Advertisement

ಅತ್ತ ರಾಜಕೀಯ ಮುಂದಾಳು; ಇತ್ತ ಕೃಷಿ ಚಟುವಟಿಕೆಯ ಕಟ್ಟಾಳು

09:52 AM Jan 01, 2020 | mahesh |

ಹೆಸರು: ಸೌಮ್ಯಲತಾ ಜಯಂತ್‌ ಗೌಡ
ಏನು ಕೃಷಿ: ಹೈನುಗಾರಿಕೆ, ಭತ್ತ, ಬಾಳೆ, ಪಪ್ಪಾಯ, ಕೊಕ್ಕೊ
ವಯಸ್ಸು: 39
ಕೃಷಿ ಪ್ರದೇಶ: 5.30 ಎಕ್ರೆ

Advertisement

ನಾವು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಬೆಳ್ತಂಗಡಿ: ಸಮಾಜ ಸೇವೆಯ ಜತೆಗೆ ಕೃಷಿಯಲ್ಲೂ ಸ್ವಪ್ರೇರಣೆ ಕಂಡುಕೊಂಡು ಸಮಗ್ರ ಕೃಷಿಯಲ್ಲಿ ಮಹಿಳೆಯರೂ ಛಾಪು ಮೂಡಿಸ ಬಹುದು ಎಂಬುದನ್ನು ಉಜಿರೆ ಗುರಿಪಳ್ಳ ಸಾಯಿ ಕೃಪಾ ನಿವಾಸಿ ಸೌಮ್ಯಲತಾ ಜಯಂತ್‌ ಗೌಡ ಸಾಧಿಸಿ ತೋರಿಸಿದ್ದಾರೆ.

ಜಿ.ಪಂ. ಸದಸ್ಯೆಯಾಗಿ, ಗುರಿಪಳ್ಳ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ, ಉಜಿರೆ ಸಿ.ಎ. ಬ್ಯಾಂಕ್‌ನ ನಿರ್ದೇಶಕಿಯಾಗಿರುವ ಸೌಮ್ಯಲತಾ ಇತ್ತ 5.30 ಎಕ್ರೆ ಕೃಷಿ ಭೂಮಿಯಲ್ಲಿ ಸಮಗ್ರ ಕೃಷಿ ಪದ್ಧತಿ ಯನ್ನು ಅಳವಡಿಸಿಕೊಳ್ಳುವ ಮೂಲಕ ಯಶಸ್ಸು ಕಂಡಿದ್ದಾರೆ. ಪತಿ ಉದ್ಯಮಿಯಾಗಿದ್ದರೂ ಸೌಮ್ಯಲತಾ ಅವರ ಕೃಷಿ ಪ್ರೀತಿಗೆ ಸಂಪೂರ್ಣ ನೆರವಾಗಿದ್ದಾರೆ. ಹೈನುಗಾರರಾಗಿ 4 ಜರ್ಸಿ ತಳಿ ಹಸುಗಳಿಂದ ಪ್ರತಿನಿತ್ಯ 15 ರಿಂದ 20 ಲೀ. ಹಾಲು ಡೇರಿಗೆ ನೀಡುತ್ತಿದ್ದಾರೆ.

ವಾರಕ್ಕೆ 70 ಕೆ.ಜಿ. ಕೊಕ್ಕೊ
ಇವರು ಅಡಿಕೆ ಗಿಡ ಮಧ್ಯ ಕೊಕ್ಕೊ ಬೆಳೆಯನ್ನು ಬೆಳೆಸಿ ವಾರಕ್ಕೆ ಸರಿಸುಮಾರು 60ರಿಂದ 70 ಕೆ.ಜಿ. ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮನೆಯ ಖರ್ಚನ್ನು ನಿಭಾಯಿಸುತ್ತಿದ್ದಾರೆ. ಇದರೊಂದಿಗೆ ಪಪ್ಪಾಯಿ, ಸಹಿತ 5 ವರ್ಷಗಳಿಂದ 500ರಿಂದ 600ರಷ್ಟು ನೇಂದ್ರ ಬಾಳೆ ಗಿಡ ಬೆಳೆದು ಲಕ್ಷಾಂತರ ರೂ. ಆದಾಯ ಪಡೆಯುತ್ತಿದ್ದಾರೆ. ಪಪ್ಪಾಯಿಯ 500 ಗಿಡಗಳಷ್ಟು ಬೆಳೆಸಿದ್ದಾರೆ.

