ತಿ.ನರಸೀಪುರ: ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಗ್ರಾಮ ವಿಕಾಸ ಯೋಜನೆಯಡಿ ಗ್ರಾಮೀಣ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಸುನೀಲ್ ಬೋಸ್ ಹೇಳಿದರು.
ತಾಲೂಕಿನ ಕೇತಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಗ್ರಾಮ ವಿಕಾಸ ಯೋಜನೆಯಡಿ 75 ಲಕ್ಷ ರೂಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿ, ಮೂಲಭೂತ ಸೌಕರ್ಯ ವೃದ್ಧಿಯಾಗಿ ಗ್ರಾಮಗಳು ಸ್ಥಳೀಯವಾಗಿ ಸ್ವಾವಲಂಬಿ ಗಳಾಗಬೇಕು ಎಂಬ ಮಹಾತ್ಮರ ಆಶಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರಾಮ ವಿಕಾಸ ಯೋಜನೆಯಡಿ ಈಡೇರಿಸುವ ಪ್ರಯತ್ನವನ್ನು ಮಾಡಿದ್ದಾರೆ ಎಂದರು.
ಗ್ರಾಮ ವಿಕಾಸಕ್ಕೆ ಆಯ್ಕೆಗೊಂಡಿರುವ ಕೇತಳ್ಳಿ ಗ್ರಾಮದ ಅಭಿವೃದ್ಧಿಗೆ ಹೊಸದೊಂದು ಆಯಾಮ ಸಿಗಲಿದೆ. ಎಲ್ಲಾ ವರ್ಗದ ಜನರ ರಸ್ತೆಗಳು ಅಭಿವೃದ್ಧಿಗೊಳ್ಳಲಿವೆ. ಕುಡಿಯುವ ನೀರಿನ ಸಂಪರ್ಕ ಸುಧಾರಣೆಯಾಗಲಿದೆ. ವಿದ್ಯುತ್ ಬೀದಿ ದೀಪಗಳ ಸಮಸ್ಯೆ ಬಗೆಹರಿಯಲಿದೆ. ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಬೋಸ್ ಸೂಚಿಸಿದರು.
ಜಿ.ಪಂ ಸದಸ್ಯ ಟಿ.ಹೆಚ್.ಮಂಜುನಾಥನ್ ಮಾತನಾಡಿ, ರಾಜ್ಯ ಸರ್ಕಾರದ ಗ್ರಾಮ ವಿಕಾಸ ಯೋಜನೆಗೆ ಕೇತಳ್ಳಿ ಸೇರಿದಂತೆ ಟಿ.ದೊಡ್ಡಪುರ, ಕಾಳಿಹುಂಡಿ, ಹೊರಳಹಳ್ಳಿ ಹಾಗೂ ನಂಜಾಪುರ ಗ್ರಾಮಗಳನ್ನು ಆಯ್ಕೆ ಮಾಡಿ ತಲಾ 75 ಲಕ್ಷ ರೂಗಳ ವಿಶೇಷ ಅನುದಾನ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ನೀಡಲಾಗುತ್ತದೆ. ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ಕಾಳಜಿಯಿಂದ 5 ಗ್ರಾಮಗಳು ಪ್ರಗತಿಯಾಗಲಿವೆ ಎಂದರು.
ತಾ.ಪಂ ಅಧ್ಯಕ್ಷ ಸಿ.ಚಾಮೇಗೌಡ, ಮಾಜಿ ಸದಸ್ಯ ಮಹದೇವಪ್ಪ, ಕರೋಹಟ್ಟಿ ಗ್ರಾ.ಪಂ ಅಧ್ಯಕ್ಷ ಬಿ.ಎಂ.ಶಿವಕುಮಾರ್, ಉಪಾಧ್ಯಕ್ಷೆ ಮೀನಾ ಸೋಮನಾಯಕ, ಲೋಕೋಪಯೋಗಿ ಎಇಇ ಆರ್.ವಿನಯ್‌ಕುಮಾರ್, ಜಿ.ಪಂ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಸಿದ್ದರಾಜು ಸಹಾಯಕ ಇಂಜಿನಿಯರ್ ಬೋರಯ್ಯ, ನಾಗರಾಜು, ಗುತ್ತಿಗೆದಾರರಾದ ರಂಗರಾಜಪುರ ಎಂ.ಸಿದ್ದರಾಜು, ಹೊಸಪುರ ಕೆ.ಮಲ್ಲು, ಪಿಡಿಓ ಮಹದೇವ, ಕಾರ್ಯದರ್ಶಿ ಪ್ರಸಾದ್, ಗ್ರಾ.ಪಂ ಸದಸ್ಯರಾದ ಪ್ರಶಾಂತ್‌ಕುಮಾರ್ ಮುಖಂಡರಾದ ರಾಜಣ್ಣ, ಎಸ್.ಪಿ.ಸುಂದರ್, ರಾಚಯ್ಯ ಇತರರು ಇದ್ದರು.