ವಿಟ್ಲ : ವಿಟ್ಲ ಪ.ಪಂ.ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ವಿಲ್ಲ. ಪ್ರತಿ ವರ್ಷವೂ ಜಲಸಂಪನ್ಮೂಲದ ಕೊರತೆ ಇರುತ್ತದೆ. 2 ವರ್ಷಗಳ ಹಿಂದೆ ಟ್ಯಾಂಕರ್ ನೀರು ಸರಬರಾಜು ಮಾಡಿ ದ್ದರೂ ಅನಂತರ ಆ ಅನಿವಾರ್ಯ ಉಂಟಾಗಲಿಲ್ಲ. ಈ ವರ್ಷವೂ ಈ ವರೆಗೆ ನೀರಿನ ಸಮಸ್ಯೆ ಉಲ್ಬಣಗೊಂಡಿಲ್ಲ.
ಅಣೆಕಟ್ಟೆ, ಕೆರೆ ಕಾರಣವೇ?
ಪ.ಪಂ. ವ್ಯಾಪ್ತಿಯ 7 ಕಡೆಗಳಲ್ಲಿ ಒಕ್ಕೆತ್ತೂರು ನದಿ ಮತ್ತು ತೋಡುಗಳಿಗೆ ಈ ಹಿಂದೆ 7 ತಾತ್ಕಾಲಿಕ ಅಣೆಕಟ್ಟೆಗಳನ್ನು ನಿರ್ಮಿಸಲಾಗಿತ್ತು. ಅದರ ಪರಿಣಾಮ ಅಂತರ್ಜಲ ವೃದ್ಧಿಯಾಯಿತು. ಕಳೆದ ವರ್ಷವೂ ಆ ಯೋಜನೆಯನ್ನು ಮುಂದುವರಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಅದರ ಸಂಖ್ಯೆ 10ಕ್ಕೇರಿದೆ. ಇದರ ಪರಿಣಾಮ ಊರಿನಲ್ಲಿ ಕಂಡುಬರುತ್ತಿದೆ. ಜತೆಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುಷ್ಕರಿಣಿಯಲ್ಲಿ ತುಂಬಿರುವ ನೀರು ಊರಿನ ಜಲವೃದ್ಧಿಗೆ ಕಾರಣವಾಗಿದೆ. ಎಕ್ರೆಗಟ್ಟಲೆ ವಿಸ್ತಾರದ ಕೋಟಿಕೆರೆ, ಕಾಶಿ ಮಠ ಕೆರೆಗಳು ಅಂತರ್ಜಲ
ಮಟ್ಟವನ್ನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ವಿವಿಧ ಅನುದಾನ
ಪ.ಪಂ. ವ್ಯಾಪ್ತಿಯ 18 ವಾರ್ಡ್‌ಗಳಲ್ಲಿ ನೀರು ಸರಬರಾಜು ಯೋಜನೆ ಕಾರ್ಯ ನಿರ್ವಹಿಸುತ್ತಿದೆ. ಸರಕಾರದ ಎಸ್‌ಎಫ್‌ಸಿ ಅನುದಾನದಲ್ಲಿ ಕುಡಿಯುವ ನೀರು ಯೋಜನೆ, ಎಸ್‌ಎಫ್‌ಸಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಅನುದಾನ, ಜಿಲ್ಲಾಧಿಕಾರಿಯವರ ಬರ ಪರಿಹಾರ ನಿಧಿ, ಪುರಸಭಾ ನಿಧಿಯ ಮೂಲಕ ಕ್ರಮ ಕೈಗೊಳ್ಳಲಾಗಿದೆ. ಅನೇಕ ಸಾಂಪ್ರ ದಾಯಿಕ ಜಲಶೇಖರಣೆ ಯೋಜನೆಗಳ ಮೂಲಕವೂ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗಿದೆ.
