ಸಿನಿಮಾ ಚಿತ್ರೀಕರಣ ಮಾಡುವಾಗ ಅನೇಕ ಬಾರಿ ತೊಂದರೆ, ನಷ್ಟ ಉಂಟಾಗುತ್ತದೆ. ಜೊತೆಗೆ ಕೆಲವು ಸನ್ನಿವೇಶಗಳಲ್ಲಿ ಕಲಾವಿದರು ಕೂಡಾ ಜೀವದ ಹಂಗು ತೊರೆದು ನಟಿಸಬೇಕಾಗುತ್ತದೆ. ಇವೆಲ್ಲವನ್ನು ಮನಗಂಡ “ಟಗರು’ ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಇಡೀ ಚಿತ್ರತಂಡಕ್ಕೆ ಇನ್ಸ್‌ಶೂರೆನ್ಸ್ ಮಾಡಿಸಿದ್ದಾರೆ.
“ಚಿತ್ರೀಕರಣ ಎಂದರೆ ನಾವು ಹೇಳಿದಂತೆ ಆಗೋದಿಲ್ಲ. ಸಾಕಷ್ಟು ಕಾರಣಗಳಿಂದ ವ್ಯತ್ಯಯಗಳಾಗುತ್ತವೆ. ಇದರಿಂದ ನಿರ್ಮಾಪಕರಿಗೂ ನಷ್ಟವಾಗುತ್ತದೆ. ಜೊತೆಗೆ ಜೀವದ ಹಂಗು ತೊರೆದು ಕಲಾವಿದರು ಕೂಡಾ ನಟಿಸುತ್ತಾರೆ. ಹೀಗಿರುವಾಗ ಇನ್ಸ್‌ಶೂರೆನ್ಸ್ ಮಾಡಿಸೋದು ತುಂಬಾ ಮುಖ್ಯ. ಅದೇ ಕಾರಣದಿಂದ “ಟಗರು’ ತಂಡಕ್ಕೆ ಇನ್ಸ್‌ಶೂರೆನ್ಸ್ ಮಾಡಿಸಲಾಗಿದೆ.
ಚಿತ್ರೀಕರಣ ವೇಳೆ ಏನಾದರೂ ತೊಂದರೆಯಾದಾಗ ಸಹಾಯವಾಗಲಿದೆ’ ಎನ್ನುವುದು ನಿರ್ಮಾಪಕ ಶ್ರೀಕಾಂತ್ ಮಾತು. ಶಿವರಾಜಕುಮಾರ್ ನಾಯಕರಾಗಿರುವ “ಟಗರು’ ಚಿತ್ರವನ್ನು ಸೂರಿ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಸದ್ಯ ಹುಬ್ಬಳ್ಳಿಯಲ್ಲಿದೆ ಚಿತ್ರತಂಡ. ಹುಬ್ಬಳ್ಳಿ ಮುಗಿಸಿಕೊಂಡು ಉಡುಪಿ-ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಆ ನಂತರ ಗೋವಾದಲ್ಲೂ ಶೂಟಿಂಗ್ ನಡೆಯಲಿದೆ.
ದಸರೆಗೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. “ಕಡ್ಡಿಪುಡಿ’ ಚಿತ್ರದ ನಂತರ ಸೂರಿ ಹಾಗೂ ಶಿವರಾಜಕುಮಾರ್ ಜೊತೆಯಾಗಿರುವ ಚಿತ್ರ ಇದಾಗಿದ್ದು, ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿರೋದಂತೂ ಸುಳ್ಳಲ್ಲ. ಶಿವಣ್ಣ ಕೂಡಾ ಈ ಚಿತ್ರದಲ್ಲಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ಭಾವನಾ ಹಾಗೂ ಮಾನ್ವಿತಾ ನಟಿಸಿದ್ದು, ಧನಂಜಯ್, ವಸಿಷ್ಠ ಇಲ್ಲಿ ವಿಲನ್ ಆಗಿ ನಟಿಸಿದ್ದಾರೆ.