದರು.

ನಿಯೋಗದ ಮಾಹಿತಿಯಿಂದ ಪ್ರೇರಿತರಾದ ಜಲಶಕ್ತಿ ಸಚಿವರು ಕೇಂದ್ರ ಜಲಮಂಡಳಿ ಕಾರ್ಯದರ್ಶಿ ಹಾಗೂ ಅಧೀನ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳನ್ನು ಕಚೇರಿಗೆ ಕರೆಸಿಕೊಂಡು ಚರ್ಚಿಸಿದರಲ್ಲದೆ, ಯೋಜನೆ ಕುರಿತು ಸಂಪೂರ್ಣ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.

ಯೋಜನೆ ಮಾರ್ಗದರ್ಶಕ ಹಾಗೂ ಶಾಸಕ ಮುರುಗೇಶ ನಿರಾಣಿ ಮಾತನಾಡಿ, ಉತ್ತರ ಕರ್ನಾಟಕದ ಸಮಗ್ರ ನೀರಾವರಿ ಸ್ಥಿತಿ ಕುರಿತು ಕೇಂದ್ರ ಸಚಿವರಿಗೆ ಮನವರಿಕೆ ಮಾಡಲಾಗಿದೆ. ಸಮಗ್ರ ನೀರಾವರಿ ಯೋಜನೆಗೆ ಅಗತ್ಯ ಸೌಲಭ್ಯ-ಸಹಕಾರ ನೀಡುವ ಕುರಿತು ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಭರವಸೆ ದೊರೆತಿದೆ ಎಂದು ತಿಳಿಸಿದ್ದಾರೆ.

Advertisement

ನಿಯೋಗ ಕೇಂದ್ರ ಸಚಿವರಾದ ಸುರೇಶ ಅಂಗಡಿ ಹಾಗೂ ಪ್ರಹ್ಲಾದ ಜೋಶಿ, ಪ್ರಧಾನಿ ಕಚೇರಿಗೂ ಭೇಟಿ ನೀಡಿ ಚರ್ಚಿಸಿತು. ಕೇಂದ್ರ ಜಲಶಕ್ತಿ ಹಾಗೂ ಕೃಷಿ ಸಚಿವರ ಭೇಟಿ ನಿಯೋಗದಲ್ಲಿ ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ಶಿವಕುಮಾರ ಉದಾಸಿ, ಜಿ.ಎಂ.ಸಿದ್ದೇಶ್ವರ, ಶೋಭಾ ಕರಂದ್ಲಾಜೆ, ಬಿ.ವೈ.ರಾಘವೇಂದ್ರ, ಮುಖಂಡರಾದ ಸಂದೀಪ ನಾಡಿಗೇರ, ಶಿವನಗೌಡ ಪಾಟೀಲ, ವೆಂಕಣ್ಣ ಗಿಡ್ಡಪ್ಪನವರ, ವರ್ಧಮಾನ ಯಲಗುದ್ರಿ, ಈಶ್ವರ ಕತ್ತಿ, ಡಾ|ರವಿ ಜಮಖಂಡಿ, ವೆಂಕಟೇಶ ದಾಸನ್ನವರ, ಲಕ್ಷ್ಮಪ್ಪ ದೊಡ್ಡಮನಿ, ಭರಮಪ್ಪ ಉಳ್ಳಾಗಡ್ಡಿ, ಗಿರೀಶ ಎಚ್., ವೆಂಕಟೇಶ ಜಂಬಗಿ ಇದ್ದರು.

ಔತಣಕೂಟ: ಉತ್ತರ ಕರ್ನಾಟಕದ ಸಮಗ್ರ ನೀರಾವರಿಯ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಆಗಮಿಸಿದ್ದ ನಿಯೋಗಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ನಿವಾಸದಲ್ಲಿ ಗುರುವಾರ ಚರ್ಚೆ ಹಾಗೂ ಔತಣಕೂಟ ಏರ್ಪಡಿಸಲಾಗಿತ್ತು. ನಾಡಿನ ವಿವಿಧ ಮಠಾಧೀಶರು, ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ರಾಜ್ಯದ ಸಂಸದರು, ನಿಯೋಗದ ವಿವಿಧ ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next