30 ಟ್ಯಾಂಕ್
ಉಕ್ಕುಡ, ನೆಲ್ಲಿಗುಡ್ಡೆ, ಮೇಗಿನಪೇಟೆ, ಕಲ್ಲಕಟ್ಟ ಎಂಬಲ್ಲಿ ಸರಕಾರದ ತೆರೆದ ಬಾವಿಗಳ ನೀರನ್ನು ಬಳಕೆ ಮಾಡಲಾಗುತ್ತಿದೆ. ಒಕ್ಕೆತ್ತೂರು ಮೂಲೆ, ಒಕ್ಕೆತ್ತೂರು, ಕೊಳಂಬೆ, ಬೊಳಂತಿಮೊಗರು, ಕೆದುಮೂಲೆ, ನೆಕ್ಕಿಲಾರು, ಪಳಿಕೆ, ಪಳಿಕೆ ಕಾಲೊನಿ, ಸೀಗೆಬಲ್ಲೆ, ಡಿಗ್ರಿ ಕಾಲೇಜು ಬಳಿ, ವನ ಭೋಜನ, ಕೆಮ್ಮಲೆ, ನವ ಗ್ರಾಮ, ಸುರುಳಿ ಮೂಲೆ, ಅನ್ನಮೂಲೆ, ಐಇಬಿ, ಇರಂ ದೂರು ಪಡೀಲು, ನೆಕ್ಕರೆಕಾಡು ಆನಂದ ನಾಯ್ಕರ ಮನೆಯ ಬಳಿ, ನೆಕ್ಕರೆ ಕಾಡು ರಕ್ಷಿತಾರಣ್ಯದ ಬಳಿ, ಉಕ್ಕುಡ ದರ್ಬೆ, ಉಕ್ಕುಡ ದರ್ಬೆಯ ಜನತಾ ಕಾಲೊನಿ, ವಿಟ್ಲ ಮೇಗಿನಪೇಟೆ, ಸಿಸಿಪಿಸಿಆರ್‌ಐ, ಉಕ್ಕುಡ ಸರೋಳಿ, ಉಕ್ಕುಡ ಅರಣ್ಯ ಇಲಾಖೆ ಬಳಿ, ಕಾಶಿಮಠ, ಪುಚ್ಚೆಗುತ್ತು ಎಂಬಲ್ಲಿ ಎರಡು ಕಡೆ, ಬಸವನಗುಡಿ, ಚಂದಳಿಕೆ ಕಲ್ಲಕಟ್ಟ ಬಳಿ, ಕುರುಂಬಳ ಈಶ್ವರ ಪುರುಷ ಮನೆ ಬಳಿ 30 ಸ್ಥಳಗಳಲ್ಲಿ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ವಿಟ್ಲ ಪ್ರವಾಸಿ ಮಂದಿರದ ಬಳಿಯ ಟ್ಯಾಂಕ್ 2 ಲಕ್ಷ ಲೀ. ಸಾಮರ್ಥ್ಯ ಹೊಂದಿದೆ.
ಡಿಪಿಆರ್ ಮಾಡಲು 23 ಲಕರೂ. ಪಾವತಿ
ಬರಿಮಾರು ಕಾಗೆಕಾನ ಎಂಬಲ್ಲಿ ನೇತ್ರಾವತಿ ನದಿಯಿಂದ ಸಮಗ್ರ ಕುಡಿಯುವ ನೀರಿನ ಯೋಜನೆ (ಕೆಯುಡಬ್ಲ್ಯುಎಸ್) ರೂಪಿಸಲಾಗಿದ್ದು, ಈಗಾಗಲೇ 23 ಲಕ್ಷ ರೂ. ಡಿಪಿಆರ್ ಮಾಡಲು ಪಾವತಿಸಲಾಗಿದೆ. ಇದು 9 ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ಯೋಜನೆಯಾಗಿದೆ.
ವಿಟ್ಲ ಪ.ಪಂ. ವ್ಯಾಪ್ತಿ
ವಾರ್ಡ್‌ಗಳು 18, ಮನೆಗಳು 6,650, ಜನಸಂಖ್ಯೆ 17,618, ಕೊಳವೆ ಬಾವಿಗಳು 40 , ನೀರಿನ ಟ್ಯಾಂಕ್ 30 , ಅಣೆಕಟ್ಟೆ 10
7 ಕೊಳವೆ ಬಾವಿಗಳಿಗೆ ಮಂಜೂರಾತಿ
ಪ್ರಸಕ್ತ ಸಾಲಿನಲ್ಲಿ ಈ ವರೆಗೆ ಯಾವುದೇ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿಲ್ಲ. ತಾತ್ಕಾಲಿಕ ಅಣೆಕಟ್ಟೆಗಳ ಪರಿಣಾಮ ಬಹಳವಿದೆ. ನೀರಿನ ವ್ಯವಸ್ಥೆಗೆ ಧಕ್ಕೆಯಾಗದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಸ್‌ಎಫ್‌ಸಿ ಯೋಜನೆ, ಡಿಸಿ ಬರ ಪರಿಹಾರ ನಿಧಿ, ಪುರಸಭಾ ನಿಧಿಗಳನ್ನು ಬಳಸಿ, ಕೊಳವೆ ಬಾವಿ, ಪೈಪ್‌ಲೈನ್ ಕಾಮಗಾರಿ ನಡೆಸಲಾಗಿದೆ. ಹೊಸತಾಗಿ 7 ಕೊಳವೆ ಬಾವಿಗಳಿಗೆ ಮಂಜೂರಾತಿ ದೊರಕಿದ್ದು, ತತ್‌ಕ್ಷಣ ಆವೆತ್ತಿಕಲ್ಲು, ನೆತ್ರಕೆರೆ, ಪಳಿಕೆ ಜನತಾ ಕಾಲೊನಿ, ಅನ್ನಮೂಲೆ, ಪಳಿಕೆ ಸುಂದರ ನಾಯ್ಕರ ಮನೆ, ಪೊನ್ನೊಟ್ಟು ದೇವಸ್ಯ, ಮಂಗಳಪದವು-ಕೋಡಪದವು ರಸ್ತೆ ಬಳಿಯಲ್ಲಿ ನಿರ್ಮಿಸಲು ಡಿಸಿಯವರ ಅಧಿಕೃತ ಆದೇಶ ಲಭ್ಯವಾಗಿದೆ.
– ಮಾಲಿನಿ, ಮುಖ್ಯಾಧಿಕಾರಿ, ವಿಟ್ಲ
ಪಟ್ಟಣ ಪಂಚಾಯತ್
ಉದಯಶಂಕರ್ ನೀರ್ಪಾಜೆ