Advertisement

ವಿವಿಧ ತಳಿಯ ಅಡಿಕೆ, ಭತ್ತ ಕೃಷಿ
ಪ್ರಮುಖ ವಾಣಿಜ್ಯ ಬೆಳೆಯಾಗಿ ಸುಮಾರು 2,000ಕ್ಕೂ ಹೆಚ್ಚು ವಿವಿಧ ತಳಿಯ ಅಡಕೆ ಬೆಳೆಸುತ್ತಿದ್ದಾರೆ. ತೋಟಗಾರಿಕಾ ಇಲಾಖಾ ಮಾಹಿತಿಯಂತೆ ಹೊನಡಿ, ಸೈಗನ್‌, ಮಂಗಳ, ಸಾದಮಂಗಳ, ಇಂಟರ್‌ ಮಂಗಳ, ಮೋಹಿತ್‌ನಗರ ತಳಿಯಿಂದ ಉತ್ತಮ ಇಳುವರಿ ಕಂಡಿದ್ದಾರೆ. ಇದರ ಜತೆಗೆ ಕಾಫಿ ಬೆಳೆದು ಹೆಚ್ಚುವರಿ ಆದಾಯ ಪಡೆಯುತ್ತಿದ್ದಾರೆ. ಜತೆಗೆ 1 ಎಕ್ರೆಯಲ್ಲಿ ಭತ್ತ ಕೃಷಿಗೂ ಒತ್ತು ನೀಡಿದ್ದು, ಎಂ4 ತಳಿಯ 25 ಕ್ಷಿಂಟಾಲ್‌ ಭತ್ತ ಬೆಳೆಯುತ್ತಿದ್ದಾರೆ.

ಹಣ್ಣು ಬೆಳೆಗಳಿಗಾಗಿ ಮೀಸಲು
ಆದಾಯ ದೃಷ್ಟಿಯಿಂದ ಮಾತ್ರವಲ್ಲದೆ ಕೃಷಿಯಿಂದ ಮಾನಸಿಕ ನೆಮ್ಮದಿ ಇದೆ ಎಂಬುದನ್ನು ಸೌಮ್ಯಲತಾ ಕಂಡಿದ್ದಾರೆ. ಇದಕ್ಕಾಗಿ ವಿವಿಧ ತಳಿಯ 8 ಜಾತಿಯ ಮಾವು, 7 ಜಾತಿಯ ಹಲಸನ್ನು ಬೆಳೆಸಿದ್ದಾರೆ. ಹಣ್ಣಿನ ಬೆಳೆಗಳಾದ ರಾಂಬೂಟನ್‌, ಹನಿನೇರಳೆ, ಪನಿನೇರಳೆ, ಎಗ್‌ಫ್ರುಟ್ಸ್‌, ಬಟರ್‌ಫ್ರುಟ್‌, ಚೆರಿಹಣ್ಣಿನ ಸಹಿತ ಹಣ್ಣಿನ ಬೆಳೆಗಳಿಗೂ ಮಹತ್ವ ನೀಡಿರುವುದು
ಇವರ ವಿಶೇಷ.

ಪ್ರಶಸ್ತಿ 
2019-20ನೇ ಸಾಲಿನ ತಾಲೂಕು ಮಟ್ಟದ ಕೃಷಿಕ (ಉತ್ತಮ ಸಮಗ್ರ ಕೃಷಿ) ಪ್ರಶಸ್ತಿ.

15 ವರ್ಷಗಳಿಂದ ಕೃಷಿ
4 ದನ-ಪ್ರತನಿತ್ಯ 15 ಲೀ. ಹಾಲು
2,000 ಅಡಿಕೆ ಗಿಡ
 500 ಪಪ್ಪಾಯ, 600 ಬಾಳೆ ಗಿಡ
10ಕ್ಕೂ ಹೆಚ್ಚು ಹಣ್ಣಿನ ಬೆಳೆ
1 ಎಕ್ರೆ ಭತ್ತ ಕೃಷಿ
 ಮೊಬೈಲ್‌: 9845142950

ಆದಾಯದ ಜತೆಗೆ ಆರೋಗ್ಯ
ಸಾಮಾಜಿಕವಾಗಿ ನಾನು ಹಲವು ರಂಗಗಳಲ್ಲಿ ಬೆರೆತಿದ್ದರೂ ಕೃಷಿಯನ್ನು ಹವ್ಯಾಸಿಯಾಗಿ ತೊಡಗಿಸಿಕೊಂಡಿದ್ದೇನೆ. ಕೃಷಿ ಮಕ್ಕಳಿದ್ದಂತೆ, ಆರೈಕೆ ಮಾಡಿದಷ್ಟು ಅವನ್ನು ಕಂಡಾಗ ನಮಗೆ ಸಂತೋಷ ನೀಡುತ್ತದೆ. ಕೃಷಿ ಆದಾಯದ ಜತೆಗೆ ಆರೋಗ್ಯವನ್ನೂ ಕಾಪಾಡುತ್ತದೆ. ಮನೆಗೆ ಅವಶ್ಯ ತರಕಾರಿ, ಹಣ್ಣು ಸೀಮಿತ ಸ್ಥಳದಲ್ಲಿ ಬೆಳೆಯಬಹುದು. ಬಿಡುವಿನ ವೇಳೆಯಲ್ಲಿ ಸಮಾಜ ಸೇವೆಯಾಗಿ ರಾಜಕೀಯದಲ್ಲೂ ಸಕ್ರಿಯವಾಗಿದ್ದೇನೆ. ಪತಿ ಉದ್ಯಮಿಯಾದರೂ ಕೃಷಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ.
-ಸೌಮ್ಯಲತಾ ಜಯಂತ್‌ ಗೌಡ

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next